ಕೋಲ್ಕತಾ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಭಾರತೀಯ ಚುನಾವಣಾ ಆಯೋಗದ ಮಾಹಿತಿ ತಂತ್ರಜ್ಞಾನ ವಿಭಾಗವು ಸಿದ್ಧಪಡಿಸಿರುವ ವೆಬ್‌ಸೈಟ್‌ಗಳಲ್ಲಿ ಗಂಭೀರ ದೋಷಗಳಿವೆ ಎಂದು ಹತ್ತಕ್ಕೂ ಅಧಿಕ ನ್ಯಾಯಮಂಡಳಿಗಳ ನ್ಯಾಯಾಧೀಶರು ಆರೋಪಿಸಿದ್ದಾರೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿರುವ 27 ಲಕ್ಷ ಮತದಾರರು ಸೇರಿದಂತೆ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿತ್ತು.
ಸಂಬಂಧಪಟ್ಟ ಪಕ್ಷಗಾರರಿಗೆ ನೋಟಿಸ್ ಜಾರಿ ಮಾಡಲು ಈ ವೆಬ್‌ಸೈಟ್ ಅವಕಾಶ ನೀಡುತ್ತಿಲ್ಲ, ಇದರಿಂದಾಗಿ ಮೇಲ್ಮನವಿಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂಬುದಾಗಿ ನ್ಯಾಯಾಧೀಶರು ದೂರಿದ್ದಾರೆ ಎನ್ನುವುದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. ಮೇಲ್ಮನವಿ ಸಲ್ಲಿಸಿದ ಮತದಾರರ ಹೆಚ್ಚುವರಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು, ಅವರ ಆನ್‌ಲೈನ್ ವಿಚಾರಣೆ ನಡೆಸಲು ಅಥವಾ ಪಟ್ಟಿಯಿಂದ ಅಳಿಸಲಾದ ಮತದಾರರನ್ನು ಮತ್ತೆ ಸೇರಿಸಲು ಈ ವೆಬ್‌ಸೈಟ್ ನ್ಯಾಯಮಂಡಳಿಗಳಿಗೆ ಅವಕಾಶ ನೀಡುತ್ತಿಲ್ಲ. ಕೊನೆಗೆ, ನ್ಯಾಯಮಂಡಳಿಗಳು ನೀಡಿದ ಆದೇಶಗಳ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೂಡ ಈ ವೆಬ್‌ಸೈಟ್ ಬಿಡುತ್ತಿಲ್ಲ ಎಂದು ನ್ಯಾಯಾಧೀಶರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ, ಎಸ್‌ಐಆರ್‌ಗೆ ಸಂಬಂಧಿಸಿದ 19 ನ್ಯಾಯಮಂಡಳಿಗಳಿವೆ. ಈ ಪೈಕಿ 10ಕ್ಕೂ ಅಧಿಕ ನ್ಯಾಯಮಂಡಳಿಗಳ ನ್ಯಾಯಾಧೀಶರು ಆಗಸ್ಟ್ 11 ರಂದು ನಡೆಸಿದ ಸಭೆಯ ನಿರ್ಣಯಗಳಲ್ಲಿ ಈ ದೋಷಗಳನ್ನು ದಾಖಲಿಸಲಾಗಿದೆ.
ಈ ನಿರ್ಣಯಗಳನ್ನು ಭಾರತೀಯ ಚುನಾವಣಾ ಆಯೋಗ ಮತ್ತು ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಈ ಅಡೆತಡೆಗಳು ಮತದಾರರ ಪಟ್ಟಿಯಿಂದ ಹೊರಬಿದ್ದಿರುವ ನಾಗರಿಕರಿಗೆ ನ್ಯಾಯಯುತ ವಿಚಾರಣೆ ಲಭಿಸದಂತೆ ಅಡ್ಡಿಪಡಿಸುತ್ತಿವೆ ಎಂದು ನ್ಯಾಯಮಂಡಳಿಗಳ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಧೀಶರು ವ್ಯಕ್ತಪಡಿಸಿರುವ ಕಳವಳಗಳಿಗೆ ಪ್ರತಿಕ್ರಿಯೆ ಕೋರಿ ಅಥವಾ ಅವುಗಳನ್ನು ಇತ್ಯರ್ಥಪಡಿಸಲಾಗಿದೆಯೇ ಎಂದು ಕೇಳಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಅಕ್ಟೋಬರ್ 1ರಂದು ಭಾರತೀಯ ಚುನಾವಣಾ ಆಯೋಗ ಮತ್ತು ಕಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಇಮೇಲ್ ಕಳುಹಿಸಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ನ್ಯಾಯಾಧೀಶರು ದಾಖಲಿಸಿದ ಪ್ರಮುಖ ಲೋಪಗಳು
ಆಗಸ್ಟ್ 11 ರ ಸಭೆಯ ನಡಾವಳಿಗಳಲ್ಲಿ ನ್ಯಾಯಾಧೀಶರು ಎದುರಿಸುತ್ತಿರುವ ಸವಾಲುಗಳನ್ನು ದಾಖಲಿಸಲಾಗಿದೆ. ಆ ನಡಾವಳಿಯ ಪ್ರಮುಖ ಭಾಗಗಳು ಹೀಗಿವೆ:
ನೋಟಿಸ್ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ: ಪಕ್ಷಗಾರರಿಗೆ ನೇರವಾಗಿ ಅಥವಾ ಸೂಕ್ತ ಮಾರ್ಗದ ಮೂಲಕ ನೋಟಿಸ್ ಜಾರಿ ಮಾಡಲು ವೆಬ್‌ಸೈಟ್‌ನಲ್ಲಿ ಸಮರ್ಪಕ ವ್ಯವಸ್ಥೆಯನ್ನು ಮಾಡುವಂತೆ ಹಲವು ಬಾರಿ ವಿನಂತಿಸಿದರೂ ಮತ್ತು ನೆನಪಿಸಿದರೂ ಇಂದಿನವರೆಗೂ ಯಾವುದೇ ವ್ಯವಸ್ಥೆಯಾಗಿಲ್ಲ. 2026 ಮೇ ತಿಂಗಳಲ್ಲಿ, ನಮ್ಮಲ್ಲಿ ಕೆಲವರು ಪಕ್ಷಗಾರರಿಗೆ ನೀಡಬೇಕಾದ ನೋಟಿಸ್‌ನ ನಮೂನೆಯನ್ನು ಸಹ ಅನುಮೋದಿಸಿದ್ದೆವು. ಆದರೆ ಅದು ಇಂದಿನವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
ದಾಖಲೆಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ: ಅಪ್‌ಲೋಡ್ ಮಾಡಲಾದ ದಾಖಲೆಗಳು ಗಣತಿ ನಮೂನೆಗೆ ಅನುಗುಣವಾಗಿಲ್ಲ ಎನ್ನುವುದು ಕಂಡುಬಂದಾಗ ಅಥವಾ ನ್ಯಾಯಮಂಡಳಿಗಳಿಗೆ ಹೆಚ್ಚುವರಿ ದಾಖಲೆಗಳ ಅಗತ್ಯವಿದ್ದಾಗ, ಅವುಗಳನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಯಾವುದೇ ವ್ಯವಸ್ಥೆಯಿಲ್ಲ. ವೆಬ್‌ಸೈಟ್‌ನಲ್ಲಿ ಇಂತಹ ವ್ಯವಸ್ಥೆ ಇಲ್ಲದ ಕಾರಣ, ಪ್ರತಿಯೊಂದು ನ್ಯಾಯಮಂಡಳಿಯು ಇಮೇಲ್ ಮೂಲಕ ನೋಟಿಸ್ ಜಾರಿ ಮಾಡಲು ಪ್ರಯತ್ನಿಸುತ್ತಿವೆ. ಆದರೆ ಅದರಿಂದ ಬರುತ್ತಿರುವ ಸ್ಪಂದನೆ ತೀರಾ ನಗಣ್ಯವಾಗಿದೆ.
ಆನ್‌ಲೈನ್ ವಿಚಾರಣೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ: ಒಂದು ವೇಳೆ, ಆನ್‌ಲೈನ್ ಮೂಲಕ ವಿಚಾರಣೆ ನಡೆಸಲು ನ್ಯಾಯಮಂಡಳಿಗಳು ಬಯಸಿದರೆ ಯಾವುದೇ ವ್ಯವಸ್ಥೆಯಿಲ್ಲ. ಮತದಾರನನ್ನು ಪಟ್ಟಿಗೆ ಮರುಸೇರ್ಪಡೆಗೊಳಿಸಬೇಕು ಎಂಬ ತೀರ್ಪನ್ನು ನ್ಯಾಯಮಂಡಳಿ ನೀಡಿದರೆ, ಹಾಗೆ ಮಾಡಲು ವೆಬ್‌ಸೈಟ್ ಅವಕಾಶ ನೀಡುವುದಿಲ್ಲ.
ಮೇಲ್ಮನವಿದಾರರಿಗೆ ಆದೇಶದ ಪ್ರತಿ ನೀಡಲು ಸಾಧ್ಯವಾಗುತ್ತಿಲ್ಲ: ತಮ್ಮ ಹೆಸರನ್ನು ಪಟ್ಟಿಯಿಂದ ಏಕೆ ತೆಗೆದುಹಾಕಲಾಗಿದೆ ಅಥವಾ ಸೇರಿಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಮೇಲ್ಮನವಿದಾರರು ಬಯಸಿದರೆ, ನ್ಯಾಯಮಂಡಳಿಯ ಆದೇಶದ ಪ್ರಮಾಣೀಕೃತ ಪ್ರತಿಯನ್ನು ಪಡೆಯಲು ಅಥವಾ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಯಾವುದೇ ವಿಧಾನವಿಲ್ಲ. ಸುಪ್ರೀಂ ಕೋರ್ಟ್ ತನ್ನ ಎಪ್ರಿಲ್ 1 ರ ಆದೇಶದಲ್ಲಿ, ಮೇಲ್ಮನವಿಗಳನ್ನು ಇತ್ಯರ್ಥಪಡಿಸುವ ಮುನ್ನ ಮೇಲ್ಮನವಿದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದಕ್ಕೆ ಕಾರಣಗಳನ್ನು ತಿಳಿಸಬೇಕು ಮತ್ತು ದಾಖಲೆಗಳನ್ನು ಮರುಪರಿಶೀಲಿಸಬೇಕು ಎಂಬುದಾಗಿ ಸೂಚಿಸಿತ್ತು. ಹಾಗಾಗಿ, ಈ ಪ್ರಕ್ರಿಯೆ ಮಹತ್ವದ್ದಾಗಿದೆ.
ಭೌತಿಕ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಸಾಧ್ಯವಾಗುತ್ತಿಲ್ಲ: ಜಿಲ್ಲಾ ಮ್ಯಾಜಿಸ್ಟ್ರೇಟ್/ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೇರವಾಗಿ ಸಲ್ಲಿಸಲಾಗಿರುವ ಮೇಲ್ಮನವಿಗಳ ಕುರಿತ ಅನಿಶ್ಚಿತತೆಯ ಬಗ್ಗೆ ನ್ಯಾಯಾಧೀಶರು ಬೆಟ್ಟು ಮಾಡಿದ್ದಾರೆ. ''ಈ ಮೇಲ್ಮನವಿಗಳನ್ನು ಡಿಜಿಟಲೀಕರಣಗೊಳಿಸದ ಕಾರಣ ಅವುಗಳ ದಾಖಲೆಗಳನ್ನು ಇಡಲು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲ. ಅವರ ಮೇಲ್ಮನವಿಗಳನ್ನು ಸೂಕ್ತ ವೇದಿಕೆಗೆ ತರದಿದ್ದರೆ, ಅಂತಹ ನಾಗರಿಕರಿಗೆ ಅನ್ಯಾಯವಾಗುತ್ತದೆ'' ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ಗೆ 6 ತಿಂಗಳ ಹಿಂದೆಯೇ ಗೊತ್ತಿತ್ತು:
ಗಮನಿಸಬೇಕಾದ ಸಂಗತಿಯೆಂದರೆ, ಈ ಸಮಸ್ಯೆಯನ್ನು ಪಶ್ಚಿಮ ಬಂಗಾಳದ ಮತದಾರರಾದ ಮೊಸ್ತಾರಿ ಬಾನು ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಎಪ್ರಿಲ್ 6 ರಂದೇ ಗಮನಿಸಿತ್ತು.
''ಮೇಲ್ಮನವಿಗಳನ್ನು ECI NET ಮೂಲಕ ಆನ್‌ಲೈನ್‌ನಲ್ಲಿ ಅಥವಾ ಜಿಲ್ಲಾಧಿಕಾರಿ/ಜಿಲ್ಲಾ ವಿಭಾಗೀಯಾಧಿಕಾರಿ/ಎಸ್‌ಡಿಒ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸಬಹುದು ಹಾಗೂ ಈ ಅಧಿಕಾರಿಗಳು ಆ ಮೇಲ್ಮನವಿಗಳನ್ನು ಆದಷ್ಟು ಬೇಗ ಡಿಜಿಟಲೀಕರಣಗೊಳಿಸಿ ECI NET ಗೆ ಅಪ್‌ಲೋಡ್ ಮಾಡಬೇಕು ಎಂಬ ಅಧಿಸೂಚನೆಯನ್ನು ಚುನವಣಾ ಆಯೋಗ ಈಗಾಗಲೇ 20.03.2026 ರಂದು ಹೊರಡಿಸಿದೆ'' ಎಂದು ಸುಪ್ರೀಂ ಕೋರ್ಟ್ ತನ್ನ ಎಪ್ರಿಲ್ 6 ರ ಆದೇಶದಲ್ಲಿ ಹೇಳಿತ್ತು.



