ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಸಮಯದಲ್ಲಿ ಮತದಾರರ ಪಟ್ಟಿಗಳಲ್ಲಿಯ ದೋಷಗಳು ಮತ್ತು ವ್ಯತ್ಯಾಸಗಳನ್ನು ಪತ್ತೆಹಚ್ಚಲು ಬಳಸಲಾಗಿದ್ದ ತಂತ್ರಾಂಶದ ಹೆಸರು ಮತ್ತು ಆವೃತ್ತಿಯನ್ನು ಬಹಿರಂಗಪಡಿಸಲು ಚುನಾವಣಾ ಆಯೋಗವು (ಇಸಿ) ನಿರಾಕರಿಸಿದೆ. ಆರ್‌ಟಿಐ ಕಾಯ್ದೆಯಡಿ 'ವಾಣಿಜ್ಯಿಕ ವಿಶ್ವಾಸಾರ್ಹತೆ, ವ್ಯಾಪಾರ ಗುಟ್ಟುಗಳು ಮತ್ತು ಬೌದ್ಧಿಕ ಆಸ್ತಿ'ಗೆ ಸಂಬಂಧಿಸಿದ ಮಾಹಿತಿಗೆ ವಿನಾಯಿತಿಯನ್ನು ಅದು ಉಲ್ಲೇಖಿಸಿದೆ.
ಎಸ್‌ಐಆರ್‌ಗಾಗಿ ಯಾವುದೇ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿಲ್ಲ ಅಥವಾ ಖರೀದಿಸಿಲ್ಲ ಎಂದು ಚುನಾವಣಾ ಆಯೋಗವು ಸಾಮಾಜಿಕ ಕಾರ್ಯಕರ್ತ ಎಂ.ಎ.ಮುಜೀಬ್ ಅಯ್ಯೂಬ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಅ.16ರಂದು ನೀಡಿರುವ ಉತ್ತರದಲ್ಲಿ ತಿಳಿಸಿದೆ.
ಸಂಬಂಧಪಟ್ಟ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಗಳೇ ವಾಸ್ತವಾಂಶಗಳು ಮತ್ತು ದಾಖಲೆಗಳ ಆಧಾರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಥವಾ ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಆಯೋಗವು ಹೇಳಿದೆ.
ತಂತ್ರಾಂಶ ಅಥವಾ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಗಳು ಪರಿಶೀಲನೆ, ತಿದ್ದುಪಡಿ ಅಥವಾ ತೆಗೆದುಹಾಕುವಿಕೆಗಾಗಿ ಮತದಾರರ ವಿವರಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತವೆಯೇ ಮತ್ತು ಅರ್ಹ ಮತದಾರರ ಹೆಸರುಗಳು ತಪ್ಪಾಗಿ ತೆಗೆದುಹಾಕಲ್ಪಡುವುದನ್ನು ತಡೆಯಲು ಯಾವ ಸುರಕ್ಷತಾ ಕ್ರಮಗಳು ಅಸ್ತಿತ್ವದಲ್ಲಿವೆ ಎಂದೂ ಅಯ್ಯೂಬ್ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಯಾವುದೇ ಹಂತದಲ್ಲಿ ಎಐ, ಮೆಷಿನ್ ಲರ್ನಿಂಗ್ ಅಥವಾ ಸ್ವಯಂಚಾಲಿತ ನಿರ್ಧಾರ ಸಾಧನಗಳನ್ನು ಬಳಸಲಾಗಿತ್ತೇ ಎಂದೂ ಕೇಳಿದ್ದರು.
ಕೋರಲಾಗಿರುವ ಕೆಲವು ಮಾಹಿತಿಗಳು ಸ್ಪಷ್ಟನೆ ಕೋರುವ ಸ್ವರೂಪದಲ್ಲಿದ್ದು,ಅವು ಆರ್‌ಟಿಐ ಕಾಯ್ದೆಯಡಿ 'ಮಾಹಿತಿ' ಎಂಬ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ ಎಂದು ಆಯೋಗವು ತನ್ನ ಉತ್ತರದಲ್ಲಿ ತಿಳಿಸಿದೆ.
ಗುರುತಿಸಲಾದ ದೋಷಗಳನ್ನು ಯಾರು ಪರಿಶೀಲಿಸುತ್ತಾರೆ ಎಂಬ ಪ್ರಶ್ನೆಗೆ, ವ್ಯಕ್ತಿಯ ಜೀವಕ್ಕೆ ಅಥವಾ ಶಾರೀರಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಅಥವಾ ರಹಸ್ಯ ಮೂಲಗಳನ್ನು ಬಹಿರಂಗಪಡಿಸುವ ಮಾಹಿತಿಗೆ ಆರ್‌ಟಿಐ ಕಾಯ್ದೆಯಲ್ಲಿನ ವಿನಾಯಿತಿಯನ್ನು ಉಲ್ಲೇಖಿಸಿ ಉತ್ತರಿಸಲು ಆಯೋಗವು ನಿರಾಕರಿಸಿದೆ.
ಮತದಾರರ ನೋಂದಣಿ ಮತ್ತು ಸಂಬಂಧಿತ ಸೇವೆಗಳಿಗಾಗಿರುವ ತನ್ನ ಆನ್‌ಲೈನ್ ವೇದಿಕೆ 'ಇಸಿಐನೆಟ್' ಕುರಿತು ಮಾಹಿತಿಯನ್ನು ಬಚ್ಚಿಡುವುದನ್ನು ಆಯೋಗವು ಮುಂದುವರಿಸಿದೆ ಎಂದು ಕಾಂಗ್ರೆಸ್ ರವಿವಾರ ಆರೋಪಿಸಿದೆ.
ಇಸಿಐನೆಟ್ ತಂತ್ರಾಂಶ ಮತ್ತು ಎಐ ಬಳಕೆಯ ಕುರಿತು ಪಾರದರ್ಶಕತೆಯ ಕೊರತೆಯು ನಾಗರಿಕರಲ್ಲಿನ ಇಡೀ ಪ್ರಕ್ರಿಯೆಯ ಮೇಲಿನ ನಂಬಿಕೆಯನ್ನು ಹಾಳುಗೆಡವಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಕೇಂದ್ರೀಕೃತವಾಗಿ ನಡೆದಿರುವ ಭಾರೀ ಅಕ್ರಮಗಳ ಸತ್ಯಾಂಶ ಹೊರಬರುತ್ತದೆ ಎಂಬ ಕಾರಣಕ್ಕೆ ಆಯೋಗವು ಮಾಹಿತಿ ನೀಡಲು ನಿರಾಕರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.



