ನವದೆಹಲಿ: ಸೈಬರ್ ದಾಳಿಯಿಂದ 3,897 ಗ್ರಾಹಕರ ವೈಯಕ್ತಿಕ ದಾಖಲೆಗಳು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ, ಪ್ರಭಾವಿತ ಎಲ್ಲ ಗ್ರಾಹಕರಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತಿಳಿಸಿದೆ. ಗ್ರಾಹಕರ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಭರವಸೆ ನೀಡಿದೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಸ್ಬಿಐ, ಡೇಟಾ ಬಹಿರಂಗಗೊಂಡಿರುವುದು ಪತ್ತೆಯಾದ ಎಲ್ಲ ಗ್ರಾಹಕರಿಗೆ ಇಮೇಲ್ ಮತ್ತು ವಾಟ್ಸಾಪ್ ಮೂಲಕ ಪ್ರತ್ಯೇಕವಾಗಿ ಮಾಹಿತಿ ನೀಡಲಾಗಿದೆ ಎಂದು ಹೇಳಿದೆ.
'ಇತ್ತೀಚಿನ ಸೈಬರ್ ಘಟನೆಗೆ ಸಂಬಂಧಿಸಿದಂತೆ, ಡೇಟಾ ಬಹಿರಂಗಗೊಂಡಿರುವುದು ಪತ್ತೆಯಾದ ಎಲ್ಲ ಗ್ರಾಹಕರಿಗೆ ಬ್ಯಾಂಕ್ ಪ್ರತ್ಯೇಕವಾಗಿ ಇಮೇಲ್ ಮತ್ತು/ಅಥವಾ ವಾಟ್ಸಾಪ್ ಮೂಲಕ ಮಾಹಿತಿ ನೀಡಿದೆ. ಗ್ರಾಹಕರ ಖಾತೆಯಲ್ಲಿರುವ ಬ್ಯಾಲೆನ್ಸ್ ಮತ್ತು ಹಣ ಸುರಕ್ಷಿತವಾಗಿದೆ ಎಂಬುದನ್ನು ಪುನರುಚ್ಚರಿಸುತ್ತೇವೆ' ಎಂದು ಬ್ಯಾಂಕ್ ತಿಳಿಸಿದೆ.
OTP, ಪಿನ್ ಹಂಚಿಕೊಳ್ಳದಂತೆ ಸೂಚನೆ
ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಗ್ರಾಹಕರು ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಅಭ್ಯಾಸಗಳನ್ನು ಅನುಸರಿಸಬೇಕು. ಆನ್ಲೈನ್ ವಹಿವಾಟು ನಡೆಸುವಾಗ ಎಚ್ಚರಿಕೆ ವಹಿಸಬೇಕು ಎಂದು ಎಸ್ಬಿಐ ಸಲಹೆ ನೀಡಿದೆ.
ಒಟಿಪಿ, ಪಿನ್ ಅಥವಾ ಪಾಸ್ವರ್ಡ್ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅನುಮಾನಾಸ್ಪದ ಕರೆಗಳು, ಸಂದೇಶಗಳು ಮತ್ತು ಇಮೇಲ್ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಬ್ಯಾಂಕ್ ಸೂಚಿಸಿದೆ.
ಡಾರ್ಕ್ ವೆಬ್ ನಲ್ಲಿ ದಾಖಲೆಗಳ ಮಾರಾಟ?
ಸೈಬರ್ ದಾಳಿಯಿಂದ 3,897 ಗ್ರಾಹಕರ ದಾಖಲೆಗಳು ಬಹಿರಂಗಗೊಂಡಿವೆ ಎಂದು ಎಸ್ಬಿಐ ತಿಳಿಸಿದೆ. ಈ ದಾಖಲೆಗಳಲ್ಲಿ ಹೆಸರು, ಇಮೇಲ್ ವಿಳಾಸ, ಫೋನ್ ಸಂಖ್ಯೆ ಮತ್ತು ಸಾಲದ ವಿವರಗಳು ಸೇರಿದಂತೆ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ (ಪಿಐಐ) ಸೇರಿದೆ.
'ಸಿರಿಯುಸಿಮ್' ಎಂಬ ಹ್ಯಾಕರ್ ಗುಂಪು ಎಸ್ಬಿಐನ ವ್ಯವಸ್ಥೆಗಳಿಗೆ ನುಸುಳಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ, ಬಹಿರಂಗಗೊಂಡ ಮಾಹಿತಿಯನ್ನು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಇಟ್ಟಿರುವುದಾಗಿಯೂ ಹೇಳಿದೆ. ಆದರೆ, ಸೈಬರ್ ದಾಳಿಯ ಮೂಲದ ಬಗ್ಗೆ ಎಸ್ಬಿಐ ಯಾವುದೇ ಮಾಹಿತಿ ನೀಡಿಲ್ಲ.



