ನವದೆಹಲಿ: ಹೆದ್ದಾರಿಗಳಲ್ಲಿ ನಿಲುಗಡೆ ಮಾಡಲಾದ ವಾಹನಗಳನ್ನು ಪತ್ತೆ ಹಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ವಿದ್ಯುನ್ಮಾನ ಕಣ್ಗಾವಲು ಕಾರ್ಯವಿಧಾನವೊಂದನ್ನು ಹೊಂದುವುದು ಯಾಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
2025ರ ನವೆಂಬರ್‌ನಲ್ಲಿ ರಾಜಸ್ಥಾನದ ಫಲೋದಿ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 15 ಜನರು ಮೃತರಾದ ಸಂಬಂಧ ದಾಖಲಿಸಿಕೊಳ್ಳಲಾದ ಸ್ವಯಂ ಪ್ರೇರಿತ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್, ಆಗಸ್ಟಿನ್ ಜಾರ್ಜ್ ಮಸೀಹ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಮಂಗಳವಾರ ವಿಚಾರಣೆ ನಡೆಸಿತು.
ಪ್ರಕರಣದ ಅಮಿಕಸ್ ಕ್ಯೂರಿ ಆಗಿರುವ ಎಎನ್‌ಎಸ್ ನಾಡಕರ್ಣಿ ಅವರು, ಹೆದ್ದಾರಿಗಳಲ್ಲಿ ವಾಹನ ನಿಲುಗಡೆಯ ಕಾರಣಕ್ಕೆ ಈಚೆಗೆ ಸಂಭವಿಸಿದ ಅಪಘಾತಗಳ ಕುರಿತು ನ್ಯಾಯಪೀಠದ ಗಮನಕ್ಕೆ ತಂದರು.
'ಎಲ್ಲ ಸಂಪನ್ಮೂಲಗಳನ್ನು ಹೊಂದಿರುವ ಪ್ರಾಧಿಕಾರವು, ಹೆದ್ದಾರಿಗಳಲ್ಲಿ ನಿಂತಿರುವ ಅಥವಾ ನಿಲುಗಡೆ ಮಾಡಿರುವ ವಾಹನಗಳನ್ನು ತ್ವರಿತವಾಗಿ ಪತ್ತೆಹಚ್ಚುವ ವ್ಯವಸ್ಥೆ ಕಂಡುಕೊಳ್ಳುವುದು ಸಾಧ್ಯವಿಲ್ಲವೇ' ಎಂದು ಕೇಳಿದ ಪೀಠವು, ವಿಚಾರಣೆಯನ್ನು ಅ.13ಕ್ಕೆ ಮುಂದೂಡಿತು. ಹೆದ್ದಾರಿಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು ಸಲ್ಲಿಕೆಯಾದ ಅರ್ಜಿಗಳನ್ನೂ ಇತ್ಯರ್ಥಪಡಿಸುವುದಾಗಿ ನ್ಯಾಯಾಲಯವು ಹೇಳಿದೆ.



