ನವದೆಹಲಿ: ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ 'ಇಂಡಿಯಾ' ಮೈತ್ರಿಕೂಟದ ಸಂಸದರು ದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿವರೆಗೆ ಇಂದು (ಮಂಗಳವಾರ) ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದಾರೆ.
ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಯೋಜನೆಯಂತೆ ಸಂಸತ್ ಸಂಕೀರ್ಣದಿಂದ ಬೆಳಗ್ಗೆ 11ಕ್ಕೆ ಆರಂಭವಾದ ಮೆರವಣಿಗೆಯನ್ನು, ಭದ್ರತಾ ಸಿಬ್ಬಂದಿಯು ಅಕಾಶವಾಣಿ ಭವನದ ಸಮೀಪ (ಚುನಾವಣಾ ಆಯೋಗದ ಕಚೇರಿಗೆ 300 ಮೀಟರ್ ದೂರದಲ್ಲೇ) ತಡೆದಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಸಲುವಾಗಿ ಚುನಾವಣಾ ಆಯೋಗದ ಕಚೇರಿ ಸುತ್ತ ಹಾಗೂ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಹಲವು ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿವೆ. ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು, ಪೋಸ್ಟರ್‌ಗಳನ್ನು ಹಿಡಿದಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಸುಮಾರು 19 ಪಕ್ಷಗಳ ನಾಯಕರು ಸೆಪ್ಟೆಂಬರ್ 30ರಂದು ದೆಹಲಿಯಲ್ಲಿ ಸಭೆ ನಡೆಸಿದ್ದರು. ಅದರಂತೆ, ವಿಪಕ್ಷಗಳ ಸಂಸದರು ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮೆರವಣಿಗೆ ನಡೆಸುವುದಾಗಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಎಸ್‌ಐಆರ್ ಕುರಿತು ಕಳವಳ ವ್ಯಕ್ತಪಡಿಸುವುದಾಗಿ ಘೋಷಿಸಿದ್ದರು.


