HEALTH TIPS

West Bengal SIR | ಮುಖ್ಯ ಕಾರ್ಯದರ್ಶಿಯನ್ನು 'ವೋಟ್ ಚೋರ್' ಎಂದು ಕರೆಯದಂತೆ ಮಹುವಾ ಮೊಯಿತ್ರಾಗೆ ಕೋರ್ಟ್ ನಿರ್ಬಂಧ

ಕೋಲ್ಕತ್ತ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIಖ) ಪ್ರಕ್ರಿಯೆಯಲ್ಲಿ ಲಕ್ಷಾಂತರ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಅವರನ್ನು 'ವೋಟ್ ಚೋರ್' (ಮತ ಕಳ್ಳ) ಎಂದು ಕರೆಯದಂತೆ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಅಲಿಪೋರ್ ನ್ಯಾಯಾಲಯ ನಿರ್ಬಂಧ ವಿಧಿಸಿದೆ. 


ಅಗರ್ವಾಲ್ ವಿರುದ್ಧದ ಮಾನಹಾನಿಕರ ಪೋಸ್ಟ್‌ ಗಳನ್ನು 24 ಗಂಟೆಯೊಳಗೆ ತೆಗೆದುಹಾಕುವಂತೆಯೂ ಆದೇಶಿಸಿದೆ.

'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಮೊಯಿತ್ರಾ ಪ್ರಕಟಿಸಿದ್ದ ಪೋಸ್ಟ್‌ ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ. 2026ರ ಅಕ್ಟೋಬರ್ 3 ಮತ್ತು 6ರಂದು ಪ್ರಕಟಿಸಿದ ಪೋಸ್ಟ್‌ಗಳಲ್ಲಿ ಅಗರ್ವಾಲ್ ಅವರನ್ನು 'ವೋಟ್ ಚೋರ್' ಎಂದು ಕರೆದಿದ್ದ ಮೊಯಿತ್ರಾ, ಮತದಾರರನ್ನು ಕಾನೂನುಬಾಹಿರವಾಗಿ ಮತದಾನದ ಹಕ್ಕಿನಿಂದ ವಂಚಿಸಿದ್ದಕ್ಕೆ ಅವರೇ ಸಂಪೂರ್ಣ ಜವಾಬ್ದಾರರು ಎಂದು ಆರೋಪಿಸಿದ್ದರು.

ಅಗರ್ವಾಲ್ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು, ಮರುಪೋಸ್ಟ್ ಮಾಡುವುದು ಅಥವಾ ಪುನರಾವರ್ತಿಸುವುದನ್ನು ನ್ಯಾಯಾಲಯ ನಿಷೇಧಿಸಿದೆ.

ಆದರೆ, SIR ಪ್ರಕ್ರಿಯೆ ಅಥವಾ ಅಧಿಕೃತ ನಿರ್ಧಾರಗಳ ಕುರಿತು ನ್ಯಾಯಯುತ ಟೀಕೆಗಳನ್ನು ಮಾಡುವುದಕ್ಕೆ ಈ ಆದೇಶ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಲಿಖಿತ ಆಕ್ಷೇಪಣೆ ಸಲ್ಲಿಸಲು ಹಾಗೂ ಆದೇಶವನ್ನು ರದ್ದುಗೊಳಿಸುವಂತೆ, ಬದಲಾಯಿಸುವಂತೆ ಅಥವಾ ಹಿಂಪಡೆಯುವಂತೆ ಕೋರಿ ಅರ್ಜಿ ಸಲ್ಲಿಸಲು ಮೊಯಿತ್ರಾ ಅವರಿಗೆ ಅವಕಾಶ ನೀಡಿದೆ.

10 ಕೋಟಿ ರೂ. ಪರಿಹಾರಕ್ಕೆ ಆಗ್ರಹ :

ಅಗರ್ವಾಲ್ ಈ ಹಿಂದೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಯಾಗಿ (CEO) ಕಾರ್ಯನಿರ್ವಹಿಸಿದ್ದರು. ಮೊಯಿತ್ರಾ ಅವರ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಅವರು ಅಕ್ಟೋಬರ್ 9ರಂದು ಕಾನೂನು ನೋಟಿಸ್ ಕಳುಹಿಸಿ, ಬೇಷರತ್ ಕ್ಷಮೆಯಾಚನೆ ಹಾಗೂ ಮಾನಹಾನಿಗಾಗಿ 10 ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ಮೊಯಿತ್ರಾ ಅವರು 24 ಗಂಟೆಯೊಳಗೆ ಪೋಸ್ಟ್‌ಗಳನ್ನು ತೆಗೆದುಹಾಕದಿದ್ದರೆ, 'ಇನ್ಫರ್ಮೇಷನ್ ಟೆಕ್ನಾಲಜಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021'ರ ನಿಯಮ 3(1)(d) ಹಾಗೂ 'ಇನ್ಫರ್ಮೇಷನ್ ಟೆಕ್ನಾಲಜಿ ಕಾಯ್ದೆ, 2000'ರ ಸೆಕ್ಷನ್ 79(3)(b) ಅಡಿಯಲ್ಲಿ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಕೋರಿ ನ್ಯಾಯಾಲಯದ ಮಧ್ಯಂತರ ಆದೇಶವನ್ನು 'ಎಕ್ಸ್' ವೇದಿಕೆಗೆ ತಿಳಿಸಲು ಅಗರ್ವಾಲ್ ಅವರಿಗೆ ಅನುಮತಿ ನೀಡಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries