HEALTH TIPS

18 ವರ್ಷ ಜೈಲುವಾಸ ಅನುಭವಿಸಿ ಭಯೋತ್ಪಾದನೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವ್ಯಕ್ತಿಯ ಗುಂಡಿಕ್ಕಿ ಹತ್ಯೆ

ರಾಂಪುರ:   ಭಯೋತ್ಪಾದನೆ ಪ್ರಕರಣದಲ್ಲಿ ಸುಮಾರು 18 ವರ್ಷಗಳ ಕಾಲ ಜೈಲಿನಲ್ಲಿದ್ದು, ಅಲಹಾಬಾದ್ ಹೈಕೋರ್ಟ್‌ನಿಂದ ಪ್ರಮುಖ ಆರೋಪಗಳಲ್ಲಿ ಖುಲಾಸೆಗೊಂಡಿದ್ದ ಮುಹಮ್ಮದ್ ಶರೀಫ್ ಅವರನ್ನು ಉತ್ತರ ಪ್ರದೇಶದ ರಾಂಪುರದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.  


ಪೊಲೀಸರು ಪರಿಶೀಲನೆಗಾಗಿ ಠಾಣೆಗೆ ಕರೆಸಿಕೊಂಡಿದ್ದು, ಅಲ್ಲಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಹತ್ಯೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು Maktoob Media ವರದಿ ಮಾಡಿದೆ.

2008ರ ರಾಂಪುರ ಸಿಆರ್‌ಪಿಎಫ್ (CRPF) ಗ್ರೂಪ್ ಸೆಂಟರ್ ಮೇಲಿನ ದಾಳಿ ಪ್ರಕರಣದಲ್ಲಿ ಕೊಲೆ ಮತ್ತು ಭಯೋತ್ಪಾದನೆ ಆರೋಪಗಳಿಂದ ಖುಲಾಸೆಗೊಂಡಿದ್ದ ಶರೀಫ್, 2025ರ ನವೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.

ರಾಂಪುರದ ಬದನ್‌ಪುರಿ-ಖಜೂರಿಯಾ ಗ್ರಾಮದ ನಿವಾಸಿಯಾಗಿದ್ದ ಶರೀಫ್, ಮಂಗಳವಾರ ಖಜೂರಿಯಾ ಪ್ರದೇಶದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಶರೀಫ್ ಅವರಿಗೆ 16 ಗುಂಡುಗಳು ತಗುಲಿದ್ದವು ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ಠಾಣೆಗೆ ಪದೇಪದೇ ಕರೆಸಿಕೊಂಡಿದ್ದೇಕೆ?

ಶರೀಫ್ ಪರ ವಕೀಲ ಹಾಗೂ ಮಾನವ ಹಕ್ಕುಗಳ ಸಂಘಟನೆ ರಿಹಾಯಿ ಮಂಚ್ ಅಧ್ಯಕ್ಷ ಮುಹಮ್ಮದ್ ಶೊಯೆಬ್ ಅವರು ಘಟನೆಯ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಶರೀಫ್ ಅವರ ಸಹೋದರ ಶಾಹೀನ್ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ಮಕ್ತೂಬ್ ಮೀಡಿಯಾದೊಂದಿಗೆ ಮಾತನಾಡಿದ ಶೊಯೆಬ್, ಪೊಲೀಸರು ಸೋಮವಾರ ಹಲವು ಬಾರಿ ಕರೆ ಮಾಡಿ ಪರಿಶೀಲನೆಗಾಗಿ ಠಾಣೆಗೆ ಬರುವಂತೆ ಸೂಚಿಸಿದ್ದರು ಎಂದು ತಿಳಿಸಿದ್ದಾರೆ.

ಪೊಲೀಸರ ಸೂಚನೆಯಂತೆ ಶರೀಫ್ ಸಂಜೆ ಸುಮಾರು 4.30ಕ್ಕೆ ಖಜೂರಿಯಾ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ ಅವರನ್ನು ಕರೆಸಿದ್ದ ಠಾಣಾಧಿಕಾರಿ ಮನೋಜ್ ಕುಮಾರ್ ಪಾಂಡೆ ಹಾಗೂ ಕಾನ್‌ಸ್ಟೆಬಲ್ ಬಂಟಿ ಠಾಣೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಸುಮಾರು ಒಂದು ಗಂಟೆಗಳ ಬಳಿಕ, ಸಂಜೆ 5.30ರ ವೇಳೆಗೆ ಠಾಣೆಯಲ್ಲಿದ್ದ ಇತರ ಸಿಬ್ಬಂದಿ ನಂತರ ಬರುವಂತೆ ಸೂಚಿಸಿ ಶರೀಫ್ ಅವರನ್ನು ವಾಪಸ್ ಕಳುಹಿಸಿದ್ದರು.

"ಶರೀಫ್ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರ ತೆರಳುವಷ್ಟರಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ" ಎಂದು ಶೊಯೆಬ್ ತಿಳಿಸಿದ್ದಾರೆ.

"ಶರೀಫ್ ಅವರನ್ನು ಪದೇಪದೇ ಠಾಣೆಗೆ ಕರೆಸಿಕೊಂಡಿದ್ದೇಕೆ? ಕರೆಸಿದ ಅಧಿಕಾರಿಗಳು ಠಾಣೆಯಲ್ಲಿ ಇರಲಿಲ್ಲವೇಕೆ? ಅವರು ಠಾಣೆಯಿಂದ ಹೊರಟಿರುವ ವಿಷಯ ಹಂತಕರಿಗೆ ಹೇಗೆ ತಿಳಿಯಿತು? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ" ಎಂದು ಶೊಯೆಬ್ ಹೇಳಿದ್ದಾರೆ.

ಪೊಲೀಸ್ ಠಾಣೆಗೆ ಕರೆಸಿಕೊಂಡ ಕೆಲವೇ ಸಮಯದಲ್ಲಿ ಹತ್ಯೆಯಾಗಿರುವುದು ಸಂಚಿನ ಅನುಮಾನ ಮೂಡಿಸಿದೆ. ಪ್ರಕರಣದಲ್ಲಿ ಪೊಲೀಸರ ಸಂಭವನೀಯ ಪಾತ್ರವನ್ನೂ ಒಳಗೊಂಡಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಖುಲಾಸೆಯಾದ ಬಳಿಕವೂ ಶಂಕಿತನಂತೆ ನಡೆಸಿಕೊಳ್ಳಲಾಗುತ್ತಿತ್ತು: ಆರೋಪ

ರಿಹಾಯಿ ಮಂಚ್ ಪ್ರಧಾನ ಕಾರ್ಯದರ್ಶಿ ರಾಜೀವ್ ಯಾದವ್ ಅವರು ಶರೀಫ್ ಹತ್ಯೆ ಕುರಿತು ಮಾತನಾಡಿದ್ದು, ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಮುಸ್ಲಿಮರನ್ನು ನ್ಯಾಯಾಲಯ ಖುಲಾಸೆಗೊಳಿಸಿದ ನಂತರವೂ ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

"17ರಿಂದ 18 ವರ್ಷಗಳ ಕಾಲ ಜೈಲಿನಲ್ಲಿದ್ದು, ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರೂ ಶರೀಫ್ ಅವರನ್ನು ಶಂಕಿತನಂತೆ ನಡೆಸಿಕೊಳ್ಳಲಾಗುತ್ತಿತ್ತು. ನ್ಯಾಯಾಲಯವೇ ಖುಲಾಸೆಗೊಳಿಸಿದ ನಂತರ ಮತ್ತೆ ಪೊಲೀಸ್ ಪರಿಶೀಲನೆಯ ಅಗತ್ಯವೇನಿತ್ತು?" ಎಂದು ಯಾದವ್ ಪ್ರಶ್ನಿಸಿದ್ದಾರೆ.

ಶರೀಫ್ ಅವರನ್ನು ಪೊಲೀಸರು ಹಲವು ಬಾರಿ ಠಾಣೆಗೆ ಕರೆಸಿಕೊಂಡಿದ್ದರು ಎಂಬುದನ್ನು ಕುಟುಂಬದ ಸದಸ್ಯರು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಠಾಣೆಯಿಂದ ಕೇವಲ 300 ಮೀಟರ್ ದೂರದಲ್ಲೇ ಶರೀಫ್ ಹತ್ಯೆಯಾಗಿದ್ದಾರೆ. ಅವರು ಠಾಣೆಯಿಂದ ಹೊರಟಿರುವ ಮಾಹಿತಿ ದುಷ್ಕರ್ಮಿಗಳಿಗೆ ಹೇಗೆ ತಲುಪಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಯಾದವ್ ಆಗ್ರಹಿಸಿದ್ದಾರೆ.

ಗೋರಖ್‌ಪುರ ಜೈಲಿನಲ್ಲಿ ಇತ್ತೀಚೆಗೆ ಮೃತಪಟ್ಟ ಪತ್ರಕರ್ತ ಪರ್ವೇಝ್‌ ಅವರ ಪ್ರಕರಣವನ್ನು ಉಲ್ಲೇಖಿಸಿದ ಅವರು, ಶರೀಫ್ ಹತ್ಯೆಯ ಹಿಂದೆಯೂ ಸಂಚು ಇರುವ ಸಾಧ್ಯತೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮರಣದಂಡನೆ ರದ್ದುಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್

2008ರ ರಾಂಪುರ ಸಿಆರ್‌ಪಿಎಫ್ ಕೇಂದ್ರದ ಮೇಲಿನ ದಾಳಿ ಪ್ರಕರಣದಲ್ಲಿ ಶರೀಫ್ ಸೇರಿದಂತೆ ನಾಲ್ವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಅಲಹಾಬಾದ್ ಹೈಕೋರ್ಟ್ 2025ರ ಅಕ್ಟೋಬರ್‌ನಲ್ಲಿ ರದ್ದುಗೊಳಿಸಿತ್ತು.

ಭಯೋತ್ಪಾದನೆ ಮತ್ತು ಕೊಲೆ ಆರೋಪಗಳಿಂದ ನಾಲ್ವರನ್ನು ಖುಲಾಸೆಗೊಳಿಸಿದ್ದ ನ್ಯಾಯಾಲಯ, ಮತ್ತೊಬ್ಬ ಆರೋಪಿ ಜಂಗ್ ಬಹದ್ದೂರ್ ಅವರನ್ನೂ ಪ್ರಮುಖ ಆರೋಪಗಳಿಂದ ಮುಕ್ತಗೊಳಿಸಿತ್ತು.

ಆದರೆ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25(1-A) ಅಡಿಯ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆರೋಪಕ್ಕೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ವಿಭಾಗೀಯ ಪೀಠವು ಆರೋಪಿಗಳು ಈಗಾಗಲೇ ಜೈಲಿನಲ್ಲಿ ಕಳೆದ ಅವಧಿಯನ್ನು ಶಿಕ್ಷೆಗೆ ಹೊಂದಾಣಿಕೆ ಮಾಡುವಂತೆ ನಿರ್ದೇಶಿಸಿತ್ತು.

ಅದರಂತೆ ಶಿಕ್ಷೆಯ ಅವಧಿ ಪೂರ್ಣಗೊಳಿಸಿದ್ದ ಶರೀಫ್ 2025ರ ನವೆಂಬರ್‌ನಲ್ಲಿ ಬರೇಲಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ತಮ್ಮ ಗ್ರಾಮಕ್ಕೆ ಮರಳಿದ್ದರು.

ತನಿಖೆಯಲ್ಲಿನ ಗಂಭೀರ ಲೋಪಗಳನ್ನು ಗುರುತಿಸಿದ್ದ ನ್ಯಾಯಾಲಯ

ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಪೊಲೀಸ್ ತನಿಖೆಯಲ್ಲಿನ ಗಂಭೀರ ಲೋಪಗಳನ್ನು ಗುರುತಿಸಿತ್ತು. ತನಿಖೆಯಲ್ಲಿನ ದೋಷಗಳಿಂದಾಗಿ ಪ್ರಮುಖ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಆರೋಪಿಗಳ ಗುರುತು ದೃಢಪಡಿಸಲು ಅಗತ್ಯವಾದ ಟೆಸ್ಟ್ ಐಡೆಂಟಿಫಿಕೇಶನ್ ಪರೇಡ್ (Test Identification Parade) ನಡೆಸದಿರುವುದು, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಹಾಗೂ ಇತರ ಸಾಕ್ಷ್ಯಗಳ ಸಂರಕ್ಷಣೆಯಲ್ಲಿನ ಲೋಪಗಳನ್ನು ನ್ಯಾಯಾಲಯ ಉಲ್ಲೇಖಿಸಿತ್ತು.

ಬಂದೂಕುಗಳು, ಗುಂಡುಗಳು ಮತ್ತು ಗ್ರೆನೇಡ್‌ಗಳಂತಹ ಪ್ರಮುಖ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂರಕ್ಷಿಸಲಾಗಿತ್ತೇ ಹಾಗೂ ಅವುಗಳ ನಿರ್ವಹಣೆಯ ದಾಖಲೆಗಳು ವಿಶ್ವಾಸಾರ್ಹವಾಗಿವೆಯೇ ಎಂಬುದರ ಬಗ್ಗೆಯೂ ನ್ಯಾಯಾಲಯ ಪ್ರಶ್ನಿಸಿತ್ತು. ತನಿಖೆಯಲ್ಲಿನ ದೋಷಗಳೇ ಆರೋಪಿಗಳ ಖುಲಾಸೆಗೆ ಕಾರಣವಾಗಿವೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು. ತನಿಖೆಯಲ್ಲಿ ಲೋಪ ಎಸಗಿದ ಪೊಲೀಸ್ ಸಿಬ್ಬಂದಿ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಳ್ಳಬಹುದು ಎಂದೂ ನ್ಯಾಯಾಲಯ ಹೇಳಿತ್ತು.

2007ರ ಡಿಸೆಂಬರ್ 31ರ ರಾತ್ರಿ ಆರಂಭವಾಗಿ 2008ರ ಜನವರಿ 1ರ ಮುಂಜಾನೆವರೆಗೆ ನಡೆದ ರಾಂಪುರ ಸಿಆರ್‌ಪಿಎಫ್ ಗ್ರೂಪ್ ಸೆಂಟರ್ ಮೇಲಿನ ದಾಳಿಯಲ್ಲಿ ಏಳು ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಒಬ್ಬ ರಿಕ್ಷಾ ಚಾಲಕ ಮೃತಪಟ್ಟಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿಯನ್ನು ಬಂಧಿಸಲಾಗಿತ್ತು. 2019ರಲ್ಲಿ ವಿಚಾರಣಾ ನ್ಯಾಯಾಲಯ ಶರೀಫ್ ಸೇರಿದಂತೆ ನಾಲ್ವರಿಗೆ ಮರಣದಂಡನೆ ಮತ್ತು ಜಂಗ್ ಬಹದ್ದೂರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಆದರೆ ತನಿಖೆಯಲ್ಲಿನ ಗಂಭೀರ ನ್ಯೂನತೆಗಳನ್ನು ಪರಿಗಣಿಸಿದ ಹೈಕೋರ್ಟ್, 2025ರಲ್ಲಿ ಪ್ರಮುಖ ಆರೋಪಗಳ ಮೇಲಿನ ಶಿಕ್ಷೆಯನ್ನು ರದ್ದುಗೊಳಿಸಿ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

ರಾಂಪುರ ದಾಳಿಯ ನಂತರ ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳು ಹಾಗೂ ಕಾನ್ಪುರದಲ್ಲಿ ಬಾಂಬ್ ತಯಾರಿಸುವಾಗ ಆರೆಸ್ಸೆಸ್ ಸಂಪರ್ಕ ಹೊಂದಿದ್ದರೆನ್ನಲಾದ ವ್ಯಕ್ತಿಗಳು ಮೃತಪಟ್ಟ ಘಟನೆಯನ್ನೂ ರಾಜೀವ್ ಯಾದವ್ ಉಲ್ಲೇಖಿಸಿದ್ದಾರೆ.

ಈ ಪ್ರಕರಣಗಳ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಲಾಗಿದ್ದರೂ, ರಾಜ್ಯ ಸರಕಾರಗಳ ರಾಜಕೀಯ ನಿಲುವುಗಳಿಂದಾಗಿ ತನಿಖೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಉತ್ತರ ಸಿಗದೆ ಉಳಿದಿವೆ ಎಂದು ಅವರು ಆರೋಪಿಸಿದ್ದಾರೆ.

ಸುಮಾರು 18 ವರ್ಷಗಳ ಜೈಲುವಾಸದ ಬಳಿಕ ಪ್ರಮುಖ ಆರೋಪಗಳಿಂದ ಖುಲಾಸೆಗೊಂಡಿದ್ದ ಮುಹಮ್ಮದ್ ಶರೀಫ್, ಪೊಲೀಸ್ ಠಾಣೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಹತ್ಯೆಯಾಗಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹತ್ಯೆಯ ಹಿಂದಿರುವವರನ್ನು ಪತ್ತೆಹಚ್ಚಲು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ರಿಹಾಯಿ ಮಂಚ್ ಆಗ್ರಹಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries