ಜೋಧ್‌ಪುರ: ಶೌಚಾಲಯ ಬಳಕೆಗೆ ಸಂಬಂಧಿಸಿದ ಕ್ಷುಲ್ಲಕ ವಿವಾದದ ಹಿನ್ನೆಲೆಯಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಆತನ ಮರ್ಮಾಂಗದ ಮೂಲಕ ಸುಮಾರು ನಾಲ್ಕು ಅಡಿ ಉದ್ದದ ಪೈಪ್ ಅನ್ನು ತುರುಕಿರುವ ಅಮಾನವೀಯ ಘಟನೆ ನಡೆದಿದೆ. ಯುವಕನ ದೊಡ್ಡ ಕರುಳನ್ನು ಸೀಳಿ ಹೊಟ್ಟೆಯ ಆಳಕ್ಕೆ ನುಗ್ಗಿದ್ದ ಈ ಪೈಪ್, ಆಂತರಿಕ ಅಂಗಗಳಿಗೆ ಗಂಭೀರ ಗಾಯವನ್ನುಂಟುಮಾಡಿತ್ತು.
ಅತ್ಯಂತ ಗಂಭೀರ ಸ್ಥಿತಿಯಲ್ಲಿ ಜೋಧ್‌ಪುರದ ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ವೈದ್ಯರು ಸಂಕೀರ್ಣ ತುರ್ತು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮರುಜನ್ಮ ನೀಡಿದ್ದಾರೆ. 'ಮುಖ್ಯಮಂತ್ರಿ ಆಯುಷ್ಮಾನ್ ಆರೋಗ್ಯ ಯೋಜನೆ' ಅಡಿಯಲ್ಲಿ ಸಂಪೂರ್ಣ ಉಚಿತವಾಗಿ ಈ ಚಿಕಿತ್ಸೆಯನ್ನು ನೀಡಲಾಗಿದೆ.
ನವೆಂಬರ್ 12ರಂದು ಗಂಭೀರ ಗಾಯಗಳೊಂದಿಗೆ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವರವಾದ ವೈದ್ಯಕೀಯ ತಪಾಸಣೆಯಲ್ಲಿ ಗಾಯದ ತೀವ್ರತೆ ತಿಳಿದುಬಂದ ಬೆನ್ನಲ್ಲೇ, ನವೆಂಬರ್ 13ರಂದು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಕರುಳಿಗೆ ಸಣ್ಣ ಗಾಯ ಮಾಡಿ ಪೈಪ್ ಅನ್ನು ಅತ್ಯಂತ ಎಚ್ಚರಿಕೆಯಿಂದ ಹೊರತೆಗೆಯುವ 'ಎಂಟರೊಟೊಮಿ' (Enterotomy) ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ದತ್ ಶರ್ಮಾ ತಿಳಿಸಿದ್ದಾರೆ.
ಪೈಪ್ ಯುವಕನ ದೊಡ್ಡ ಕರುಳಿಗೆ ತೀವ್ರ ಹಾನಿ ಮಾಡಿತ್ತು. ಅಲ್ಲದೆ ಮಹಾಧಮನಿ, ಮೂತ್ರನಾಳ, ಪ್ರಮುಖ ರಕ್ತನಾಳಗಳು ಹಾಗೂ ಸಣ್ಣ ಕರುಳಿಗೂ ಗಾಯವಾಗುವ ಅಪಾಯವಿತ್ತು. ಪೈಪ್ ಇನ್ನೂ ಸ್ವಲ್ಪ ಒಳಕ್ಕೆ ಹೋಗಿದ್ದರೆ ತೀವ್ರ ಆಂತರಿಕ ರಕ್ತಸ್ರಾವ, ಸೋಂಕು ಅಥವಾ ಸಾವು ಸಂಭವಿಸುವ ಸಾಧ್ಯತೆಯಿತ್ತು ಎಂದು ವೈದ್ಯರು ವಿವರಿಸಿದ್ದಾರೆ.
ವೈದ್ಯಕೀಯವಾಗಿ ಇದು ಅತ್ಯಂತ ಸವಾಲಿನ ಪ್ರಕರಣವಾಗಿತ್ತು. ತಜ್ಞ ವೈದ್ಯರ ತಂಡದ ಸಮಯೋಚಿತ ಮಧ್ಯಪ್ರವೇಶದಿಂದ ರೋಗಿಯ ಜೀವ ಉಳಿದಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ವಿಕಾಸ್ ರಾಜ್‌ಪುರೋಹಿತ್ ಹೇಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



