ತಿರುವನಂತಪುರಂ: ವಿಮಾನ ನಿಲ್ದಾಣಕ್ಕೆ ಇಳಿಯುವ ವಾಯುಮಾರ್ಗದಲ್ಲಿ ‘ಅಜ್ಞಾತ ವಸ್ತುವೊಂದು’ ಎತ್ತರಕ್ಕೆ ಚಾಚಿಕೊಂಡು ನಿಂತಿದ್ದರಿಂದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಲ್ಯಾಂಡಿಂಗ್‌ಗೆ ಬಂದಿದ್ದ ಎರಡು ವಿಮಾನಗಳು ನಿಲ್ದಾಣದಲ್ಲಿ ಇಳಿಯಲಾಗದೆ ಆಕಾಶದಲ್ಲೇ ಸುತ್ತಾಡುವಂತಾಯಿತು.
ಮಂಗಳವಾರ ಸಂಜೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ. ಭಾರತೀಯ ವಾಯುಪಡೆಯ ಎ.748 (A.748) ಸೇನಾ ವಿಮಾನ ಮತ್ತು ಅದರ ಬೆನ್ನಲ್ಲೇ ಮಾಲ್ಡೀವ್ಸ್‌ನಿಂದ ತಿರುವನಂತಪುರಂಗೆ ಆಗಮಿಸುತ್ತಿದ್ದ ಇಂಡಿಗೋ (6E1130) ವಿಮಾನ ಲ್ಯಾಂಡ್ ಆಗಲು ಸಿದ್ಧತೆ ನಡೆಸುತ್ತಿದ್ದವು. ಈ ವೇಳೆ ವಿಮಾನ ಮಾರ್ಗದಲ್ಲಿ ಎತ್ತರದ ವಸ್ತುವೊಂದು ಅಡ್ಡಲಾಗಿರುವುದನ್ನು ಗಮನಿಸಿದ ಪೈಲಟ್‌ಗಳು ತಕ್ಷಣವೇ ವಾಯು ಸಂಚಾರ ನಿಯಂತ್ರಣ (ATC) ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದರು. ಈ ವೇಳೆ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಬೃಹತ್ ಕ್ರೇನ್ ಒಂದರ ತೋಳು (Boom) ಎತ್ತರಕ್ಕೆ ಚಾಚಿಕೊಂಡು ನಿಂತಿರುವುದು ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮುತ್ತತ್ತರ ಬೆವರೇಜಸ್ ಔಟ್‌ಲೆಟ್ ಸಮೀಪದ ಜಾಗದಲ್ಲಿ ಈ ಕ್ರೇನ್ ನಿಲ್ಲಿಸಲಾಗಿತ್ತು.
ವಲ್ಲಕ್ಕಡವು ಭಾಗದ ರನ್‌ವೇ 32ರ ವಾಯುಮಾರ್ಗದಲ್ಲಿ ಸುಮಾರು 50 ಮೀಟರ್‌ನಷ್ಟು (ಅಂದಾಜು 16 ಅಂತಸ್ತಿನ ಕಟ್ಟಡದ ಎತ್ತರ) ಈ ಕ್ರೇನ್ ಬೂಮ್ ಮೇಲಕ್ಕೆ ಎದ್ದು ನಿಂತಿತ್ತು. ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ವಿಮಾನಗಳು ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಲ್ಯಾಂಡ್ ಆಗುವುದರಿಂದ, ಈ ಕ್ರೇನ್ ಭಾರಿ ಅಪಾಯದ ಭೀತಿ ಸೃಷ್ಟಿಸಿತ್ತು. ಕೂಡಲೇ ಕ್ರೇನ್ ಬೂಮ್ ಅನ್ನು ಕೆಳಗಿಳಿಸಿದ ಬಳಿಕ ಎರಡೂ ವಿಮಾನಗಳು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದವು.



