ಕಾಸರಗೋಡು: ನಿವೃತ್ತಿ ವಯೋಮಿತಿ ಮೀರಿದ ಹೊರತಾಗಿಯೂ ಅನಧಿಕೃತವಾಗಿ ಹುದ್ದೆಯಲ್ಲಿ ಮುಂದುವರಿದಿದ್ದ ಬೋವಿಕ್ಕಾನ ಸಮೀಪದ ಪೊವ್ವಲ್‌ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ (ಎಲ್‌ಬಿಎಸ್) ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಫಹದ್ ಶುಕೂರ್ ಅವರನ್ನು ಸೇವೆಯಿಂದ ತಕ್ಷಣದಿಂದಲೇ ವಜಾಗೊಳಿಸಿ ಉನ್ನತ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪ್ರಾಂಶುಪಾಲರ ಅಕ್ರಮ ಮುಂದುವರಿಕೆ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಇಲಾಖೆಯು, 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಇವರನ್ನು ಹುದ್ದೆಯಿಂದ ತೆರವುಗೊಳಿಸಲು ಎಲ್‌ಬಿಎಸ್ ಕಾಲೇಜುಗಳ ನಿರ್ದೇಶಕರಿಗೆ ನೇರ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಸೇವಾ ಅವಧಿ ಮುಗಿದ ಬಳಿಕ ಕಾನೂನುಬಾಹಿರವಾಗಿ ಹುದ್ದೆಯಲ್ಲಿ ಮುಂದುವರಿದು ಸರ್ಕಾರದಿಂದ ಪಡೆದಿರುವ ಮಾಸಿಕ ವೇತನ ಹಾಗೂ ಇನ್ನಿತರ ಭತ್ಯೆ-ಸವಲತ್ತುಗಳನ್ನು ಸರ್ಕಾರದ ಬೊಕ್ಕಸಕ್ಕೆ ಮರುಪಾವತಿಸುವಂತೆ (ರಿಕವರಿ) ಆದೇಶದಲ್ಲಿ ಖಡಕ್ ಎಚ್ಚರಿಕೆ ನೀಡಲಾಗಿದೆ.
ವಿವಾದದ ಹಿನ್ನೆಲೆ: ಡಾ. ಫಹದ್ ಶುಕೂರ್ ಅವರು 58 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 2024ರ ನವೆಂಬರ್ 30ರಂದೇ ಕರ್ತವ್ಯದಿಂದ ನಿವೃತ್ತಿ ಹೊಂದಬೇಕಿತ್ತು. ಆದರೆ, ಆ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2025ರ ಮಾರ್ಚ್ 31ರವರೆಗೆ ಸೇವೆ ಮುಂದುವರಿಸಲು ಉನ್ನತ ಶಿಕ್ಷಣ ಇಲಾಖೆಯು ತಾತ್ಕಾಲಿಕ ವಿನಾಯಿತಿ ನೀಡಿತ್ತು. ಇದೇ ಅವಧಿಯಲ್ಲಿ ಸರ್ಕಾರವು ಎಲ್‌ಬಿಎಸ್ ಸಿಬ್ಬಂದಿಯ ನಿವೃತ್ತಿ ವಯೋಮಿತಿಯನ್ನು 60 ವರ್ಷಕ್ಕೆ ಏರಿಕೆ ಮಾಡಿತ್ತು. ಸರ್ಕಾರದ ಈ ಆದೇಶವನ್ನು ದುರುಪಯೋಗಪಡಿಸಿಕೊಂಡ ಪ್ರಾಂಶುಪಾಲರು, ಹಿಂದಿನ ನಿವೃತ್ತಿ ನಿಯಮ ತಮಗೆ ಅನ್ವಯಿಸುವುದಿಲ್ಲ ಎಂಬ ನೆಪವೊಡ್ಡಿ ಹುದ್ದೆಯಲ್ಲಿ ಅಕ್ರಮವಾಗಿ ಮುಂದುವರಿದಿದ್ದರು.



