ಕೊಚ್ಚಿ: ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಸಂಭವಿಸುವ ರಸ್ತೆ ಅಪಘಾತಗಳ ಪ್ರಕರಣಗಳಲ್ಲಿ ತಪ್ಪಿತಸ್ಥ ಚಾಲಕರ ಚಾಲನಾ ಪರವಾನಗಿಯನ್ನು (ಲೈಸೆನ್ಸ್) ಶಾಶ್ವತವಾಗಿ ರದ್ದುಗೊಳಿಸಬೇಕು ಅಥವಾ ಅವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಭೀಕರ ರಸ್ತೆ ಅಪಘಾತಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ರಾಜ ವಿಜಯರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ, ರಸ್ತೆಗಳಲ್ಲಿ ಅಮೂಲ್ಯ ಜೀವಗಳು ಬಲಿಯಾಗುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿತು.
"ಇಷ್ಟೆಲ್ಲಾ ಭೀಕರ ಅಪಘಾತಗಳು ಸಂಭವಿಸುತ್ತಿದ್ದರೂ ಎಲ್ಲವನ್ನೂ ತೀರಾ ಹಗುರವಾಗಿ ಪರಿಗಣಿಸಲಾಗುತ್ತಿದೆ; ಯಾವುದೇ ರೀತಿಯ ಪರಿಹಾರ ಅಥವಾ ತಿದ್ದುಪಡಿ ಕ್ರಮಗಳು ಜಾರಿಯಾಗುತ್ತಿಲ್ಲ. ಮಕ್ಕಳು ಮತ್ತು ಮಹಿಳೆಯರು ಬಸ್‌ಗಳ ಅಡಿಯಲ್ಲಿ ಸಿಲುಕಿ, ಚಕ್ರಗಳಿಗೆ ಬಲಿಯಾಗುವುದನ್ನು ನಾವು ಮೂಕಪ್ರೇಕ್ಷಕರಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ. ಏನಾದರೂ ಗಂಭೀರ ಕ್ರಮ ಕೈಗೊಳ್ಳಿ. ನಾವು ಲೋಕೋಪಯೋಗಿ ಇಲಾಖೆಯ (PWD) ನಿಯಮಾವಳಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಮಾರ್ಗಸೂಚಿಗಳು ಹಾಗೂ ಭಾರತೀಯ ರಸ್ತೆ ಕಾಂಗ್ರೆಸ್ (IRC) ನಿಯಮಗಳನ್ನು ಪರಿಶೀಲಿಸಿದ್ದೇವೆ. ಕಾಗದದ ಮೇಲೆ ಎಲ್ಲಾ ನಿಯಮಗಳೂ ಇವೆ, ಆದರೆ ವಾಸ್ತವದಲ್ಲಿ ಅವುಗಳ ಅನುಷ್ಠಾನ ಶೂನ್ಯವಾಗಿದೆ" ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
"ರಾತ್ರಿ ವೇಳೆಯಲ್ಲಿ ಪೋರ್ಷೆ, ಫೆರಾರಿಯಂತಹ ಐಷಾರಾಮಿ ಕಾರುಗಳು ಅತಿಯಾದ ವೇಗದಲ್ಲಿ ಧಾವಿಸುತ್ತವೆ. ಇಂತಹ ಉಲ್ಲಂಘನೆಗಳನ್ನು ಪತ್ತೆಹಚ್ಚಿ ಎರಡು ದಿನಗಳ ಒಳಗಾಗಿ ಸಂಬಂಧಪಟ್ಟ ಪ್ರಾಧಿಕಾರ ಹಾಗೂ ವಾಹನದ ಮಾಲೀಕರಿಗೆ ನಿಯಮ ಉಲ್ಲಂಘನೆಯ ನೋಟಿಸ್ ರವಾನಿಸುವ ವ್ಯವಸ್ಥೆ ಇರಬೇಕು. ಕೇರಳದಲ್ಲಿ ಪ್ರತಿದಿನ ಅಪಘಾತಗಳಿಂದಾಗಿ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗೇಕೆ ಆಗುತ್ತಿದೆ? ಮತ್ತು ಅಪಘಾತಗಳನ್ನು ತಡೆಯಲು ನೀವು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ" ಎಂದು ಪೀಠವು ಸಾರಿಗೆ ಆಯುಕ್ತ ನಾಗರಾಜು ಚಕಿಲಂ ಅವರಿಗೆ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಆಯುಕ್ತರು, "ಬಸ್‌ಗಳ ವೇಳಾಪಟ್ಟಿ ಹಾಗೂ ಜಿಪಿಎಸ್ ಆಧಾರಿತ ಲೊಕೇಶನ್ ಮಾಹಿತಿಯನ್ನು ಸಂಯೋಜಿಸಲು 'ಕೇರಳ ಬಸ್' ಎಂಬ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದೇ ತಿಂಗಳಲ್ಲಿ ಬಸ್ ವೇಳಾಪಟ್ಟಿಗಳನ್ನು ನವೀಕರಿಸಲಾಗುವುದು" ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಕೇರಳದ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಪೀಠ ಈ ಮಹತ್ವದ ನಿರ್ದೇಶನಗಳನ್ನು ನೀಡಿದೆ.