ಕೈರೊ: ಪ್ರತಿಸ್ಪರ್ಧಿ ದೇಶಗಳ ಸರಕುಗಳಿಗೆ ಹೋಲಿಸಿದರೆ ಭಾರತದ ಸರಕುಗಳಿಗೆ ಅಮೆರಿಕದ ಮಾರುಕಟ್ಟೆಯ ಲಭ್ಯತೆ ದೊರಕಿಸುವಲ್ಲಿ ಆದ್ಯತೆ ನೀಡಬೇಕು ಎಂಬ ವಿಚಾರವಾಗಿ ಎರಡೂ ದೇಶಗಳು ಈಗಾಗಲೇ ಒಪ್ಪಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಮೊದಲ ಹಂತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಭಾರತ ಮತ್ತು ಅಮೆರಿಕ ಫೆಬ್ರುವರಿಯಲ್ಲಿ ಅಂತಿಮಗೊಳಿಸಿವೆ. ಈ ಒಪ್ಪಂದಕ್ಕೆ ಈಗಾಗಲೇ ಸಹಿ ಬೀಳಬೇಕಿತ್ತು. ಆದರೆ ಅಮೆರಿಕದ ಸುಂಕದ ನಿಯಮಗಳಲ್ಲಿ ಬದಲಾವಣೆ ಆಗಿರುವ ಕಾರಣದಿಂದಾಗಿ, ಒಪ್ಪಂದದ ಕುರಿತಾಗಿ ಇನ್ನಷ್ಟು ಮಾತುಕತೆಗಳು ನಡೆದಿವೆ.
'ಈ ವಿಚಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಒಪ್ಪಿದ್ದಾರೆ... ನಮ್ಮ ಪ್ರತಿಸ್ಪರ್ಧಿ ದೇಶಗಳ ಸರಕುಗಳಿಗಿಂತ ನಮ್ಮ ದೇಶದ ಸರಕುಗಳಿಗೆ ಅಮೆರಿಕದಲ್ಲಿ ಕಡಿಮೆ ಸುಂಕ ಇರಬೇಕು ಎಂಬುದನ್ನು ಒಪ್ಪಲಾಗಿದೆ' ಎಂದು ಗೋಯಲ್ ಅವರು ತಿಳಿಸಿದ್ದಾರೆ.
ಭಾರತ ಮತ್ತು ಈಜಿಪ್ಟ್ ನಡುವೆ ವ್ಯಾಪಾರ ವಹಿವಾಟು ಹಾಗೂ ಹೂಡಿಕೆಯನ್ನು ಹೆಚ್ಚಿಸುವ ಕುರಿತಾದ ಮಾತುಕತೆಗಳಿಗಾಗಿ ಗೋಯಲ್ ಅವರು ಇಲ್ಲಿಗೆ ಎರಡು ದಿನಗಳ ಭೇಟಿ ಕೈಗೊಂಡಿದ್ದಾರೆ.
ಇತರ ದೇಶಗಳ ಸರಕುಗಳಿಗೆ ನಿಗದಿ ಮಾಡುವುದಕ್ಕಿಂತ ಹೆಚ್ಚು ಅನುಕೂಲಕರವಾದ ಬಗೆಯಲ್ಲಿ ಭಾರತದ ಸರಕುಗಳಿಗೆ ಸುಂಕವನ್ನು ನಿಗದಿ ಮಾಡಲಾಗುತ್ತದೆ ಎಂಬ ಭರವಸೆಯನ್ನು ಅಮೆರಿಕ ನೀಡಿದೆ ಎಂದು ಮೂಲಗಳು ಈಚೆಗೆ ತಿಳಿಸಿದ್ದವು. ಮೊದಲ ಹಂತದ ಒಪ್ಪಂದವನ್ನು ಮಾರ್ಚ್‌ಗೆ ಮೊದಲು ಅಂತಿಮಗೊಳಿಸಲು ಎರಡೂ ದೇಶಗಳು ಪ್ರಯತ್ನ ನಡೆಸಿವೆ.



