ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳಿಯಾರು ಕಾಟಿಪಳ್ಳದಲ್ಲಿ ಯುವಕನೊಬ್ಬನ ಮೃತದೇಹ ಗುಂಡೇಟು ತಗುಲಿದ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಳಿಯಾರು ಕಾಟಿಪಳ್ಳ ಸಮೀಪದ ಮಂಜಕಲ್ಲು ನಿವಾಸಿ ಮೊಯ್ದು ಎಂಬವರ ಪುತ್ರ ಹೈದರಲಿ (27) ಮೃತಪಟ್ಟ ಯುವಕ.
ಕಾಟಿಪಳ್ಳದ ಕೊಳವೆಬಾವಿ ಸಮೀಪವಿರುವ ಮೈದಾನದಲ್ಲಿ ಹೈದರಲಿ ಸ್ಕೂಟರ್‌ನಿಂದ ಬಿದ್ದಿರುವುದನ್ನು ಸ್ನೇಹಿತ ಮುಹಮ್ಮದ್ ರಮೀಸ್ ಗಮನಿಸಿದ್ದರು. ತಕ್ಷಣವೇ ಅಜೀರ್ ಎಂಬವರ ಕಾರಿನಲ್ಲಿ ಹೈದರಲಿಯನ್ನು ಚೆರ್ಕಳದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಹೈದರಲಿ ಬಿದ್ದಿದ್ದ ಸ್ಕೂಟರ್‌ನಿಂದ ಅನತಿ ದೂರದಲ್ಲಿ ಬಂದೂಕೊಂದು ಪತ್ತೆಯಾಗಿದೆ. ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿರುವುದೇ ಹೈದರಲಿ ಗಾಯಗೊಳ್ಳಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಹೈದರಲಿಯ ಕೆನ್ನೆಗೆ ಗುಂಡೇಟು ತಗುಲಿದ ಗಾಯಗಳಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಕಲ ಡಿವೈಎಸ್ಪಿ ಕೆ. ವಿನೋದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಹೈದರಲಿ ಕೆಲವು ತಿಂಗಳುಗಳ ಹಿಂದಷ್ಟೇ ಊರಿಗೆ ಮರಳಿದ್ದರು. ಈ ಸಂಬಂಧ ಆದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


