ಪರಿಸರ ಸಂರಕ್ಷಣೆ ಕುರಿತು ಜಾಗೃತಿ; ಎನ್‌ಎಸ್‌ಎಸ್ ವತಿಯಿಂದ ಸ್ವಚ್ಛತಾ ಶ್ರಮದಾನ, ಬೀದಿ ನಾಟಕ ಹಾಗೂ ಸಸಿ ನೆಡುವ ಅಭಿಯಾನ
ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 'ಸ್ವಚ್ಛತಾ ಹೀ ಸೇವಾ' ಅಭಿಯಾನದ ಅಂಗವಾಗಿ ಸ್ವಚ್ಛ ಪರಿಸರ ರಕ್ಷಣೆ ಮತ್ತು ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಹತ್ತು ಹಲವು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಪಾಲ್ಗೊಂಡು ವಿಶ್ವವಿದ್ಯಾಲಯದ ಆವರಣ ಮತ್ತು ವಿದ್ಯಾರ್ಥಿ ನಿಲಯಗಳನ್ನು (ಹಾಸ್ಟೆಲ್) ಸ್ವಚ್ಛಗೊಳಿಸಿದರು. ಇದೇ ವೇಳೆ ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ಮರುಬಳಕೆ ಮಾಡುವ ಕುರಿತು ಅರಿವು ಮೂಡಿಸಲು ಆಕರ್ಷಕ ಬೀದಿ ನಾಟಕ ಹಾಗೂ ಕಿರುನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಪರಿಸರ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕ್ಯಾಂಪಸ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಆಲಗೂರ ಉದ್ಘಾಟಿಸಿದರು. ಡಾ. ಅನೀಶ್ ಪಿ.ಎಂ., ಜೆ. ಗಣೇಶ್ ರಣಧೀರ್, ಡಾ. ಪಿ. ಸುಪ್ರಿಯಾ, ಡಾ. ಅಂಜಲಾದೇವಿ, ಡಾ. ಎಂ. ಭಾಗ್ಯಲಕ್ಷ್ಮಿ, ಡಾ. ಎಂ. ವೆಂಕಣ್ಣ, ಡಾ. ಸಿ.ಎ. ಗೀತಾ, ಡಾ. ಎಚ್. ರಾಜನಾಯ್ಕ ಹಾಗೂ ಡಾ. ಎಸ್. ಅಂಬಳಗಿ ವಿವಿಧ ಚಟುವಟಿಕೆಗಳ ನೇತೃತ್ವ ವಹಿಸಿದ್ದರು.


