ನವದೆಹಲಿ: ದೇಶದಲ್ಲಿ ಪ್ರಕಟವಾಗುವ ಸಂಶೋಧನಾ ಪ್ರಬಂಧಗಳ ಪೈಕಿ ಸುಮಾರು ಶೇ 70ರಷ್ಟು ಕೇವಲ ಐದು ರಾಜ್ಯಗಳಿಂದ ಪ್ರಕಟವಾಗುತ್ತಿವೆ. ಈ ಐದು ರಾಜ್ಯಗಳಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳಿವೆ ಎಂದು ನೀತಿ ಆಯೋಗದ ಹೊಸ ವರದಿ ತಿಳಿಸಿದೆ.
2024-25ರಲ್ಲಿ ದೇಶದಲ್ಲಿ ಒಟ್ಟು 2.23 ಲಕ್ಷಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ.
ಈ ಪೈಕಿ 44,611 ಪ್ರಬಂಧಗಳೊಂದಿಗೆ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶ (29,298), ಮಹಾರಾಷ್ಟ್ರ (28,947), ಕರ್ನಾಟಕ (27,970) ಮತ್ತು ದೆಹಲಿ (24,417) ನಂತರದ ಸ್ಥಾನಗಳಲ್ಲಿವೆ.
ಪೇಟೆಂಟ್ ಅರ್ಜಿಗಳ ಸಲ್ಲಿಕೆಯಲ್ಲೂ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಆ ರಾಜ್ಯದಿಂದ 16,048 ಅರ್ಜಿಗಳು ಸಲ್ಲಿಕೆಯಾಗಿವೆ. ಮಹಾರಾಷ್ಟ್ರ (8,567), ಕರ್ನಾಟಕ (8,413), ಉತ್ತರ ಪ್ರದೇಶ (5,375) ಮತ್ತು ತೆಲಂಗಾಣ (5,200) ನಂತರದ ಸ್ಥಾನಗಳಲ್ಲಿವೆ. ತೆಲಂಗಾಣ ಮೊದಲ ಐದು ರಾಜ್ಯಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಹಿಂದೆ ದೆಹಲಿ ಇತ್ತು.
ಸಂಶೋಧನಾ ಪ್ರಬಂಧಗಳು ಮತ್ತು ಪೇಟೆಂಟ್ಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಯ ಪ್ರಮುಖ ಸೂಚಕಗಳಾಗಿವೆ. ರಾಜ್ಯಗಳು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ವರದಿಯು ರಾಜ್ಯಗಳ ಸಂಶೋಧನಾ ಸಾಮರ್ಥ್ಯ ಮತ್ತು ಕೊರತೆಗಳನ್ನು ಗುರುತಿಸಲು ಹಾಗೂ ಉತ್ತಮ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅಶೋಕ್ ಲಹಿರಿ ತಿಳಿಸಿದರು.
ಸಂಶೋಧನಾ ಪ್ರಕಟಣೆಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ, ಪಂಜಾಬ್, ತೆಲಂಗಾಣ, ಉತ್ತರಾಖಂಡ ಮತ್ತು ಗುಜರಾತ್ ನಂತರದ ಐದು ಸ್ಥಾನಗಳಲ್ಲಿವೆ. ಪೇಟೆಂಟ್ ಅರ್ಜಿಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ, ಪಂಜಾಬ್, ಗುಜರಾತ್, ದೆಹಲಿ ಮತ್ತು ರಾಜಸ್ಥಾನ ನಂತರದ ಸ್ಥಾನಗಳಲ್ಲಿವೆ.
ನೀತಿ ಆಯೋಗದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸದಸ್ಯ ಅಭಯ್ ಕರಂದೀಕರ್ ಮಾತನಾಡಿ, ದೇಶದ ಒಟ್ಟು ಸಂಶೋಧನಾ ಪ್ರಕಟಣೆಗಳಲ್ಲಿ ಸುಮಾರು ಶೇ 67ರಷ್ಟು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮತ್ತು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಪ್ರಯೋಗಾಲಯಗಳಂತಹ ಕೇಂದ್ರ ಸಂಸ್ಥೆಗಳಿಂದ ಬರುತ್ತಿವೆ. ಆದರೆ, ದೇಶದ ಒಟ್ಟು ವಿದ್ಯಾರ್ಥಿಗಳ ಪೈಕಿ ಕೇವಲ ಶೇ 5ರಷ್ಟು ಮಾತ್ರ ಈ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಶೇ 95ರಷ್ಟು ವಿದ್ಯಾರ್ಥಿಗಳು ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
2001ರಿಂದ 2020ರ ಅವಧಿಯಲ್ಲಿ ಐಐಟಿಗಳು ಒಟ್ಟು ಸಂಶೋಧನಾ ಪ್ರಕಟಣೆಗಳ ಪೈಕಿ ಸುಮಾರು ಶೇ 16ರಷ್ಟು ಕೊಡುಗೆ ನೀಡಿವೆ. ಸಿಎಸ್ಐಆರ್ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳು ತಲಾ ಶೇ 10ಕ್ಕಿಂತ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿವೆ. ಪರಮಾಣು ಇಂಧನ ಇಲಾಖೆಯ ಅಧೀನದ ಸಂಸ್ಥೆಗಳು ಶೇ 8ರಷ್ಟು ಕೊಡುಗೆ ನೀಡಿವೆ.
ನೀತಿ ಆಯೋಗದ ಈ ವರದಿಯಲ್ಲಿ ದೇಶದ 1,260 ಉನ್ನತ ಶಿಕ್ಷಣ ಸಂಸ್ಥೆಗಳು, ಕೇಂದ್ರ ಸರ್ಕಾರದ ಅನುದಾನಿತ 356 ಸಂಶೋಧನಾ ಪ್ರಯೋಗಾಲಯಗಳು, 38,553 ಡೀಪ್ಟೆಕ್ ಸ್ಟಾರ್ಟ್ಅಪ್ಗಳು, 7,246 ಅಟಲ್ ಟಿಂಕರಿಂಗ್ ಲ್ಯಾಬ್ಗಳು ಮತ್ತು 390 ಇನ್ಕ್ಯುಬೇಟರ್ಗಳನ್ನು ಒಳಗೊಂಡ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆಯನ್ನು ಪರಿಗಣಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಪ್ರಕಟವಾದ ನೀತಿ ಆಯೋಗದ ಮತ್ತೊಂದು ವರದಿಯ ಪ್ರಕಾರ, ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಯಂಡ್ ಡಿ) ಕ್ಷೇತ್ರದ ಒಟ್ಟು ವೆಚ್ಚವು ಜಿಡಿಪಿಯ ಶೇ 0.6ರಿಂದ 0.7ರಷ್ಟಿದೆ. ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ, ಚೀನಾ ಮತ್ತು ದಕ್ಷಿಣ ಕೊರಿಯಾಗಳಿಗೆ ಹೋಲಿಸಿದರೆ ಇದು ಕಡಿಮೆ ಪ್ರಮಾಣ.
ಸಂಶೋಧಕರಿಗೆ ಎದುರಾಗುತ್ತಿರುವ ಆಡಳಿತಾತ್ಮಕ ಅಡೆತಡೆಗಳೂ ವರದಿಯಲ್ಲಿ ಉಲ್ಲೇಖವಾಗಿವೆ. ಹೆಚ್ಚಿನ ನಿಯಮಪಾಲನೆ, ಅಧಿಕಾರಶಾಹಿ ವಿಳಂಬ, ಖರೀದಿ ಪ್ರಕ್ರಿಯೆಯಲ್ಲಿನ ಕಟ್ಟುನಿಟ್ಟಿನ ನಿಯಮಗಳು, ವಿವಿಧ ಹಂತಗಳಲ್ಲಿನ ಅನುಮತಿ ವಿಳಂಬ ಮತ್ತು ಕಡಿಮೆ ಪ್ರಮಾಣದ ಅನುದಾನ ಮಂಜೂರಾತಿ ಸಂಶೋಧನಾ ಚಟುವಟಿಕೆಗಳಿಗೆ ತೊಡಕಾಗಿವೆ ಎಂದು ವರದಿ ತಿಳಿಸಿದೆ.



