ವಿಶಾಖಪಟ್ಟಣ: ಇಲ್ಲಿನ ಮಲ್ಕಾಪುರಂನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ತೈಲ ಸಂಸ್ಕರಣಾಗಾರದಲ್ಲಿ (ರಿಫೈನರಿ) ಸಂಭವಿಸಿದ ಭಾರೀ ಅಗ್ನಿ ಅವಘಡವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಮಲ್ಕಾಪುರಂ ಸರ್ಕಲ್ ಇನ್ಸ್‌ಪೆಕ್ಟರ್ ಇ. ನರಸಿಂಹರಾವ್ ತಿಳಿಸಿದ್ದಾರೆ.
ಸೋಮವಾರ ರಿಫೈನರಿಯ ಸಲ್ಫರ್ ಘಟಕದಲ್ಲಿದ್ದ ಪಿಚ್ ಇಂಟರ್ಮೀಡಿಯೇಟ್ ಶೇಖರಣಾ ಟ್ಯಾಂಕ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ತ್ಯಾಜ್ಯ ಉತ್ಪನ್ನವಾದ ಸಲ್ಫರ್ ಪಿಚ್‌ನಿಂದ ಬೆಂಕಿ ಹೊತ್ತಿಕೊಂಡಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಯಾರೂ ಆತಂಕಪಡುವ ಅಗತ್ಯವಿಲ್ಲ, ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಮತ್ತು ಕಂಪನಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಬೆಂಕಿ ಹೊತ್ತಿಕೊಂಡ ತಕ್ಷಣವೇ ಎಚ್‌ಪಿಸಿಎಲ್‌ನ ಆಂತರಿಕ ಅಗ್ನಿಶಾಮಕ ದಳವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.
ಯಾವುದೇ ಹೊರಗಿನ ನೆರವಿಲ್ಲದೆ ಕಂಪನಿಯ ಸಿಬ್ಬಂದಿಯೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅವಘಡದ ಹೊರತಾಗಿಯೂ ರಿಫೈನರಿಯ ಉಳಿದೆಲ್ಲಾ ಘಟಕಗಳ ಕಾರ್ಯಚಟುವಟಿಕೆಗಳು ಎಂದಿನಂತೆ ಸುರಕ್ಷಿತವಾಗಿ ಮುಂದುವರಿದಿವೆ ಎಂದು ಕಂಪನಿಯ ವಕ್ತಾರರು ಮಾಹಿತಿ ನೀಡಿದ್ದಾರೆ.



