ಕಾಸರಗೋಡು: ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾಗಿ (DDE) ಕನ್ನಡತಿ ಸವಿತಾ ಪುಂಡೂರು ಅವರು ನೇಮಕಗೊಂಡಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿಯಾಗಿ (DEO) ಸೇವೆ ಸಲ್ಲಿಸುತ್ತಿದ್ದ ಇವರು, ಈ ಹಿಂದೆ ಪ್ರಭಾರಿ ಡಿಡಿಇ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಪ್ರಥಮ ಕನ್ನಡತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
1997ರಲ್ಲಿ ಅಧ್ಯಾಪಕಿಯಾಗಿ ವೃತ್ತಿಜೀವನ ಆರಂಭಿಸಿದ ಸವಿತಾ ಅವರು ಉಪ್ಪಳ, ಕುಂಬಳೆ, ಮೊಗ್ರಾಲ್‌ಪುತ್ತೂರು ಹಾಗೂ ಇಡುಕ್ಕಿ ಸೇರಿದಂತೆ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಬಳಿಕ ಸಹಾಯಕ ಶಿಕ್ಷಣಾಧಿಕಾರಿಯಾಗಿ (AEO) ನೇಮಕಗೊಂಡು ಶಿಕ್ಷಣ ಇಲಾಖೆಯಲ್ಲಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಇವರು, ಬಡ್ತಿ ಪಡೆದು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿದ್ದರು.
ಇವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ನಿವೃತ್ತ ಗಣಿತ ಅಧ್ಯಾಪಕ ಹಾಗೂ ಕಲಾವಿದ ಕೃಷ್ಣರಾಜ ಪುಣಿಂಚಿತ್ತಾಯ ಮತ್ತು ಬಿಇಎಂ (BEM) ಪ್ರೌಢಶಾಲೆಯ ನಿವೃತ್ತ ಅಧ್ಯಾಪಕಿ ರತ್ನಾವತಿ ದಂಪತಿಯ ಪುತ್ರಿಯಾಗಿದ್ದಾರೆ. ಕೇರಳದ ನಿವೃತ್ತ ನ್ಯಾಯಾಧೀಶ ವಿರಳ ರಾಜಕುಮಾರ್ ಅವರ ಪತ್ನಿಯಾಗಿರುವ ಸವಿತಾ ಪುಂಡೂರು ಅವರು ಪ್ರಸ್ತುತ ಮಧೂರಿನಲ್ಲಿ ವಾಸವಾಗಿದ್ದಾರೆ.



