ತಿರುವನಂತಪುರಂ: ತೆರಿಗೆ ಕಡಿತದ ಪ್ರಯೋಜನ ಪಡೆದರೂ ಉದ್ಯೋಗ ಸೃಷ್ಟಿ ಮತ್ತು ವೇತನ ಹೆಚ್ಚಳಕ್ಕೆ ಮುಂದಾಗದ ಕಾರ್ಪೊರೇಟ್ ಕಂಪನಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟೀಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲಿಸಿದ್ದಾರೆ. ದೇಶದಲ್ಲಿ, ಅದರಲ್ಲೂ ಪದವೀಧರರಿಗೆ ಉದ್ಯೋಗಾವಕಾಶಗಳ ಸ್ಥಿತಿ ತೀವ್ರ ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಸರಕಾರದ ನಿಯಂತ್ರಣ ವ್ಯವಸ್ಥೆಯನ್ನು ಟೀಕಿಸಿದ ತರೂರ್, ಭ್ರಷ್ಟಾಚಾರ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಆರೋಪಿಸುವ ಮೂಲಕ ಮೋದಿಯವರ 'ನಾ ಖಾವೂಂಗಾ, ನಾ ಖಾನೆ ದೂಂಗಾ' (ನಾನು ಲಂಚ ಸ್ವೀಕರಿಸುವುದಿಲ್ಲ, ಬೇರೆಯವರಿಗೂ ಸ್ವೀಕರಿಸಲು ಬಿಡುವುದಿಲ್ಲ) ಘೋಷಣೆಯನ್ನು ವ್ಯಂಗ್ಯವಾಡಿದ್ದಾರೆ.
ತಿರುವನಂತಪುರದಲ್ಲಿ ಮಾತನಾಡಿದ ತರೂರ್, ತೆರಿಗೆ ವಿನಾಯಿತಿ ಪಡೆದ ಬಳಿಕವೂ ಉದ್ಯಮಗಳು ತಮ್ಮ ಭರವಸೆಯಂತೆ ನಡೆದುಕೊಳ್ಳುತ್ತಿಲ್ಲ ಎಂಬ ಪ್ರಧಾನಿಯವರ ಹೇಳಿಕೆ ದೇಶದ ಆರ್ಥಿಕ ವಾಸ್ತವವನ್ನು ಪ್ರತಿಬಿಂಬಿಸುತ್ತದೆ ಎಂದರು.
"ಕಂಪನಿಗಳು ತಮ್ಮದೇ ಆದ ಸಮರ್ಥನೆಗಳನ್ನು ನೀಡಬಹುದು. ಆದರೆ, ನನ್ನ ತಿಳಿವಳಿಕೆಯಂತೆ ಸರಕಾರ ತೆರಿಗೆಯನ್ನು ಕಡಿತಗೊಳಿಸಿರುವುದು ಕಂಪನಿಗಳು ಹೆಚ್ಚು ಹೂಡಿಕೆ ಮಾಡಬೇಕು, ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ವೇತನ ಹೆಚ್ಚಿಸಬೇಕು ಎಂಬ ಉದ್ದೇಶದಿಂದ. ಆದರೆ, ಕಂಪನಿಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ನಿಭಾಯಿಸಿಲ್ಲ ಎಂಬುದು ಪ್ರಧಾನಿಯವರ ವಾದ. ಇದು ವಾಸ್ತವವೂ ಹೌದು" ಎಂದು ಅವರು ಹೇಳಿದರು.
"ಉದ್ಯೋಗ ಪಡೆಯುವುದು ತುಂಬಾ ಕಷ್ಟಕರವಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಉದಾಹರಣೆಗೆ, ಇದೇ ಮೊದಲ ಬಾರಿಗೆ ಐಐಟಿ ಪದವೀಧರರಿಗೂ ಕ್ಯಾಂಪಸ್ ನೇಮಕಾತಿಯಲ್ಲಿ ಉದ್ಯೋಗ ಸಿಗದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಇಂತಹ ಸಂಗತಿಗಳನ್ನು ಕೇಳಿರಲಿಲ್ಲ. ಇದು ಪದವೀಧರರಿಗೆ ಉದ್ಯೋಗಾವಕಾಶಗಳ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ" ಎಂದು ಅವರು ಹೇಳಿದರು.
ಉದ್ಯಮಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಲಾಗಿದೆ ಎಂಬ ಸರಕಾರದ ಹೇಳಿಕೆಯನ್ನು ಪ್ರಶ್ನಿಸಿದ ತರೂರ್, ನಿಯಮಾವಳಿಗಳನ್ನು ಸರಳಗೊಳಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಟೀಕಿಸಿದರು.
"ನಾನು ಮಾತನಾಡುವ ಪ್ರತಿಯೊಬ್ಬ ಉದ್ಯಮಿಯೂ ಭ್ರಷ್ಟಾಚಾರ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಹೇಳಲು ವಿಷಾದಿಸುತ್ತೇನೆ" ಎಂದು ತರೂರ್ ತಿಳಿಸಿದರು.
ಭ್ರಷ್ಟಾಚಾರ ತಡೆಯುವ ಭರವಸೆಯೊಂದಿಗೆ ಪ್ರಧಾನಿ ಮೋದಿ ನೀಡಿದ್ದ 'ನಾ ಖಾವೂಂಗಾ, ನಾ ಖಾನೆ ದೂಂಗಾ' ಘೋಷಣೆಯನ್ನು ಪ್ರಸ್ತಾಪಿಸಿದ ತರೂರ್, ಅದನ್ನು ವ್ಯಂಗ್ಯವಾಗಿ ಉಲ್ಲೇಖಿಸಿದರು.
ಪ್ರಧಾನಿಯವರು 'ನಾ ಖಾವೂಂಗಾ, ನಾ ಖಾನೆ ದೂಂಗಾ' (ನಾನು ತಿನ್ನುವುದಿಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ) ಎಂದು ಹೇಳಿದ್ದರು. ಆದರೆ ಈ ಅವರು ಆ ಘೋಷಣೆಯನ್ನು ಗೋಮಾಂಸಕ್ಕೆ ಮಾತ್ರ ಸೀಮಿತಗೊಳಿಸಿದ್ದರು ಎಂಬುದು ನಮಗೆ ಅರ್ಥವಾಗುತ್ತಿದೆ" ಎಂದು ತರೂರ್ ವ್ಯಂಗ್ಯವಾಡಿದ್ದಾರೆ.



