ಉಪ್ಪಳ: ಐತಿಹಾಸಿಕ ಹಿನ್ನೆಲೆಯುಳ್ಳ ಜೋಡುಕಲ್ಲು ಗಣೇಶ ಮಂದಿರದ ಸಂರಕ್ಷಣೆಗಾಗಿ ಆರಂಭಗೊಂಡಿರುವ ಧಾರ್ಮಿಕ ಹೋರಾಟ ಹಾಗೂ ಸಾರ್ವಜನಿಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲವು ದಿನಗಳಿಂದ ನಿರಂತರವಾಗಿ ಮುಂದುವರಿದಿದೆ. ಮಂದಿರದ ರಕ್ಷಣೆಗಾಗಿ ಸ್ಥಳದಲ್ಲಿ ನಿತ್ಯವೂ ಭಜನೆ, ಯಾಗ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಅಹೋರಾತ್ರಿ ನಡೆಯುತ್ತಿವೆ.
ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಮಡ್ಯಾರು ಶಿವಗಿರಿ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಹಾಗೂ ಕನ್ಯಾನ-ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಅವರು ಭೇಟಿ ನೀಡಿದರು. ಮಂದಿರ ರಕ್ಷಣೆಯ ಹೋರಾಟಕ್ಕೆ ಬೆಂಬಲ ಸೂಚಿಸಿದ ಉಭಯ ಯತೀವರ್ಯರು, ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ ಧಾರ್ಮಿಕ ಜಾಗೃತಿಯ ಸಂಕಲ್ಪಕ್ಕೆ ಬಲ ತುಂಬಿದರು.
ಕ್ಷೇತ್ರದ ಅಸ್ತಿತ್ವ ಉಳಿಸಿಕೊಳ್ಳಲು ನಡೆಯುತ್ತಿರುವ ಈ ಸಾತ್ವಿಕ ಹೋರಾಟಕ್ಕೆ ದಿನದಿಂದ ದಿನಕ್ಕೆ ಜನಬೆಂಬಲ ಹೆಚ್ಚುತ್ತಿದ್ದು, ಹಗಲು-ರಾತ್ರಿ ಎನ್ನದೆ ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ತಮ್ಮ ಸಾಲಿಡಾರಿಟಿ ವ್ಯಕ್ತಪಡಿಸುತ್ತಿದ್ದಾರೆ.
ಧಾರ್ಮಿಕ ಸಪ್ತಾಹದ ಭಾಗವಾಗಿ ಮಂಗಳವಾರ ರಾತ್ರಿ 7 ರಿಂದ ಪ್ರಸಿದ್ಧ ವಿದುಷಿ ಮಂಜುಳಾ ಜಿ. ರಾವ್ ಇರಾ ಅವರಿಂದ 'ಶ್ರೀರಾಮ ಭಕ್ತ ಹನುಮ' ಹರಿಕಥಾ ಸತ್ಸಂಗ ಕಾರ್ಯಕ್ರಮ ನಡೆಯಿತು.

