ತಿರುವನಂತಪುರಂ: ಕೇರಳ ರಾಜ್ಯಾದ್ಯಂತ ಇಂದು (ಮಂಗಳವಾರ) ನಡೆಸಲು ತೀರ್ಮಾನಿಸಲಾಗಿದ್ದ ಅನಿರ್ದಿಷ್ಟಾವಧಿ ಖಾಸಗಿ ಬಸ್ ಮುಷ್ಕರವನ್ನು ಹಿಂಪಡೆಯಲಾಗಿದೆ. ಸಾರಿಗೆ ಸಚಿವರೊಂದಿಗೆ ಬಸ್ ಮಾಲೀಕರ ಪ್ರತಿನಿಧಿಗಳು ನಡೆಸಿದ ಮಾತುಕತೆಯ ಬಳಿಕ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಡಲು ತೀರ್ಮಾನಿಸಲಾಗಿದೆ.
ಬಸ್ ಮಾಲೀಕರು ಸರ್ಕಾರದ ಮುಂದೆ ಇರಿಸಿದ್ದ ಬೇಡಿಕೆಗಳ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲವಾದರೂ, ಸಚಿವರ ಭರವಸೆ ಹಾಗೂ ಮಾತುಕತೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಬಸ್ ಮಾಲೀಕರ ಆರು ಪ್ರಮುಖ ಸಂಘಟನೆಗಳು ಒಗ್ಗೂಡಿ ರಚಿಸಿಕೊಂಡಿದ್ದ ‘ಸಂಯುಕ್ತ ಮುಷ್ಕರ ಸಮಿತಿ’ಯು ಈ ಪ್ರತಿಭಟನೆಗೆ ಕರೆ ನೀಡಿತ್ತು.


