HEALTH TIPS

Ranitidine ಔಷಧಿಯ ಸುರಕ್ಷತಾ ಪರಿಶೀಲನೆಯಲ್ಲಿ ವಿಳಂಬ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ನೋಟಿಸ್

ನವದೆಹಲಿ: Ranitidine ಔಷಧಿಯ ಸುರಕ್ಷತಾ ಪರಿಶೀಲನೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಿರ್ದೇಶನವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರ ಮತ್ತು ಅದರ ಔಷಧಿ ನಿಯಂತ್ರಣ ಸಂಸ್ಥೆಗಳಿಗೆ ನೋಟಿಸ್ ಹೊರಡಿಸಿದೆ.


ಆಮ್ಲೀಯತೆ ಮತ್ತು ಹೊಟ್ಟೆಯ ಉರಿಯನ್ನು ಕಡಿಮೆ ಮಾಡಲು ರೆನಿಟಿಡಿನ್ ಅನ್ನು ಬಳಸಲಾಗುತ್ತದೆ.

ಕೇಂದ್ರ ಸರಕಾರ, ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ), ಔಷಧಿಗಳ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ನೋಟಿಸ್ ಹೊರಡಿಸಿದ ಪ್ರಭಾರ ಮುಖ್ಯ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ನೇತೃತ್ವದ ಪೀಠವು ವಕೀಲ ಡಾ. ಚಂದ್ರೇಶ್ ಜೈನ್ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದೆ.

2019ರ ಸೆಪ್ಟೆಂಬರ್‌ನಲ್ಲಿ ರೆನಿಟಿಡಿನ್ ಮಾತ್ರೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲ 'ಎನ್‌ಡಿಎಮ್‌ಎ' ಎಂಬ ಅಪಾಯಕಾರಿ ಅಂಶ ಪತ್ತೆಯಾದಾಗಿನಿಂದ ಈ ಔಷಧಿಯ ಸುರಕ್ಷತೆಯು ಆತಂಕದ ವಿಷಯವಾಗಿದೆ ಎಂದು ಜೈನ್ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ. 2020ರಲ್ಲೇ ಅಮೆರಿಕ, ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ, ಕೆನಡಾ ಮತ್ತು ಸಿಂಗಾಪುರ ಈ ಕುರಿತು ಸೂಕ್ತ ನಿಯಂತ್ರಣ ಕ್ರಮವನ್ನು ಕೈಗೊಂಡಿವೆ. ಆದರೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯು ಹಲವು ವರ್ಷಗಳಿಂದ ಈ ವಿಷಯವನ್ನು ಪರಿಶೀಲಿಸುತ್ತಿದ್ದರೂ, ಯಾವುದೇ ಅಂತಿಮ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಎಪ್ರಿಲ್ 2025ರಲ್ಲಿ ಡಿಟಿಎಬಿ ಈ ವಿಷಯವನ್ನು ಐಸಿಎಂಆರ್ ಅಧ್ಯಯನ ಸಮಿತಿಗೆ ವಹಿಸಿತ್ತು. ಜುಲೈ 2025ರಲ್ಲಿ ಸರಕಾರವು ನಿಗದಿಪಡಿಸಿದ್ದ ಮೂರು ತಿಂಗಳ ಗಡುವು ಅಕ್ಟೋಬರ್ 2025ಕ್ಕೆ ಅಂತ್ಯಗೊಂಡಿದೆ. ಆದರೆ ವರದಿಗಾಗಿ ಕಾಯಲಾಗುತ್ತಿದೆ ಮತ್ತು ವಿಷಯವು ಪರಿಶೀಲನೆಯಲ್ಲಿದೆ ಎಂದು ಹೇಳಿಕೊಳ್ಳುತ್ತಲೇ ಬಂದಿರುವ ಸಿಡಿಎಸ್‌ಸಿಒ ತೀರ ಇತ್ತೀಚೆಗೆ ಅಂದರೆ ಅ.7ರಂದೂ ಅದನ್ನೇ ಪುನರುಚ್ಚರಿಸಿದೆ ಎಂದು ಜೈನ್ ಬೆಟ್ಟು ಮಾಡಿದ್ದಾರೆ.

ಈ ಔಷಧಿಯು ಅತ್ಯಂತ ಅಗ್ಗವಾಗಿದ್ದು, ವೈದ್ಯರ ಚೀಟಿಯಿಲ್ಲದೆ ಸುಲಭವಾಗಿ ದೊರೆಯುತ್ತದೆ. ಆದ್ದರಿಂದ ಈ ಬಗೆಹರಿಯದ ಸಮಸ್ಯೆಯ ಭಾರವನ್ನು ಹೊರಬೇಕಾದವರು ಮುಖ್ಯವಾಗಿ ಪರ್ಯಾಯ ಚಿಕಿತ್ಸೆಯನ್ನು ಕಂಡುಕೊಳ್ಳಲು ಅಥವಾ ಅದರ ವೆಚ್ಚವನ್ನು ಭರಿಸಲು ಸಾಧ್ಯವಾಗದ ಬಡಜನರೇ ಆಗಿದ್ದಾರೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries