ಉಪ್ಪಳ: ಪೈವಳಿಕೆ ಬಾಯಾರು ಗಾಳಿಯಡ್ಕ ನಿವಾಸಿ ಮುಹಮ್ಮದ್ ಆಸಿಫ್ (25) ಎಂಬ ಯುವಕನ ಮೃತದೇಹ ಟಿಪ್ಪರ್ ಲಾರಿಯೊಳಗೆ ನಿಗೂಢ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಕ್ರೈಂ ಬ್ರಾಂಚ್‌ಗೆ ತನಿಖೆಯ ಹೊಣೆ ವಹಿಸಲಾಗಿದ್ದು, ಕ್ರೈಂ ಬ್ರಾಂಚ್‌ನ ಕಣ್ಣೂರು ವಲಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು (SIT) ರಚಿಸಲಾಗಿದೆ.
ಘಟನೆಯ ಹಿನ್ನೆಲೆ: 2025ರ ಜನವರಿ 15ರಂದು ಪೈವಳಿಕೆಯ ಕಾಯರ್ ಕಟ್ಟೆಯ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಯೊಳಗೆ ಚಾಲಕ ಮುಹಮ್ಮದ್ ಆಸಿಫ್ ಅವರು ಗಂಭೀರ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಕುಂಬಳೆಯ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಮೈಮೇಲಿನ ಗಾಯಗಳನ್ನು ಗಮನಿಸಿದ ಕುಟುಂಬಸ್ಥರು ಸಾವಿನ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದರು.
ಸಮಗ್ರ ತನಿಖೆಗೆ ಆಗ್ರಹಿಸಿ ಕುಟುಂಬಸ್ಥರು ಹಿಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸೂಕ್ತ ಪ್ರಗತಿ ಕಂಡಿರಲಿಲ್ಲ. ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸದಸ್ಯ ಜೆ.ಎಸ್. ಸೋಮಶೇಖರ್ ಅವರ ನೇತೃತ್ವದಲ್ಲಿ ನಿಯೋಗವು ಗೃಹ ಸಚಿವರನ್ನು ಭೇಟಿ ಮಾಡಿ ಹೊಸದಾಗಿ ಮನವಿ ಸಲ್ಲಿಸಿದ ಬೆನ್ನಲ್ಲೇ ಈ ತನಿಖಾ ಆದೇಶ ಹೊರಬಿದ್ದಿದೆ.



