HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಮರಸ ಸಂಪಾದಕೀಯ: ಬುದ್ಧತ್ವದ ಹಿನ್ನೆಲೆ ಝೆನ್ ಪರಂಪರೆಯ ಆರನೇ ಮಹಾಗುರು ಹ್ಯೂನೆಂಗ್ ಲೂ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬದುಕಿದ್ದ. ಈತ ಒಂದು ರೀತಿಯಲ್ಲಿ ಕ್ರಾಂತಿಕಾರಿ ಮನುಷ್ಯ. ಇವನಿಗಿಂತ ಹಿಂದಿದ್ದ ಗುರುಗಳು ವಿಶೇಷ ಶಿಕ್ಷಣ ಪಡೆದಿದ್ದವರು, ಬುದ್ಧನ ಬೋಧನೆಗಳನ್ನು ಅರಗಿಸಿಕೊಳ್ಳುವುದರಲ್ಲಿ ಪರಿಶ್ರಮವುಳ್ಳವರು. ಹ್ಯೂನೆಂಗ್ ಅನಕ್ಷರಸ್ಥ ಮತ್ತು ಸಾಮಾಜಿಕವಾಗಿ ತೀರ ಕೆಳ ಅಂತಸ್ತಿನಿಂದ ಬಂದವನು. ಈತ ಯಾವ ಒಂದು ಸ್ಥಳದಲ್ಲಿಯೂ ನಿಲ್ಲದೇ ಅಲೆಯುತ್ತ ಅಪ್ಪಟವಾದ ದೇಶೀ ಭಾಷೆಯಲ್ಲೇ ಬೋಧನೆ ಮಾಡಿದ. ಇವನ ಕಾಲದಲ್ಲೇ ಝೆನ್ ಪಂಥ ಹೆಚ್ಚು ವಿಸ್ತಾರವಾಗಿ ಹರಡಿತು. ಈತ ದಕ್ಷಿಣದ ಲಿಂಗ್ನಾನ್ ಪ್ರದೇಶದಲ್ಲಿ ಬೆಳೆದವನು. ಬದುಕಿಕಾಗಿ ಮರ ಕತ್ತರಿಸಿ ಸೌದೆ ಮಾರುವವನು. ಒಂದು ದಿನ ಒಬ್ಬರ ಮನೆಗೆ ಸೌದೆ ಕೊಡಲು ಹೋದಾಗ ಅವರು ಓದುತ್ತಿರುವ ಝೆನ್ ಸೂತ್ರಗಳನ್ನು ಕೇಳಿಸಿಕೊಂಡ. ತಕ್ಷಣವೇ ಅವನ ಸೂಕ್ಷ್ಮ ಮನಸ್ಸು ಅವುಗಳ ಅರ್ಥವನ್ನು ಗ್ರಹಿಸಿತು. ಮುಂದೆ ಇವುಗಳನ್ನು ಆಳವಾಗಿ ಅರಿಯುವುದೇ ತನ್ನ ಜೀವನ ಗುರಿಯೆಂದು ಭಾವಿಸಿ ಆಗ ಇದ್ದ ಐದನೇ ಮಹಾಗುರು ಹೊಂಗರೆನ್ ವಾಸಿಸುತ್ತಿದ್ದ ಪ್ಲಮ್ ಪರ್ವತಕ್ಕೆ ಹೋದ. ಇವನ ಕಣ್ಣುಗಳಲ್ಲಿದ್ದ ತೀವ್ರತೆ, ತೇಜಸ್ಸನ್ನು ಕಂಡ ಗುರು ಪರೀಕ್ಷಿಸಲು ಕೇಳುತ್ತಾನೆ, `ನೀನು ಬಂದದ್ದು ದಕ್ಷಿಣದಿಂದ. ಈ ಸ್ಥಳಕ್ಕೆ ಪರದೇಶಿಯಾದ ನೀನು ಹೇಗೆ ಬುದ್ಧನಾಗುವೆ?'. ಹ್ಯೂನೆಂಗ್ ಹೇಳಿದ, `ಬುದ್ಧತ್ವಕ್ಕೆ ಉತ್ತರ, ದಕ್ಷಿಣ ಎನ್ನುವುದಿದೆಯೇ? ಇದ್ದರೆ ಅದೆಂಥ ಬುದ್ಧತ್ವ?'. ಚಕಿತನಾದ ಗುರು ಮತ್ತಷ್ಟು ಪರೀಕ್ಷಿಸಲು ಒರಟಾಗಿ ಹೇಳಿದ, `ನೀನು ಉದ್ಧಟತನದಿಂದ ಮಾತನಾಡಬೇಡ. ನಾನು ಹೇಳುವವರೆಗೂ ನಮ್ಮ ಅಕ್ಕಿಯ ಗಿರಣಿಯಲ್ಲಿ ಕೆಲಸ ಮಾಡು'. ಹ್ಯೂನೆಂಗ್ ಮರುಮಾತನಾಡದೇ ಅಕ್ಕಿ ಗಿರಣಿಗೆ ತೆರಳಿ ಹಗಲುರಾತ್ರಿ ದುಡಿದ. ಕೆಲ ವರ್ಷಗಳ ನಂತರ ಗುರು ಹೊಂಗರೆನ್ ಸಂದೇಶ ನೀಡಿದ, `ನಾನು ನನ್ನ ಉತ್ತರಾಧಿಕಾರಿಯನ್ನು ನೇಮಿಸಲು ನಿರ್ಧರಿಸಿದ್ದೇನೆ. ನಿಮ್ಮಲ್ಲಿ ಯಾರು ಒಂದು ಮಹಾವಚನವನ್ನು ಬರೆಯುತ್ತೀರೋ ಅವರೇ ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಮೂರು ದಿನದ ಕಾಲಾವಕಾಶ'. ಆಗ ಆಗಲೇ ಮಹಾಜ್ಞಾನಿ ಮತ್ತು ಗುರು ಹೊಂಗರೆನ್ಗೆ ಉತ್ತರಾಧಿಕಾರಿ ಎಂದೇ ಪರಿಗಣಿತನಾಗಿದ್ದವನು ಭಿಕ್ಷು ಶೆಂಗ್ಶುಯಿ. ಉಳಿದವರು ವಚನ ಬರೆಯುವ ಯೋಚನೆಯನ್ನೇ ಮಾಡಲಿಲ್ಲ. ಶೆಂಗ್ ಶುಯಿ ಒಂದು ವಚನವನ್ನು ಬರೆದು ಗೋಡೆಗೆ ತಗುಲಿಸಿದ. ನಮ್ಮ ಶರೀರ ಬೋಧಿವೃಕ್ಷ, ಆದರೆ, ಮನಸ್ಸು ಹೊಳೆಹೊಳೆವ ಕನ್ನಡಿ. ಅದನ್ನು ಒರೆಸುತ್ತಿರು ಎಚ್ಚರದಲ್ಲಿ, ಧೂಳು ನೆಲೆಯಾಗದಿರಲಿ ಅಲ್ಲಿ. ಎಲ್ಲರೂ ಇದನ್ನು ಮಹಾವಚನವೆಂದೇ ನಂಬಿದರು. ಆದರೆ ಹ್ಯೂನೆಂಗ್ ಅದನ್ನು ಮತ್ತೊಬ್ಬರಿಂದ ಅದನ್ನು ಓದಿಸಿ ಕೇಳಿ ಮತ್ತೊಂದು ವಚನವನ್ನು ಬರೆಯಿಸಿದ. ದೇಹ ಬೋಧಿವೃಕ್ಷವಲ್ಲ, ಹೊಳೆಹೊಳೆವ ಕನ್ನಡಿಯ ಮನಸ್ಸೂ ಇಲ್ಲ ಎಲ್ಲವೂ ಶೂನ್ಯವೇ ಆಗಿರುವಾಗ, ಧೂಳು ಕೂತೀತು ಎಲ್ಲಿ? ಇದನ್ನು ಮೆಚ್ಚಿದ ಗುರು ಅವನನ್ನು ನಾವೆಯಲ್ಲಿ ಕೂಡ್ರಿಸಿಕೊಂಡು ಹೊರಟಾಗ `ಶಿಷ್ಯನನ್ನು ಗುರುವೇ ದಾಟಿಸಬೇಕು' ಎಂದು ಗುರು ಹೇಳುತ್ತಾನೆ. ತಕ್ಷಣ ಹ್ಯೂನೆಂಗ್, `ಶಿಷ್ಯ ಅಜ್ಞಾನದಲ್ಲಿದ್ದಾಗ ಗುರುವೇ ದಡ ಕಾಣಿಸಬೇಕು. ಆದರೆ, ಅರಿವು ಮೂಡಿದಾಗ ಶಿಷ್ಯ ಸ್ವತಃ ಹುಟ್ಟುಹಾಕಿಕೊಳ್ಳಬೇಕು' ಎಂದ. ಗುರು ಶಿಷ್ಯನಿಗೆ ನಾವೆಯ ಹುಟ್ಟಿನೊಡನೆ ಉತ್ತರಾಧಿಕಾರತ್ವವನ್ನು ನೀಡಿದ. ಬದುಕಿನಲ್ಲಿ ತಿಳಿವಿಗೆ, ಅರಿವಿಗೆ, ಬುದ್ಧತ್ವಕ್ಕೆ ನಾವು ಬಂದ ಹಿನ್ನೆಲೆ ಮುಖ್ಯವಲ್ಲ. ಮೇಲಿನ, ಕೆಳಗಿನ ಅಂತಸ್ತುಗಳು, ಓದು, ಲಿಂಗ ಮತ್ತಾವುದೇ ತಾರತಮ್ಯ ಗೌಣ. ಹೃದಯವನ್ನು ತೆರೆದುಕೊಂಡು ಕೇಳಿದ್ದನ್ನು, ಕಂಡದ್ದನ್ನು ಅರಗಿಸಿಕೊಳ್ಳಲು ಮಗುವಿನ ಮುಗ್ಧತೆ ಬೇಕು. ಆ ಮುಗ್ಧತೆಯಲ್ಲೇ ಅರಿವಿನ ಬೆಳಕು ಮಿಂಚುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries