HEALTH TIPS

ಯಾವುದೇ ಶೀರ್ಷಿಕೆಯಿಲ್ಲ

      ಈ ಭಾಷಾ ವಿಜ್ಞಾನಿಯ ಸರಳ ಸಜ್ಜನಿಕೆ ಕಂಡು ಬೆರಗಾದೆ
     ಡಾ.ರತ್ನಾಕರ ಮಲ್ಲಮೂಲೆ
      ಪ್ರಾದ್ಯಾಪಕರು. ಸರಕಾರಿ ಕಾಲೇಜು.ಕಾಸರಗೊಡು.
   ಅರಿವು ಎಂದರೇನು? ವಿನಯ ಎಂದರೇನು? ವಿದ್ಯಾವಂತ , ವಿದ್ವಾಂಸ ಎಂದರೆ ಯಾರು? ಅವನ ಅರ್ಹತೆಗಳೇನು?  ಮಾನವೀಯತೆ, ನಿರಹಂಕಾರ, ಸರಳ ಸಜ್ಜನಿಕೆ ಹೇಗಿರತ್ತೆ?  ಅದರ ಸ್ವರೂಪ ಯಾವ ರೀತಿಯದ್ದು?  ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಒಬ್ಬ ಪ್ರಾಧ್ಯಾಪಕ ಹೇಗಿರಬೇಕು....? ಇತ್ಯಾದಿ ಪ್ರಶ್ನೆಗಳಿಗೆಲ್ಲ ಉತ್ತರ ಬೇಕೇ? ಹಾಗಾದರೆ ನೀವೊಮ್ಮೆ ಕನ್ನಡದ ಅದ್ವಿತೀಯರೆನಿಸಿದ ಭಾಷಾತಜ್ಞ, ಭಾಷಾ ವಿಜ್ಞಾನಿ  ಡಾ. ಕೆ. ಕೆಂಪೇಗೌಡರನ್ನು ಭೇಟಿಯಾಗಲೇಬೇಕು.
   ಯಾಕೋ ಗೊತ್ತಿಲ್ಲ. ನನಗೆ ಕಾಡುವ ಪ್ರಶ್ನೆಗಳಲ್ಲಿ ಪ್ರಮುಖವಾದ ಪ್ರಶ್ನೆಯೆಂದರೆ ಇದು....
  " ನಮ್ಮಂತಹ ಯುವ ಅಧ್ಯಾಪಕರಿಗಿರುವ ಅಹಂ, ಶೋಕಿತನ ಯಾಕೆ ಈ ಮೇರು ವ್ಯಕ್ತಿತ್ವಗಳಿಗಿಲ್ಲ! ?
ನಮ್ಮಲ್ಲಿ ಕಾಣದೆ ಇರುವ ಸರಳ ಸಜ್ಜನಿಕೆ ಇವರಲ್ಲಿ ಮಾತ್ರ ಇರುವುದ್ಯಾಕೆ ?"
  ಒಂದು ಹೊಸ ಕಾರು ತೆಗೆದಾಗ, , ಒಂದು ಪುಸ್ತಕ ಬಿಡುಗಡೆಯಾದಾಗ , ಸಣ್ಣ ಒಂದು ಅಧಿಕಾರ ಕೈಗೆ ಬಂದಾಗ , ಎರಡು ಜನ ಹೊಗಳಿದಾಗ , ಇದ್ದ ಹಣವೆಲ್ಲ ಸುರಿದು ಆಡಂಬರದ ಮನೆ ಕಟ್ಟಿದಾಗ ನೆಲದಲ್ಲಿ ನಿಲ್ಲಲಾಗದ  ನಾವು  ಇವರಂತಹ ಮೇರು ಗಿರಿಗಳನ್ನು ಕಂಡು ಬೆಚ್ಚಿ ಬೀಳಲೇ ಬೇಕು ..
  ಸರಳ ಸಜ್ಜನಿಕೆಯಿಂದ, ಸದ್ದಿಲ್ಲದೆ, ಆಡಂಬರದ, ಸೌಕರ್ಯಗಳ ಆರ್ಭಟಗಳಿಲ್ಲದೆ , ಯಾರನ್ನೂ  ದೂರುವ  ಅಥವಾ ಟೀಕಿಸುವ ಗೋಜಿಗೂ ಹೋಗದೆ , ಸುದ್ದಿಯೇ ಮಾಡದೆ ಇಷ್ಟು ಸಜ್ಜನಿಕೆಯಿಂದ ಇರುವ ಎಂಭತ್ತರ ಹರೆಯದ  ಕನ್ನಡದ ಹಿರಿಯ ಮತ್ತು ಖ್ಯಾತ  ಭಾಷಾತಜ್ಞ ಡಾ ಕೆ ಕೆಂಪೇಗೌಡರ  ಭೇಟಿಯಿಂದ ಕಲಿತದ್ದು ಸುಮಾರು.
   ಕನ್ನಡ ಭಾಷೆಯ ಬಗ್ಗೆ ಪ್ರಾಥಮಿಕ ಜ್ಞಾನಗಳಿಸಿಕೊಳ್ಳುವವರಿಂದ ತೊಡಗಿ ಪಿಎಚ್ .ಡಿ ಮಾಡುವವವರ ವರೆಗೆ ಡಾ.  ಕೆ . ಕೆಂಪೇಗೌಡರ ಯಾವುದಾದರೊಂದು ಕೃತಿಯನ್ನು ಓದದೆ ಮುನ್ನಡಿಯಿಡಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಭಾಷಾವಿಜ್ಞಾದಲ್ಲಿ ಹೆಸರು ಮಾಡಿದ ವ್ಯಕ್ತಿತ್ವ ಮತ್ತು ಪಾಂಡಿತ್ಯ ಅವರದು. 
  ಸಾಮಾನ್ಯ ಭಾಷಾ ವಿಜ್ಞಾನ , ಕನ್ನಡ ಭಾಷಾ ಚರಿತ್ರೆ ,  ಭಾರತೀಯ ಭಾಷೆ ಮತ್ತು  ಸಾಹಿತ್ಯ , ತೌಲನಿಕ ದ್ರಾವಿಡ ಭಾಷಾ ವಿಜ್ಞಾನ, ತೌಲನಿಕ ದ್ರಾವಿಡ ವ್ಯಾಕರಣ, ತೌಲನಿಕ ದ್ರಾವಿಡ ಧ್ವನಿಮಾಗಳು , ಕನ್ನಡ ಉಪಭಾಷೆಗಳ ಅಧ್ಯಯನ , ಭಾಷಾ ವಿಜ್ಞಾನ  ವಿಶ್ವಕೋಶ - ಹೀಗೆ  ಸುಮಾರು ಎಂಭತ್ತಕ್ಕಿಂತಲೂ ಹೆಚ್ಚು ಬೃಹತ್ ಪುಟಗಳ ಭಾಷಾ ವಿಜ್ಞಾನ ಕ್ಷೇತ್ರಕ್ಕೆ ಸಂಬಂದಿಸಿದ ಕೃತಿಗಳನ್ನು ಕನ್ನಡಕ್ಕೆ ನೀಡಿ 'ನ ಭೂತೋ ನ ಭವಿಷ್ಯತ್' ಎಂಬ ರೀತಿಯಲ್ಲಿ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಕೆಂಪೇಗೌಡರು ಭಾಷಾವಿಜ್ಞಾನವನ್ನೇ ಉಸಿರಾಗಿಸಿಕೊಂಡು ಬದುಕುವವರು . ಸುಧೀರ್ಘ ಕಾಲ ಪ್ರಾಧ್ಯಾಪಕರಾಗಿ ದುಡಿದ ಅನುಭವವಿರುವ ಅವರು ಹಾ.ಮಾ ನಾಯಕರಂತಹ ಕನ್ನಡ ಕಂಡ ಸಾಹಿತ್ಯ ಕಲಿಗಳ ಶಿಷ್ಯರು. ಮೈಸೂರು ವಿಶ್ವವಿದ್ಯಾನಿಲಯ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳ ಭಾಷಾನಿಕಾಯಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಸಂಪನ್ನರು..
  ನನ್ನ ಆತ್ಮೀಯ ಸ್ನೇಹಿತರೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆಗಿರುವ ಡಾ. ಟಿ.ಕೆ. ಕೆಂಪೇಗೌಡರ ಜತೆ ಈ ಹಿರಿಯ ಕೆಂಪೇಗೌಡರ ಮನೆಗೆ ಇಂದು ಸಂಜೆ ಹೋದಾಗ ಆ ಹಿರಿಜೀವದ ಸರಳತೆ ಕಂಡು ಭಾವುಕನಾಗಿಬಿಟ್ಟೆ ...
  ಪ್ರೀತಿಯಿಂದ ಪರಿಚಯ ಮಾಡಿಕೊಂಡ ಅವರು ಕಾಸರಗೋಡಿನ ಕನ್ನಡದ ಸ್ಥಿತಿಗತಿಯ ಬಗ್ಗೆ ಕೇಳಲು ಮರೆಯಲಿಲ್ಲ .. ನೀವು ಅಧ್ಯಾಪನಕ್ಕೆ ಮಾತ್ರ ಸೀಮಿತವಾಗಿ ಇರಬಾರದು ಕನ್ನಡ ಕೆಲಸಕಾರ್ಯಗಳಲ್ಲೂ ದುಡಿಯಬೇಕು ಎಂದು ಆತ್ಮೀಯವಾಗಿ ತಿಳಿ ಹೇಳಿದರು .
  ನಮ್ಮ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದ ಪ್ರೊ ಸುಬ್ರಾಯ ಭಟ್ , ಪ್ರೊ. ಬಿ. ಕೆ ತಿಮ್ಮಪ್ಪ , ಪ್ರೊ. ಪಿ. ಶ್ರೀಕೃಷ್ಣ ಭಟ್ ರವರನ್ನೂ ತಿರುವನಂತಪುರದಲ್ಲಿರುವ ಪ್ರೊ. ಎಂ  ರಾಮ ಅವರ ಜತೆಗಿನ ಒಡನಾಟವನ್ನು ಮೆಲುಕು ಹಾಕಿಕೊಂಡರು... ಅದೆಷ್ಟೋ ವರುಷಗಳ ಮೊದಲು ಒಮ್ಮೆ ಕಾಸರಗೋಡಿಗೆ ಬಂದುದನ್ನು ಪ್ರೀತಿಯಿಂದ ಸ್ಮರಿಸಿಕೊಂಡರು.
   ಬಳಿಕ ಎದ್ದು ಒಳ ಹೋಗಿ ಸುಮಾರು ಎರಡು ಸಾವಿರ ಮೌಲ್ಯಗಳ ಅವರ ಬೃಹತ್ ಗಾತ್ರದ ಪ್ರಕಟಿತ ಪುಸ್ತಕಗಳನ್ನು ನೀಡುತ್ತಾ, 
  " ನಿಮ್ಮನ್ನು ಕಂಡಾಗ, ನಿಮ್ಮ ಪ್ರೀತಿ ಕಂಡಾಗ ನಿಮಗೆ ಈ ಪುಸ್ತಕಗಳನ್ನು ಕೊಡಬೇಕೆಂದಿರುವೆ . ಪ್ರೀತಿಯಿಂದ ಸ್ವೀಕರಿಸಿ " ಎಂದು ಅತ್ಯಂತ ವಿನಯದಿಂದ ಹೇಳುತ್ತಾ ನೀಡಿದಾಗ ತಬ್ಬಿಬ್ಬಾದೆ. ಭಾಷಾ ವಿಜ್ಞಾನದ ಅಧ್ಯಯನವನ್ನು  ತಪಸ್ಸಿನಂತೆ ಬದುಕಿನಲ್ಲಿ ಅಳವಡಿಸಿಕೊಂಡು  ಅದ್ವಿತೀಯ ಸಾಧನೆ ಮಾಡಿದ ಈಗಲೂ ಆ ತಪಸ್ಸಿನಲ್ಲೇ ಮುಳುಗಿರುವ ಆ ಹಿರಿಜೀವದ ಪರಿಶ್ರಮದ ಫಲವಾದ ಕೃತಿಗಳನ್ನು ಅವರು ಉದಾರವಾಗಿ ಕೊಟ್ಟರೂ ಅದರ ಮುಖಬೆಲೆಯನ್ನು  ಕೊಡದೆ ಅಧ್ಯಾಪಕನಾದ ನಾನು ಪಡೆದುಕೊಳ್ಳುವುದು ಮಹಾಪಾಪವಾದಿತು ಎಂದು ನನ್ನ ಅಂತರಂಗ ಎಚ್ಚರಿಸಿದ ತಕ್ಷಣ ಅವರಲ್ಲಿ ಮುಕ್ತವಾಗಿ ಹೇಳಿಬಿಟ್ಟೆ. ಮಾತ್ರವಲ್ಲ ಆ ಕೃತಿಗಳು ನನ್ನಂತಹ ಪ್ರಾಧ್ಯಾಪಕನ ಪಾಲಿಗೆ ಬೆಲೆಗಟ್ಟಲಾರದ್ದಾಗಿದ್ದುವು.
  ಅವರು ಹಣ ಬೇಡ ಅನ್ನುವುದು, ನಾನು ಹಣ ತಗೊಳ್ಳಲೇ ಬೇಕು ಅನ್ನುವುದು -  ಹೀಗೆ ನಮ್ಮಿಬ್ಬರ ವಾದ ಪ್ರತಿವಾದ ಕಂಡ ಸ್ನೇಹಿತ ಕೆಂಪೇಗೌಡರು ಕೊನೆಗೂ ನನ್ನ ಸಂತೃಪ್ತಿಗೆ ಒಂದು ಪುಸ್ತಕದ ಹಣವಾದರೂ ತಗೊಳ್ಳಬೇಕು ಅಂದಾಗ ಅದಕ್ಕೆ ಅವರು ಒಪ್ಪಲೇಬೇಕಾಯಿತು. 
  ಶ್ರೀಮತಿ ಸುಶೀಲ ಮೇಡಂ ಅವರೂ ಅಪರಿಚಿತನಾದ ನನ್ನಲ್ಲಿ ದೂರದ ಸಂಬಂಧಿಯೋರ್ವ ಮನೆಗೆ ಬಂದಂತೆ ನಡೆದುಕೊಂಡರು . ಬಿಸಿ ಬಿಸಿ ಕಾಫಿಯೂ ಗಂಟಲಿಳಿಯಿತು . ಫೋಟೋವೂ ಆಯಿತು ..
  ಅವರು ಮನೆಯೊಳಗೆ ಬಿದ್ದು,  ಕಾಲಿಗೆ ಪೆಟ್ಟಾಗಿರುವುದನ್ನು ಇತ್ತೀಚಿಗೆ ಹೊರಗೆಲ್ಲಿಗೂ ಹೋಗಲಾಗದ್ದನ್ನು , ತಾನು ಪ್ರಾಧ್ಯಾಪಕನಾಗಿದ್ದಾಗ ವಿದ್ಯಾಥರ್ಿಗಳ ಮೇಲೆ ಇರಿಸಿದ ಪ್ರೀತಿ ವಿಶ್ವಾಸ ,ಆಡಳಿತಾಧಿಕಾರಿಯಾಗಿದ್ದ ಸಮಯದ ಘಟನೆಗಳನ್ನು ಗೌಡರು ನನ್ನಲ್ಲಿ  ಮನೆಹುಡುಗನಿಗೆ ತಿಳಿಸುವಂತೆ ತಿಳಿಸಿದರು.
   ತಾನು ವೃತ್ತಿಯಲ್ಲಿ ತನ್ನ ವಿದ್ಯಾಥರ್ಿಗಳಿಗೆ ತೋರಿದ ಪ್ರೀತಿಯನ್ನು ಅವರು ಈಗಲೂ ಸ್ಮರಿಸುವುದನ್ನು ಹೆಮ್ಮೆಯಿಂದ ಹೇಳಿಕೊಂಡರು. 'ಅಧ್ಯಾಪಕನೋರ್ವ ವಿದ್ಯಾಥರ್ಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಬೇಕು. ಯಾಕೆಂದರೆ ವಿದ್ಯಾಥರ್ಿ ಗಳೇ ಅಧ್ಯಾಪಕರ ಅನ್ನದಾತರು.' ಎಂದು ಗೌಡರು ಗಂಭೀರವಾಗಿಯೇ ನುಡಿದರು.
  ಭಾಷಾವಿಜ್ಞಾನದ ಮೇರು ಪರ್ವತವನ್ನು ಕಣ್ಣಾರೆ ಕಂಡ ಖುಷಿಯಿಂದ ಮತ್ತು  ನಿಜವಾದ ವಿದ್ಯಾವಂತನನ್ನು ಕಂಡ ಆನಂದದಿಂದ ಮಿತ್ರ ಕೆಂಪೇಗೌಡರ ಜತೆಗೆ ಮೆಟ್ಟಿಲಿಳಿವಾಗ ಅವರು ಕೊಟ್ಟ ಪುಸ್ತಕವನ್ನು ತೆರೆದು ನೋಡಿದೆ. ಅದರಲ್ಲಿ ಹೀಗೆ ಬರೆದಿತ್ತು ....
  "ಡಾ. ರತ್ನಾಕರ ಮಲ್ಲಮೂಲೆ ಯವರಿಗೆ ಗೌರವಪೂರ್ವಕವಾಗಿ ,
 ಕೆ. ಕೆಂಪೇಗೌಡ "
  ಅವರ ವಿದ್ವತ್ತಿನ ಎದುರು ಸೊನ್ನೆಯಾಗಿರುವ  ನನ್ನ ಹೆಸರಿನ ಎದುರು ಅವರು 'ಡಾ'. ಬರೆಯಲು ಮರೆಯಲಿಲ್ಲ !! ಆದರೆ ಅವರ ಹೆಸರಿನ ಎದುರು 'ಡಾ' ವನ್ನು   ಹಾಕಿಕೊಳ್ಳಲೇ ಇಲ್ಲ ...
  ಅವರಿಗಿಂತ ಸುಮಾರು 41 ವರ್ಷ ಪ್ರಾಯಕ್ಕೆ ಕಿರಿಯನಾದ, ಅವರ ಜ್ಞಾನ ಮತ್ತು ಅನುಭವದ ಎದುರು ಕೋಳಿಮೊಟ್ಟೆಯಾಗಿರುವ  ನನಗೆ ''ಗೌರವಪೂರ್ವಕ..." ಎಂದು ಬರೆದುದು ಕಂಡು ನಿಜಕ್ಕೂ ನಾನು ಹೋದದ್ದು ಭಾಷಾವಿಜ್ಞಾನಿ ಡಾ. ಕೆ. ಕೆಂಪೇಗೌಡರ  ಮನೆಗೋ ಅಥವಾ ವಿದ್ವಾಂಸನೆಂಬ ದೇವರ ಮನೆಗೋ ಎಂಬುದು ಗೊತ್ತಾಗಲಿಲ್ಲ ... !
  ಲೇಖಕ: ರತ್ನಾಕರ ಮಲ್ಲಮೂಲೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries