HEALTH TIPS

No title

   
   ಭಾನುವಾರ ಕನ್ನಡದ ಹಿರಿಯ ವಿದ್ವಾಂಸ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಜನ್ಮದಿನ. ಅಂತಹ ಮಹಾನ್ ಚಿಂತಕರು  ಆಳ್ವಾಸ್ ನುಡಿಸಿರಿ, ಮೂಡುಬಿದಿರೆಯಲ್ಲಿ (1, 2, 3 ದಶಂಬರ 2017) ಅಧ್ಯಕ್ಷತೆ ವಹಿಸಿ ಮಾಡಿದ  ಭಾಷಣವೊಂದರ ಮೊದಲ ಅವತರಣಿಕೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದ್ದು, ಜಾಗೃತಿಯ ದೃಷ್ಟಿಯಿಂದ ಚಿಂತನಾರ್ಹವೆಂಬುದು ಸಮರಸದ ಆಶಯ.
     ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ
  ಪ್ರವೇಶ
  ನಾನು ನನ್ನ ಸಾಹಿತ್ಯಶಕ್ತಿಯನ್ನು ಕಂಡುಕೊಂಡುದು ಈಗ್ಗೆ ಸುಮಾರು 60-65 ವರ್ಷಗಳಷ್ಟು ಹಿಂದೆ, 1950-52ರಲ್ಲಿ, ಕನ್ನಡ ಬಿ.ಎ. ಆನಸರ್್ ತರಗತಿಯ ವಿದ್ಯಾಥರ್ಿಯಾಗಿದ್ದಾಗ. ಇದಕ್ಕೆ ನಿಮಿತ್ತವಾದವರು ನಮ್ಮ ಕನ್ನಡ ಅಧ್ಯಾಪಕರಾಗಿದ್ದ ಎಸ್.ವಿ. ಪರಮೇಶ್ವರ ಭಟ್ಟರು. ಅವರು ನಮಗೆ ರತ್ನಾಕರನ `ಭರತೇಶವೈಭವ'ವನ್ನು ಪಾಠ ಮಾಡುತ್ತಿದ್ದರು. ನಾನು `ರತ್ನಾಕರಕವಿಯ ವರ್ಣನಾನೈಪುಣ್ಯ' ಎಂಬ ಪ್ರಬಂಧವನ್ನು ಬರೆದು ಅವರಿಗೆ ತೋರಿಸಿದೆ. ಅವರು ಓದಿ, ಮೆಚ್ಚಿಕೊಂಡು, ತರಗತಿಯಲ್ಲೇ ಸಹಪಾಠಿಗಳ ಎದುರಿನಲ್ಲಿಯೂ ಓದಿದರು. ಅಲ್ಲದೆ ತಾವೇ ಶಿವಮೊಗ್ಗದ `ಮಿತ್ರ' ಎಂಬ ಪತ್ರಿಕೆಗೆ ಪ್ರಕಟನೆಗೆಂದು ಕಳಿಸಿದರು. ಅದು ನನ್ನಲ್ಲಿ ಒಬ್ಬ ಬರಹಗಾರನಿದ್ದಾನೆ ಎಂದು ಗುರುತಿಸಿಕೊಂಡ ಶುಭೋದಯದ ಸಂದರ್ಭ.

ರತ್ನಾಕರ ಕವಿ ಮೂಡಬಿದರೆಯವನು. ಈಗ 11 ವರ್ಷಗಳಿಂದ ವೈಭವದಿಂದ ನಡೆಯುತ್ತ ಬಂದಿರುವ `ನುಡಿಸಿರಿ'ಯ ಸಿರಿಮುಡಿ ಮೂಡಬಿದರೆ; ಡಾ. ಮೋಹನ ಆಳ್ವರೂ ಅಭಿಮಾನಿ ಮಿತ್ರರೂ 2015ರ ನುಡಿಸಿರಿಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನೆಂದು ಆರಿಸಿದ್ದಾರೆ, ಆಹ್ವಾನಿಸಿದ್ದಾರೆ. ನಾನು ಹೇಳಿದ ಶುಭೋದಯದ ಸಂದರ್ಭ ಎನ್ನುವುದು ಉದಯರವಿ ನಡುನೆತ್ತಿಗೆ ಬಂದು ಪ್ರಖರವಾಗಿ ಜ್ವಲಿಸುವಂತೆ ನನ್ನನ್ನು ತಮ್ಮೆದುರು ತಂದು ನಿಲ್ಲಿಸಿ ಪರಿಣಾಮಗೊಂಡಿದೆ. ನಾನು ನುಡಿಸಿರಿಯ ಶ್ರೀಪುರುಷ, ನಡೆಸಿರಿಯ ಮೋಹನ ಆಳ್ವರಿಗೆ, ಅವರ ಸಲಹಾಮಂಡಲಿಯ ಮಾನ್ಯಮಿತ್ರರಿಗೆ ಕೃತಜ್ಞತೆಯನ್ನು ಅಪರ್ಿಸುತ್ತೇನೆ.

ಹಲವು ವರ್ಷಗಳ ಹಿಂದೆ ಮೂಡಬಿದರೆಯಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು ರತ್ನಾಕರವಣರ್ಿಯ ವಿಷಯವಾಗಿ ಒಂದು ವಿಚಾರಸಂಕಿರಣವನ್ನು ಏರ್ಪಡಿಸಿತ್ತು. ಆಗ ನಾನು `ಸಾಂಗತ್ಯಗ್ರಂಥಗಳಲ್ಲಿ ಭರತೇಶವೈಭವದ ಸ್ಥಾನ' ಎಂಬ ಪ್ರಬಂಧವನ್ನು ಮಂಡಿಸಿದೆ. ಇಲ್ಲಿಯೇ 2005ರಲ್ಲಿ ಹಿರಿಯ ಮಿತ್ರರೊಂದಿಗೆ ನುಡಿಸಿರಿಯ ಸನ್ಮಾನದ ಸೌಭಾಗ್ಯವನ್ನೂ ಪಡೆದೆ.

ಸ್ಥಳದ ಮಹಾಕವಿ
ಮಹಾಕವಿ ರತ್ನಾಕರನ (1557) ವಿಷಯವಾಗಿ ಎರಡು ಮಾತು ಮೊದಲಲ್ಲಿಯೇ ಹೇಳುವುದುಚಿತ. ಈ ಕವಿ ಸುಮಾರು 10 ಸಾವಿರ ಸುಂದರ ಸಾಂಗತ್ಯಪದ್ಯಗಳ `ಭರತೇಶವೈಭವ'ವನ್ನು 9 ತಿಂಗಳ ಅಲ್ಪಾವಧಿಯಲ್ಲೇ ರಚಿಸಿದನು. ಈತನ ಕವಿತ್ವಶಕ್ತಿಯನ್ನು ಕುರಿತು ಹಿರಿಯರು ತುಂಬ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಈತ ಸಮಗ್ರ ಸಾಂಗತ್ಯಕವಿಗಳ ಚರಿತ್ರೆಯಲ್ಲಿ, ಸವರ್ೋಚ್ಚಸ್ಥಾನವನ್ನು ಅಲಂಕರಿಸಿದ್ದಾನೆ. ಈತನ ಕಾವ್ಯ ಸಾಂಗತ್ಯಕಾವ್ಯಗಳ ರತ್ನಕಿರೀಟದ ಮಧ್ಯಮಣಿಯಾಗಿದೆ.

ನಮ್ಮ ಕಾಲದ ಮಹಾಕವಿ ಕುವೆಂಪು ಅವರ ಮಾತು ಇದು: (1) ``ಕಾವ್ಯ, ವಸ್ತು ಮತ್ತು ದರ್ಶನದ ದೃಷ್ಟಿಯಿಂದ ನೋಡುವುದಾದರೆ ಭರತೇಶವೈಭವದ ಕತರ್ೃವಾದ ರತ್ನಾಕರವಣರ್ಿ ಹಿಂದಿನ ಮಹಾಕವಿಗಳ ಪಂಕ್ತಿಯಲ್ಲಿ ಪ್ರಥಮಶ್ರೇಣಿಗೆ ಏರುವಂತೆ ತೋರುತ್ತದೆ''. (2) ``ಭರತೇಶವೈಭವದಲ್ಲಿ ತ್ಯಾಗಭೋಗಗಳ ಸಮನ್ವಯದ ಯೋಗದರ್ಶನ ವನ್ನು ಕವಿ ಸುಂದರವಾಗಿ ಪ್ರತಿಮಿಸಿದ್ದಾನೆ. ಅಷ್ಟೆ ಅಲ್ಲ, ಕವಿ ಆದರ್ಶವನ್ನು ಭರತನ ಜೀವನದಲ್ಲಿ ಮಾತ್ರವೇ ಅಲ್ಲದೆ ಇಡೀ ಕಾವ್ಯದ ವಿವರ ವಿವರಗಳಲ್ಲೆಲ್ಲ ಬುದ್ಧಿಪೂರ್ವಕವಾಗಿ ಪ್ರತಿಮಿಸಿರುವುದನ್ನು ನೋಡಿದರಂತೂ ಅಂತಹ ಕಾವ್ಯಸೃಷ್ಟಿ ಜಗತ್ತಿನ ಮತ್ತಾವ ಸಾಹಿತ್ಯದಲ್ಲೂ ಆಗಿರುವಂತೆ ಕಾಣುವುದಿಲ್ಲ. ಆ ದೃಷ್ಟಿಯಿಂದ ಈ ಕೃತಿ ಜಗತ್ಕೃತಿ''. (3) ``ಹಿಂದಿನ ಕನ್ನಡ ಸಾಹಿತ್ಯದಲ್ಲಿ ಹಳೆಯ ಕಥೆ ಮತ್ತು ವಿಷಯ ಇವುಗಳಿಂದ ಅತ್ಯಂತ ಸ್ವತಂತ್ರವಾದ ದರ್ಶನವಸ್ತುವನ್ನು ಸೃಷ್ಟಿಸಿ ತನ್ನದೆ ಆದ ಒಂದು ನೂತನಮಾರ್ಗದಿಂದ ಭರತೇಶವೈಭವದಂತಹ ಬೃಹತ್ಪ್ರಮಾಣದ ಮಹಾಕೃತಿಯನ್ನಾಗಿಸಿದ ಮಹಾಕವಿಯ ಕೀತರ್ಿ ರತ್ನಾಕರವಣರ್ಿಗೊಬ್ಬನಿಗೆ ಸಲ್ಲುತ್ತದೆ.''

ಈಗ ಮಾಸ್ತಿಯವರ ಮಾತು: (1) ``ರತ್ನಾಕರನ ಕಾವ್ಯ ಕನ್ನಡದ ಮಕ್ಕಳ ಭಾವದ ಹಸಿವನ್ನು ತೀರಿಸಬಲ್ಲುದು. ನಾವು ಅವನ ಕಾವ್ಯದ ಕಡೆಗೆ ಹೆಚ್ಚು ಹೆಚ್ಚಾಗಿ ತಿರುಗಬೇಕು''. (2) ``ಮಹಾಕಾವ್ಯಕ್ಕೆ ವಸ್ತುವಿಜ್ಞಾನ ಒಂದು ಗುಣ ಎಂದು ವಾಲ್ಮೀಕಿಯ ಕೃತಿ ನಿರೂಪಿಸಿದ ಮೇಲೆ ಕನ್ನಡದಲ್ಲಿ ಅದನ್ನು ಪೂರ್ಣವಾಗಿ ಸಾಧಿಸಿದವರು ಇಬ್ಬರೇ. ಒಬ್ಬ ಕುಮಾರವ್ಯಾಸ, ಇನ್ನೊಬ್ಬ ರತ್ನಾಕರ''.

ಈ ಎರಡೂ ಅಭಿಪ್ರಾಯಗಳಲ್ಲಿ ವಿಮಶರ್ೆ ಕೊಂಚ ಉದಾರವಾಯಿತು ಎಂದು ಕೆಲವರಿಗೆ ತೋರಿದರೆ, ಹಾಗೆ ತೋರುವುದಕ್ಕೆ ಅವಕಾಶಗಳಿವೆಯೆನ್ನಬಹುದು. ಆದರೇನು? ನಮ್ಮ ಸಾಹಿತ್ಯೇತಿಹಾಸದಲ್ಲಿ ರತ್ನಾಕರ ಖಂಡಿತವಾಗಿ ನಾಲ್ಕೈದು ಜನ ಮಹಾಕವಿಗಳಲ್ಲಿ ಅಗ್ರಶ್ರೇಣಿಯಲ್ಲಿದ್ದಾನೆ.

ರತ್ನಾಕರನ ಕತರ್ೃತ್ವದ ಮೂರು ಶತಕಗಳಿದ್ದು, ಮೈಸೂರತ್ತಣ ಕಣರ್ಾಟಕ ಕಾವ್ಯಮಂಜರಿ ಎಂಬ ಪತ್ರಿಕೆ ತನ್ನ ಪ್ರಾಚೀನ ಕಾವ್ಯಪ್ರಕಟನೆಯನ್ನು ಆರಂಭಿಸಿದ್ದು ರತ್ನಾಕರನ `ರತ್ನಾಕರಾಧೀಶ್ವರಶತಕ' ಮತ್ತು `ಅಪರಾಜಿತೇಶ್ವರಶತಕ' ಎಂಬೆರಡು ಕೃತಿಗಳಿಂದಲೇ. ಇದು 1893ರಲ್ಲಿ, ಎಂದರೆ 122 ವರ್ಷಗಳ ಹಿಂದೆ. ಈ ಕವಿಯ ಅಧ್ಯಾತ್ಮಗೀತಗಳು ಈಗ ಪ್ರಕಟವಾಗಿವೆ; ಅವಕ್ಕೆ ರಾಗಸಂಯೋಜನೆ ಮಾಡಿ ಗಾಯಕರು ಹಾಡುತ್ತಿದ್ದಾರೆಯೇ, ನನಗೆ ತಿಳಿಯದು. ಒಳ್ಳೆಯ ಸಾಹಿತ್ಯಸತ್ತ್ವದ ರಚನೆಗಳಿವು. ಇವಕ್ಕೆ ಪ್ರಚಾರ ಸಿಕ್ಕಬೇಕು.

ಮೂಡಬಿದರೆಯ ಕವಿಗಣ
ಮೂಡಬಿದರೆಯ ಮತ್ತು ಸುತ್ತಮುತ್ತಣ ಕವಿಗಳು 17-19ನೆಯ ಶತಮಾನಗಳಲ್ಲಿ ಕೃತಿರಚನೆಯನ್ನು ಮಾಡಿದವರು ರತ್ನಾಕರನ ಪ್ರಭಾವಕ್ಕೆ ಒಳಪಟ್ಟಿರುವುದನ್ನು ಗಮನಿಸ ಬಹುದಾಗಿದೆ. ಇಂಥವರಲ್ಲಿ ನೇಮಿವ್ರತಿ ಎಂಬವನು (ಸು. 1650) `ಸುವಿಚಾರಚರಿತೆ', `ಜ್ಞಾನಭಾಸ್ಕರಚರಿತೆ' ಎಂಬ ಕೃತಿಗಳನ್ನು ``ತುಳುರಾಜ್ಯಕಗ್ಗಳವಾದ ಬಿದರೆ''ಯಲ್ಲಿ ಹುಟ್ಟಿ ರಚಿಸಿದನು.

ಪಟ್ಟಾಭಿರಾಮನೆಂಬ ಒಬ್ಬ ಬ್ರಾಹ್ಮಣಕವಿ (ಸು. 1725) ಮೂಡಬಿದರೆಯನ್ನು ಚೌಟರಾಜರ ಪರಂಪರೆಯಲ್ಲಿ ಅಬ್ಬಕ್ಕ ದೇವಿ ಎಂಬವಳು ಆಳುತ್ತಿದ್ದಾಗ `ರತ್ನಶೇಖರಚರಿತೆ'ಯೆಂಬ ಒಂದು ಸಾಂಗತ್ಯಕಾವ್ಯ ರಚಿಸಿದನು. ಈ ಕೃತಿ ಒಂದು ಜೈನಕಾವ್ಯ; ಬರೆದಾತ ಬ್ರಾಹ್ಮಣ. ಕವಿಯ ಸ್ನೇಹಿತ ಜೈನನಾದ ಪದ್ಮನೆಂಬವನ (`ಪದ್ಮಾನುಮತದಿಂದೆ') ಕೋರಿಕೆಯಂತೆ ಕೃತಿ ರಚನೆಯಾಗಿದೆ. ಕವಿಚರಿತೆಕಾರರು ಕೂಡ ``ಈ ಕವಿ ಮತಾಂತರದವ ನಾದರೂ ಜೈನನಾದ ಸ್ನೇಹಿತನಿಗೋಸ್ಕರ ಜೈನಕವಿಗಳ ರೀತಿಯಲ್ಲಿಯೇ ಈ ಜೈನಗ್ರಂಥ ವನ್ನು ರಚಿಸಿರುವುದು ಗಮನಿಸತಕ್ಕ ವಿಷಯವಾಗಿದೆ'' ಎಂದಿದ್ದಾರೆ. ಇಂತಹ ಇನ್ನೊಂದು ಉದಾಹರಣೆ ಪ್ರಾಚೀನಕನ್ನಡಸಾಹಿತ್ಯದಲ್ಲಿ ಉಂಟೇ, ನನಗೆ ತಿಳಿಯದು. ಇದು ಮೂಡಬಿದರೆಯ ಮತೀಯ ಸಾಮರಸ್ಯದ ಒಂದು ದೃಷ್ಟಾಂತ.

ಶಾಂತಿಕೀತರ್ಿಮುನಿ (1725-1809) `ಪುರುದೇವಚರಿತೆ' (1725), `ಶಾಂತೀಶ್ವರಚರಿತೆ' (1809) ಎಂಬವೇ ಅಲ್ಲದೆ `ಪಾಶ್ರ್ವನಾಥಚರಿತೆ', `ಚತುವರ್ಿಂಶತಿ ತೀರ್ಥಕರಕಲ್ಯಾಣ' ಮುಂತಾಗಿ ಇನ್ನೂ ಹಲವು ಕೃತಿಗಳನ್ನು ಬರೆದಿದ್ದಾನೆ. `ಪಾಶ್ರ್ವನಾಥ ಚರಿತೆ'ಯನ್ನು ಆದಿನಾಥನಿಗೆ ಸಮಪರ್ಿತವಾದ ಬಸದಿಯಲ್ಲಿ ರಚಿಸಿದ ಸಾಧ್ಯತೆಯಿದೆ.

ವೇಣೂರು `ಭುಜಬಲಿಚರಿತೆ' ರಚಿಸಿದ ಪದ್ಮನಾಭನೆಂಬ ಕವಿ (ಸು. 1750) ಮೂಡಬಿದರೆ ಸ್ಥಳದವನು, ಪದ್ಮಶೆಟ್ಟಿ-ಪದ್ಮಾವತಿಯರ ಮಗ. 28 ಸಂಧಿ, 4705 ಸಾಂಗತ್ಯಪದ್ಯಗಳ ದೊಡ್ಡ ರಚನೆ. ಶ್ರವಣಬೆಳಗೊಳ, ಕಾರ್ಕಳ ಇಲ್ಲಿಯ ಗೊಮ್ಮಟ ಜಿನಚರಿತ್ರೆಗಳುಂಟು; ಆದರೆ ವೇಣೂರುಕ್ಷೇತ್ರದ ಗೊಮ್ಮಟನ ಚರಿತ್ರೆ ಬರೆದು, ಅಂಥ ಚರಿತ್ರೆಯೊಂದು ಇಲ್ಲದ ಕೊರತೆಯನ್ನು ಈ ಕವಿ ನೀಗಿದ್ದಾನೆ. ಪ್ರತಿ ಸಂಧಿಯ ಆರಂಭಕ್ಕೆ ಒಂದು ಸಂಸ್ಕೃತಪದ್ಯವಿರುವುದು ಕೂಡ ವಿಶೇಷವೇ.

ಈಚಿನ ಇನ್ನೊಬ್ಬ ದೊಡ್ಡ ಸಾಂಗತ್ಯಕವಿ ಚಂದಯ್ಯೋಪಾಧ್ಯಾಯ (1828) ಕೂಡ ಇಲ್ಲಿಯವನೇ. ಈತನ `ಜೈನಾಚಾರ'ವೆಂಬ 32 ಸಂಧಿ ? 3799 ಸಾಂಗತ್ಯ ಪದ್ಯಗಳ ರಚನೆ ಒಂದು ಕಥಾಕೋಶದಂತಿರುವ ಆಕರ್ಷಕಕೃತಿ. ಶ್ರವಣಬೆಳಗೊಳ ಮತ್ತು ಮೈಸೂರು ಸಂಸ್ಥಾನಗಳ ಸಮಕಾಲೀನ ಚರಿತ್ರೆಯ ಸಂಗತಿಗಳೂ ಇಲ್ಲಿ ಉಂಟು. ಇದಲ್ಲದೆ ಈತನ ಬೇರೆ ಕೆಲವು ರಚನೆಗಳೂ ಉಂಟು.

ಎರಡು ಪುಟ್ಟ ರಚನೆಗಳ ಬಗ್ಗೆ ಕೂಡ ಇಲ್ಲಿ ಹೇಳಬೇಕು. (1) ಮೂಡಬಿದರೆಯ ಬಸದಿಗಳಲ್ಲಿರುವ ಬಿಂಬಗಳ ಲೆಕ್ಕಪುಸ್ತಕ; ಸ್ಥಳದ ಚಾರಿತ್ರಿಕ ಆಕರಗಳಲ್ಲಿ ಇದೂ ಒಂದು. (2) `ತ್ರಿಭುವನಚೂಡಾಮಣಿ ಬಸದಿಯ ಜೀಣರ್ೋದ್ಧಾರ ಚರಿತ' (ಸು. 18ನೆಯ ಶತಮಾನ). ಇದೂ ಚಾರಿತ್ರಿಕವಿಶೇಷದ ಕೃತಿಯೇ.

ಹೀಗೆ ಬಸದಿಗಳ ಬಿಂಬಗಳ, ಪದಾರ್ಥಗಳ, ಜೀಣರ್ೋದ್ಧಾರವಿವರಗಳ ಕೃತಿಗಳನ್ನು ರಚಿಸುವ ಈ ಶ್ರದ್ಧೆ, ಧರ್ಮನಿಷ್ಠೆ ಯಾರಿಗಾದರೂ ವಿಶೇಷವೆಂದೇ ಹೇಳಬೇಕಾದ್ದು. ಈ ಕವಿಗಳು, ರತ್ನಾಕರನಿಂದ ಹಿಡಿದು ಚಂದಯ್ಯ ಉಪಾಧ್ಯಾಯನ ವರೆಗೆ, ಮಾಡಿರುವ ಪರಿಶ್ರಮ, ಪ್ರಕಟಿಸಿರುವ ಸ್ಥಳದ ಅಭಿಮಾನ ತೌಲನಿಕವಾಗಿಯೂ ವಿಶೇಷವೇ.

ಇದು ಹೇಗೆ ಸಾಧ್ಯವಾಯಿತು? ಮೂಡಬಿದರೆಯ ಈ ನೆಲದ ಫಲವತ್ತತೆ ಇದು. ಸಾಹಿತ್ಯ, ಧರ್ಮ, ಸಂಸ್ಕೃತಿ ಮುಪ್ಪುರಿಗೊಂಡಿರುವ ಈ ಉರ್ವರಾಕ್ಷೇತ್ರದಲ್ಲಿ ಡಾ. ಮೋಹನ ಆಳ್ವರ ನುಡಿಸಿರಿಯ ಸಂಕಲ್ಪ, ಯೋಜನೆ, ನಿರ್ವಹಣೆ ಕೂಡ ನಿತ್ಯಹರಿದ್ವರ್ಣದ ವಸಂತೋದ್ಯಾನದ ಹಾಗೆಯೇ ಹೂವಾಗಿದೆ, ಹಣ್ಣಾಗಿದೆ. ಇದು ನಿಂದ ನೆಲದ ಗುಣವೇ, ಸರಿ.

ಮೂಡಬಿದರೆಯ ಮಹಿಮೆ
ನಾನು ನಿಂದ ನೆಲದ ಗುಣ ಎಂದೆನಲ್ಲವೇ? ಅದನ್ನು ಬೇರೆ ಇನ್ನಷ್ಟು ವಿವರದಲ್ಲಿ ತಮಗೆ ನೆನಪು ಮಾಡಿಕೊಡುತ್ತೇನೆ.

ಮೂಡಬಿದರೆ ದಕ್ಷಿಣಭಾರತದ `ಜೈನಕಾಶಿ' ಎಂದು ಹೆಸರಾದ್ದು; ಬಿದರೆ ಎಂದರೂ ವಂಶಪುರ, ವೇಣುಪುರ ಎಂದರೂ ಇದೇ. 17ನೆಯ ಶತಮಾನದಲ್ಲಿ ಪುತ್ತಿಗೆಯ ಚೌಟರಸರ ಮೂರನೆಯ ಭೋಜರಾಯ ಇಲ್ಲಿ ಅರಮನೆ ಕಟ್ಟಿಸಿ ರಾಜಧಾನಿ ಮಾಡಿಕೊಂಡ ಮೇಲೆ ಮೇಲ್ಮೆ ಬೆಳೆಯಿತು. ಇಲ್ಲಿಯ ಜೈನಪೀಠಾಧಿಪತಿಗಳಿಗೆ ಪಟ್ಟವಾಗುವುದು ಇಲ್ಲಿಯ ಹಳೆಯ ಬಸದಿಯಲ್ಲಿ; ಇದು ಗುರುಬಸದಿ, ಸಿದ್ಧಾಂತಬಸದಿ. ಇಲ್ಲಿಯ 18 ಜಿನಬಸದಿಗಳಲ್ಲಿ ಸಾವಿರಕಂಬಗಳ ಬಸದಿ ಎಂದು ಲೋಕಪ್ರಸಿದ್ಧವಾದ `ತ್ರಿಭುವನತಿಲಕಚೂಡಾಮಣಿ' (1431) ಎಂಬುದು ದಕ್ಷಿಣಭಾರತದ ಉತ್ತಮ ವಾಸ್ತುನಿಮರ್ಾಣದಲ್ಲಿ ಒಂದು. ಬಸದಿಯ ಭೂಷಣವಾಗಿರುವ, ಏಳಡಿ ಎತ್ತರದ, ಪಂಚಲೋಹದ ಚಂದ್ರನಾಥಸ್ವಾಮಿಯ ಬಿಂಬ ಪ್ರಾಯಃ ದಕ್ಷಿಣಭಾರತದಲ್ಲಿಯೇ ಅತಿದೊಡ್ಡ ಚಂದ್ರನಾಥ ಜಿನಬಿಂಬವಾಗಿದೆ. ಭೈರಾದೇವಿ ಮಂಟಪದ ಕೆಳಗಲ್ಲುಗಳಲ್ಲಿ ಕೆತ್ತಲಾದ ಜಿರಾಫೆ ಮತ್ತು ಚೀನದ ಡ್ರೇಗನ್ ವಿಸ್ಮಯಕರ ಪ್ರಾಣಿಶಿಲ್ಪಗಳು.

ಸಿದ್ಧಾಂತಬಸದಿಯಲ್ಲಿ ಜೈನಧರ್ಮದ ಪವಿತ್ರ ಸಿದ್ಧಾಂತಗ್ರಂಥಗಳಾದ `ಧವಲಾ-ಜಯಧವಲಾ-ಮಹಾಧವಲ'ಗಳೆಂಬವು ಶ್ರೀತಾಳೆಯ ಓಲೆಪ್ರತಿಗಳಲ್ಲಿ, 12ನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿ ಲಿಖಿತವಾದ ಪ್ರಾಕೃತಭಾಷಾಗ್ರಂಥಗಳಾಗಿದ್ದು ಈ ಅತಿಶಯ ಗಾತ್ರವೈಭವದ ಹಸ್ತಪ್ರತಿಗಳ ಭವ್ಯತೆ, ಇಲ್ಲಿಯ ವರ್ಣರಂಜಿತ ಚಿತ್ರಗಳ ಕಲೆಗಾರಿಕೆ ಕನರ್ಾಟಕದ ಇತರ ಭಾಗಗಳಲ್ಲಿಯೇ ಆಗಲಿ, ಭಾರತದ ಯಾವುದೇ ಭಾಗದಲ್ಲಿಯೇ ಆಗಲಿ ಕಂಡುಬರುವುದಿಲ್ಲ ಎಂದಿದ್ದಾರೆ, ಪರಿಣತರು. ಈ ಸಾರಸ್ವತನಿಧಿ ಯಿದ್ದುದು ಮೂಡಬಿದರೆಯಲ್ಲಿ ಮಾತ್ರವೇ ಎನ್ನುವುದನ್ನು ಗಮನಿಸಿದರೆ, ಜೈನಧರ್ಮದ ಇತಿಹಾಸದಲ್ಲಿ ಈ ಕ್ಷೇತ್ರದ ಮಹಿಮೆಯೇನೆಂದು ತಿಳಿಯುತ್ತದೆ. `ಧವಳಗ್ರಂಥ'ಗಳ ಈ ಏಕೈಕ ಸಂರಕ್ಷಿತಪ್ರತಿ, ಏಳೆಂಟು ಪೆಟ್ಟಿಗೆಗಳಲ್ಲಿ ನಿಧಿಯಂತೆ ನಿಕ್ಷೇಪಗೊಂಡಿದ್ದುದು ಉತ್ತರಭಾರತದ ವಿದ್ವಾಂಸರ ಧರ್ಮಶ್ರದ್ಧೆಯ ಪ್ರಬಲ ಪ್ರಯತ್ನದಿಂದಾಗಿ ಸಂಪಾದನೆ ಗೊಂಡು ಲೋಕಪ್ರಕಟವಾಗುವುದು ಸಾಧ್ಯವಾಯಿತು. ಇದು ಶ್ರವಣಬೆಳಗೊಳದ ಶ್ರೀಮಠದ ಸ್ವಸ್ತಿಶ್ರೀ ಚಾರುಕೀತರ್ಿಭಟ್ಟಾರಕ ಸ್ವಾಮೀಜಿಯವರ ಪ್ರಧಾನಸಂಪಾದಕತ್ವದಲ್ಲಿ, ಅಲ್ಲಿಯ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾಸಂಸ್ಥೆಯ ಮೂಲಕ ಕನ್ನಡ ಅನುವಾದದಲ್ಲಿಯೂ ಶ್ರೀಮಂತಪ್ರಕಟನೆಯಾಗಿ ಈಚೆಗೆ 2005ರಿಂದ ಭಾಗಭಾಗಗಳಾಗಿ ಹಲವು ಸಂಪುಟಗಳಲ್ಲಿ ಪ್ರಕಟಗೊಂಡಿದೆ.

ಅನನ್ಯ ಗದ್ಯಕಾವ್ಯವಾದ `ವಡ್ಡಾರಾಧನೆ'ಯ ಸಂಪಾದನೆಗೆ ಧೈರ್ಯಕೊಟ್ಟದ್ದು ಇದೇ ಸ್ಥಳದಲ್ಲಿ ದೊರೆತ ಇನ್ನೊಂದು ಹಸ್ತಪ್ರತಿ. ನನ್ನ ಗುರುಗಳಾದ ಎನ್. ಅನಂತ ರಂಗಾಚಾರ್ಯರು ದಕ್ಷಿಣಕನ್ನಡದಲ್ಲಿ ಹಸ್ತಪ್ರತಿಗಳ ಸಂಗ್ರಹಕ್ಕೆಂದು ಸಂಚಾರ ಹೊರಟಾಗ ದೊರೆತದ್ದು, ಅದು. ತಮ್ಮ ಸಂಚಾರದ ಸ್ವಾರಸ್ಯವಾದ ಅನುಭವಗಳನ್ನು ಅವರು ಒಂದು ಲೇಖನದಲ್ಲಿ ವಿಸ್ತಾರವಾಗಿ ದಾಖಲಿಸಿದ್ದು, ಆ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು. 80 ವರ್ಷಗಳಷ್ಟು ಹಿಂದೆ ನಡೆದುದನ್ನು ನಿರೂಪಿಸಿರುವ ಈ ಅನುಭವಕಥನದಲ್ಲಿ ಇಲ್ಲಿ ಆಗ್ಗೆ ವಾಸವಿದ್ದ ಪಂಡಿತರಲ್ಲಿ ಕೆಲವರ ವಿಚಾರವೂ ಉಂಟು. ಪಂಡಿತ ಲೋಕನಾಥಶಾಸ್ತ್ರಿಗಳ ಸ್ವಂತ ಶ್ರೀ ವೀರವಾಣೀವಿಲಾಸ ಜೈನಸಿದ್ಧಾಂತಭವನ ದಲ್ಲಿಯೂ ನೂರಾರು ಹಸ್ತಪ್ರತಿಗಳಿದ್ದುದನ್ನು ದಾಖಲಿಸಿದ್ದಾರೆ. ಶ್ರೀಮಠದಲ್ಲಿ 10 ಕಪಾಟುಗಳ 940 ಓಲೆಗರಿಗಳ ಪುಸ್ತಕಗಳಿದ್ದುವೆಂದೂ 6 ಅಪೂರ್ವಗ್ರಂಥಗಳನ್ನು ಮೈಸೂರಿಗೆ ಪ್ರಾಚ್ಯಕೋಶಾಗಾರದ ಸಂಗ್ರಹಕ್ಕೆ ಎರವಲು ತಂದುದಾಗಿಯೂ ತಿಳಿಸಿದ್ದಾರೆ.

ಕಿಟ್ಟೆಲರ `ಶಬ್ದಮಣಿದರ್ಪಣ'ದ ಎರಡನೆಯ ಸುಧಾರಿಸಿದ ಆವೃತ್ತಿಯ ಪ್ರಕಟಣೆಗೆ (1897) ಮೂಡಬಿದರೆಯ ಭಂಡಾರದ ಹಸ್ತಪ್ರತಿ ತುಂಬ ಸಹಾಯಮಾಡಿತು. ಮೂಡಬಿದರೆಯ ಹಸ್ತಪ್ರತಿಗಳ ವಿವರಣೆಯ `ತಾಡಪತ್ರೀಯ ಗ್ರಂಥಸೂಚಿ'ಯಲ್ಲಿ ಉಕ್ತವಾಗಿರುವ ಪ್ರಕಾರ ಈ ಓಲೆಪ್ರತಿಯೇ ಈ ಗ್ರಂಥದ ಅತ್ಯಂತ ಪ್ರಾಚೀನ ಹಸ್ತಪ್ರತಿಯೆಂದು (1551) ತಿಳಿಯುವುದು.

ಮೂಡಬಿದರೆಯ ಮಹಿಮೆ ಇಲ್ಲಿಗೆ ಮುಗಿಯಲಿಲ್ಲ. ಇಲ್ಲಿಯ ದಿಗಂಬರ ಜೈನ ಧರ್ಮಶಾಲೆಯಲ್ಲಿಯ ಹಸ್ತಪ್ರತಿಗಳನ್ನು ನನ್ನ ಮಿತ್ರರಾದ ಬಿ.ಎಸ್. ಸಣ್ಣಯ್ಯನವರು ತಮ್ಮ ತಂಡದೊಂದಿಗೆ ಶೋಧಿಸಲೆಂದು ಬಂದಾಗ ದೊರೆತದ್ದು (1973), ಶತಮಾನಗಳ ಕಾಲ ಕತ್ತಲಲ್ಲಿ ಕರಗಿಹೋದಂತೆ ಹುದುಗಿದ್ದ 11ನೆಯ ಶತಮಾನದ ನಾಗವರ್ಮಕೃತ `ವೀರವರ್ಧಮಾನ ಪುರಾಣ' ಕೃತಿಯ ಏಕೈಕ ಕಾಗದದ ಹಸ್ತಪ್ರತಿ; ಹೀಗೆ ದೊರೆಯಲಾಗಿ ಆವರೆಗಿನ ಕನ್ನಡ ಸಾಹಿತ್ಯೇತಿಹಾಸದ ಅನೇಕ ವಿವರಗಳು ಸ್ಪಷ್ಟವಾದುವು, ತಪ್ಪುಗ್ರಹಿಕೆಗಳು ದೂರವಾದುವು. ಗ್ರಂಥಸಂಪಾದನೆಯಲ್ಲಿ ಸಂಪಾದಕರಿಗೆ ನಾನು ಕೂಡ ನೆರವಾದೆ; ಈಚೆಗೆ ಪಾಠಪರಿಷ್ಕರಣದ ವಿಸ್ತೃತಲೇಖನವನ್ನೂ ಪ್ರಕಟಿಸಿದೆ. ಈ ಕಾವ್ಯ ಪ್ರಕಟವಾದ ಹೊಸತರಲ್ಲಿ ನನ್ನದೊಂದು ಕೆಲಸಕ್ಕೆಂದು ನನ್ನ ಗುರುಗಳಾದ ಕುವೆಂಪು ಅವರ ಮನೆಗೆ ಹೋಗಿದ್ದಾಗ, ಅವರು ತಾವಾಗಿಯೇ ಈ ಗ್ರಂಥದ ವಿಶೇಷತೆಯ ಬಗ್ಗೆ ನನ್ನನ್ನು ಪ್ರಶ್ನಿಸಿದರು. ನಾನು ಕನ್ನಡಸಾಹಿತ್ಯೇತಿಹಾಸದ ಕೆಲವು ವಿವಾದಾಸ್ಪದವಾದ ವಿವರಗಳು ಪರಿಹಾರಗೊಂಡುದು, ಹೊಸ ವಿವರಗಳು ಬೆಳಕಿಗೆ ಬಂದುದು ಮತ್ತು ವಿವಿಧ ಛಂದೋಬಂಧಗಳು ಪ್ರಯೋಗವಾಗಿರುವುದು ಇವನ್ನು ಅವರ ಗಮನಕ್ಕೆ ತಂದೆ. ಹಾ.ಮಾ. ನಾಯಕರು ಕೂಡ ಪ್ರಶ್ನಿಸಿದ್ದುಂಟು. ಈ ಕೃತಿ ವಡ್ಡಾರಾಧನೆಯ ಅನಂತರದ ಅಮೂಲ್ಯವಾದ ಶೋಧವೆಂದು ಅವರಿಗೆ ಹೇಳಿದೆ. ಸಣ್ಣಯ್ಯನವರು ಈ ಗ್ರಂಥಭಂಡಾರವನ್ನು `ಸಂಶೋಧಕರಿಗೆ ತವನಿಧಿ' ಎಂದು ಕರೆದಿದ್ದಾರೆ.

ಈ ಸ್ಥಳದ ಹಸ್ತಪ್ರತಿಭಂಡಾರಗಳ ಸ್ಥಿತಿಗತಿಗಳು ಈಗ ಹೇಗಿವೆಯೋ ನನಗೆ ತಿಳಿಯದು. ಅವು ಧರ್ಮಶ್ರದ್ಧೆಯ, ಸಾಹಿತ್ಯಾಸಕ್ತಿಯ, ಸಂಸ್ಕೃತಿಪ್ರೇಮಿಗಳ ಆಸಕ್ತಿ ಕುತೂಹಲ ಗಳನ್ನು ತಣಿಸುವ ಹಾಗೆ ಸುವ್ಯವಸ್ಥೆಯ ಭಂಡಾರಗಳಾಗಬೇಕು; ಸಾಹಿತಿಗಳ, ಅಧ್ಯಯನಾ ಸಕ್ತರ ಸರಸ್ವತೀಭಂಡಾರಗಳಾಗಬೇಕು. ಆಸಕ್ತರು ಇವುಗಳ ಸುಸ್ಥಿತಿಗೆ ಶ್ರಮಿಸಬೇಕು.

ಮೂಡಬಿದರೆಯ ಬೆಟ್ಟಕೇರಿಯಲ್ಲಿಯ ಮುಡಿಂಜೆಯೆಂಬ ಜೈನಸ್ಮಾರಕಗಳ ವಿಚಾರವಿರಲಿ; ಚೌಟರಸರ ಅರಮನೆಯ ಕಾಷ್ಠಶಿಲ್ಪಗಳಲ್ಲಿಯ ಪಂಚನಾರೀತುರಂಗವೂ ನವನಾರೀಕುಂಜರವೂ ಒಂದು ಕುತೂಹಲದ ಕಲಾರಚನೆಯ ಕಲ್ಪನೆಯಾಗಿದ್ದು, ಸಾಹಿತ್ಯ ಕೃತಿಗಳಲ್ಲಿ ಕೂಡ ಇವುಗಳ ಉಲ್ಲೇಖವಿರುವಂತಿದೆ. ಆಸಕ್ತರು ವಿಶೇಷ ಅಧ್ಯಯನದಿಂದ ಈ ಕಲಾಕೃತಿಗಳ ಸಂದೇಶ ಸಂವಿಧಾನಗಳನ್ನು ಸಂಶೋಧಿಸಬೇಕೆಂಬುದು ನನ್ನ ಅಪೇಕ್ಷೆ.

ಹಿರಿಯ ವಿದ್ವಾಂಸರಾಗಿದ್ದ ಆ.ನೇ. ಉಪಾಧ್ಯೆ ಅವರು ಜೈನಶೌರಸೇನೀ ಪ್ರಾಕೃತಭಾಷೆಯ ಪ್ರಾಚೀನ ಜೈನಗ್ರಂಥ `ಮೂಲಾಚಾರ'ದ (ಕ್ರಿ.ಶ. 4-5ನೆಯ ಶತಮಾನ) ಕತರ್ೃ ವಟ್ಟಕೇರ ಎಂಬುವನು ಈ ಪ್ರಾಂತದ ಬೆಟ್ಟಕೇರಿಯವನಿರಬಹುದೇ ಎಂದು ಪ್ರಾಸಂಗಿಕವಾಗಿ ನನ್ನೊಂದಿಗೆ ಮಾತಾಡುತ್ತ ಹೇಳಿದ ಹಾಗೆ ನನ್ನ ನೆನಪು. ಇದನ್ನು ಖಚಿತಪಡಿಸಿಕೊಳ್ಳಬೇಕು. ಇದು ಆಸಕ್ತರ ಹೊಸ ಉತ್ಸಾಹದ ಹುಡುಕಾಟದಿಂದ ಸಾಧ್ಯವಾಗಬೇಕು.

`ಪೂರ್ವಸೂರಿಭ್ಯೋ ನಮಃ'
ಅವಿಭಕ್ತ ದಕ್ಷಿಣಕನ್ನಡದ ನಿತ್ಯಹರಿದ್ವರ್ಣ ವನಸಿರಿಯ ಈ ಪ್ರಾಂತವನ್ನು ಕವಿಗಳೂ ವಿದ್ವಾಂಸರೂ ವಿದ್ವತ್ಕವಿಗಳೂ ಇತಿಹಾಸಕಾರರೂ ವಿಜ್ಞಾನಿಗಳೂ ಕಲಾವಿದರೂ ತಮ್ಮ ವಿದ್ಯಾಪ್ರೌಢಿಮೆಯ ಶ್ರೀಮಂತಿಕೆಯಿಂದ ಸಂಪನ್ನಗೊಳಿಸಿರುವುದು ಇಡಿಯ ಕನರ್ಾಟಕಕ್ಕೆ ಮಾತ್ರವಲ್ಲ, ಭಾರತಕ್ಕೇ ಹೆಮ್ಮೆಯ ವಿಷಯ. ರಾಜನೀತಿ, ಅರ್ಥನೀತಿ, ಆಡಳಿತವಿಚಕ್ಷಣೆ, ವಿದ್ಯಾಪೋಷಣೆ, ಧರ್ಮಪೀಠ ಮತ್ತು ವಿದ್ಯಾಪೀಠಗಳ ನಿರ್ವಹಣೆ, ಕಲೆ ಮತ್ತು ಸಂಸ್ಕೃತಿಗಳ ಪ್ರೋತ್ಸಾಹ ಈ ಎಲ್ಲ ವಿಷಯಗಳಲ್ಲಿಯೂ ಇಲ್ಲಿಯ ನಡೆ ಎಂದೂ ಮುನ್ನಡೆ, ನುಡಿ ಎಂದೂ ಮುನ್ನುಡಿ.

ದಕ್ಷಿಣ ಕನ್ನಡದ ಬರಹಗಾರರ ಪರಿಚಯ ಒಂದೇ ಕಡೆ ಸಿಕ್ಕುವ ಹಾಗೆ ಪುಸ್ತಕ ವೇನಾದರೂ ಬಂದಿದೆಯೇ, ನನಗೆ ತಿಳಿಯದು. ಬಂದಿದ್ದರೆ, ಸಂತೋಷ. ಅಲ್ಲವಾದರೆ, ತುತರ್ಾಗಿ ಅದು ಆಗಬೇಕಾದ್ದು. ಈಚಿನ ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿಯ ಎಂ.ಜಿ.ಎಂ. ಕಾಲೇಜು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪುತ್ತೂರಿನ ಕಣರ್ಾಟಕ ಸಂಘ, ಕಾಂತಾವರದ ಕನ್ನಡಸಂಘ, ಉಜಿರೆಯ ಡಾ. ಹಾ.ಮಾ.ನಾ. ಸಂಶೋಧನ ಕೇಂದ್ರ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಂಶೋಧನ ವಿಭಾಗ, ಮೂಡಬಿದರೆಯ ಶ್ರೀ ವೀರವಾಣೀವಿಲಾಸ ಜೈನಸಿದ್ಧಾಂತಭವನ, ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ ಮೊದಲಾದ ಮಿಷನರಿ ಸಂಸ್ಥೆಗಳು ? ಹೀಗೆ ಎಷ್ಟೋ ಸಂಸ್ಥೆಗಳು, ಪತ್ರಿಕೆಗಳ ಕಾಯರ್ಾಲಯಗಳು ಮಾಡುತ್ತಿರುವ ಸಾಹಿತ್ಯಸೃಷ್ಟಿ ? ಸೇವೆ ? ಪ್ರಕಾಶನ ಮತ್ತು ಪರಿಚಾರಿಕೆಗಳು ಇಲ್ಲಿಯ ಬೌದ್ಧಿಕ ಸಂಪತ್ತನ್ನು ಬೆಳಸುವಲ್ಲಿ ಮಾದರಿ ಎನ್ನುವಂತಿವೆ. ಈ ವಿಷಯದಲ್ಲಿ ಪುಸ್ತಕಪ್ರಕಾಶಕರ, ಮಾರಾಟಗಾರರ ಒತ್ತಾಸೆಯೂ ಸೇರಿರುವುದು ಶ್ಲಾಘ್ಯವಾದ ಸಂಗತಿ.

19-20ನೆಯ ಶತಮಾನದ ಸಂಧಿಕಾಲದಿಂದ, ಎಂದರೆ ಮುದ್ದಣನೆಂಬ ಕವಿ ಮುಂಗೋಳಿಯಾಗಿ ಸಾಹಿತ್ಯರಚನೆಗೆ ದನಿಯೆತ್ತಿದಂದಿನಿಂದ ಕನ್ನಡವನ್ನು ಕಟ್ಟಿ ಬೆಳಸಿದ ಪ್ರಾತಃಸ್ಮರಣೀಯರು ಇಲ್ಲಿ ಪುಸ್ತಕ-ಪತ್ರಿಕೆ-ಪ್ರಕಾಶನ-ಪ್ರತಿಷ್ಠಾನ-ಪ್ರಸಾರ ಎಂಬ ಐದು ಮುಖಗಳಲ್ಲಿ ಭಾಷಾಭಾರತಿಯ ಸೇವೆಯನ್ನು ನಿರ್ಮಲಾಂತಃಕರಣದಿಂದ ಮಾಡುತ್ತ ಬಂದಿದ್ದಾರೆ. ಇವರ ಸ್ಮರಣೆ ಅವಶ್ಯವೆಂದು ನಾನು ಅವರ ಹೆಸರುಗಳನ್ನು ಗುರುತಿಸಿಕೊಳ್ಳುತ್ತ ಹೋದಂತೆ, ಅದು ಸುಮಾರು ನೂರರ ಗಣನೆಗೆ ಬಂತು. ಅವನ್ನಿಲ್ಲಿ ಹೇಳಲು ಹೊರಟರೆ ಮತ್ತಷ್ಟು ಹೆಸರುಗಳು ಉಳಿದುಕೊಂಡು, ಅದು ಅಪಚಾರವಾಗುತ್ತದೆ ಎನ್ನುವ ಆತಂಕ ನನ್ನನ್ನು ಕಾಡಿತು. ಆದರೂ ಸಾಂದಭರ್ಿಕವಾಗಿ, ಪ್ರಾತಿನಿಧಿಕವಾಗಿ ಕೆಲವರ ಹೆಸರುಗಳನ್ನು ಇಲ್ಲಿ ಹೇಳಲು ತಮ್ಮ ಅಪ್ಪಣೆ ಬೇಡುತ್ತೇನೆ.

ಪಂಜೆ ಮಂಗೇಶರಾವ್, ಪಾತರ್ಿಸುಬ್ಬ, ಎಂ. ಗೋವಿಂದ ಪೈ, ಕಡೇಕಾರು ರಾಜಗೋಪಾಲ ಕೃಷ್ಣರಾವ್, ಕೆರೋಡಿ ಸುಬ್ಬರಾವ್, ಮುಳಿಯ ತಿಮ್ಮಪ್ಪಯ್ಯ, ಬೆನಗಲ್ ರಾಮರಾವ್, ಉಗ್ರಾಣ ಮಂಗೇಶರಾವ್, ಉಳ್ಳಾಲ ಮಂಗೇಶರಾವ್, ಕಡೆಂಗೋಡ್ಲು ಶಂಕರಭಟ್ಟ, ಸೇಡಿಯಾಪು ಕೃಷ್ಣಭಟ್ಟ, ಕಡವ ಶಂಭುಶರ್ಮ, ಗುಲ್ವಾಡಿ ವೆಂಕಟರಾವ್, ಬೋಳಾರ ಬಾಬುರಾವ್, ಹಟ್ಟಿಯಂಗಡಿ ನಾರಾಯಣರಾವ್, ಪಾವಂಜೆ ಗುರುರಾವ್, ತೋನ್ಸೆ ಮಂಗೇಶರಾವ್, ಹಟ್ಟಿಯಂಗಡಿ ರಾಮಭಟ್ಟ, ಬೆಳ್ಳೆ ರಾಮಚಂದ್ರರಾವ್, ಎಂ. ರಾಮನ್ ನಂಬಿಯಾರ್.

ಪೇಜಾವರ ಸದಾಶಿವರಾವ್, ತೆಕ್ಕುಂಜ ಗೋಪಾಲಕೃಷ್ಣಭಟ್ಟ, ಬಾಗಲೋಡಿ ದೇವರಾಯ, ಪಡುಕೋಣೆ ರಮಾನಂದರಾವ್, ಉಡುಪಿ ವೆಂಕಟಕೃಷ್ಣರಾವ್, ಕು.ಶಿ. ಹರಿದಾಸಭಟ್ಟ, ಪಾ.ವೆಂ. ಆಚಾರ್ಯ, ಎಂ. ಮರಿಯಪ್ಪ ಭಟ್ಟ, ಎಂ.ಎನ್. ಕಾಮತ್, ಕೊಳಕೆ ಪರಮೇಶ್ವರ ಮಯ್ಯ, ಬಿ.ಎಚ್. ಶ್ರೀಧರ, ಬೈಕಾಡಿ ವೆಂಕಟಕೃಷ್ಣರಾವ್, ಸುರತ್ಕಲ್ ವೆಂಕಟರಾಯಾಚಾರ್ಯ, ಎ.ಎಸ್. ಕೆದಿಲಾಯ, ಕ.ಪು. ಸೀತಾರಾಮ ಕೆದಿಲಾಯ, ವೆಂಕಟರಾಜ ಪುಣಿಂಚತ್ತಾಯ, ಪಿ. ಗುರುರಾಜ ಭಟ್ಟ, ಬಿ.ಎ. ಸಾಲೆತ್ತೂರು, ಪಾಂಡೇಶ್ವರ ಗಣಪತಿ ರಾವ್, ದಾಮೋದರ ಬಾಳಿಗ, ಮಂದಾರ ಕೇಶವ ಭಟ್ಟ, ಕೀಕಾನ ರಾಮಚಂದ್ರ, ವಿಶುಕುಮಾರ್, ಉ.ಕಾ. ಸುಬ್ಬರಾಯಾಚಾರ್ಯ, ಎಸ್.ವಿ. ಪರಮೇಶ್ವರ ಭಟ್ಟ, ವ್ಯಾಸರಾಯ ಬಲ್ಲಾಳ, ನಿರಂಜನ, ಸೇವ ನಮಿರಾಜ ಮಲ್ಲ, ಕೆ.ವಿ. ರಮೇಶ್.

ಕೋಟ ಶಿವರಾಮ ಕಾರಂತ, ಕಯ್ಯಾರ ಕಿಯ್ಯಣ್ಣ ರೈ, ಟಿ. ಕೇಶವಭಟ್ಟ, ಎಂ. ಗೋಪಾಲಕೃಷ್ಣ ಅಡಿಗ, ಚಕ್ರಕೋಡಿ ಸುಬ್ರಹ್ಮಣ್ಯ ಶಾಸ್ತ್ರಿ, ಚಕ್ರಕೋಡಿ ನಾರಾಯಣ ಶಾಸ್ತ್ರಿ, ಧರ್ಮಸ್ಥಳ ಮಂಜಯ್ಯ ಹೆಗ್ಗಡೆ, ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ), ಕೆ.ಪಿ. ವೆಂಕಪ್ಪ ಶೆಟ್ಟಿ, ಹುರುಳಿ ಭೀಮರಾವ್, ಮೂಲ್ಕಿ ಶ್ರೀನಿವಾಸ ಭಾಗವತ, ಕ್ರಿಸ್ತಾನುಜ ವತ್ಸ, ಯು. ಅಮ್ಮೆಂಬಳ ಶಂಕರನಾರಾಯಣ ನಾವಡ, ಡಿ.ವಿ. ಹೊಳ್ಳ, ಪಂಡಿತ ತಾರಾನಾಥ್, ಬೋಳಂತಕೋಡಿ ಈಶ್ವರ ಭಟ್ಟ, ಪಿ. ಸುಬ್ರಾಯ ಭಟ್ಟ, ನವಗಿರಿ ನಂದ.

ಸುಬ್ಬಯ್ಯ ಶಾಸ್ತ್ರಿ, ಎ. ಶಾಂತಿರಾಜ ಶಾಸ್ತ್ರಿ, ಕೆ. ಭುಜಬಲಿ ಶಾಸ್ತ್ರಿ, ವಿ. ಲೋಕನಾಥ ಶಾಸ್ತ್ರಿ, ಶಿಶುಪಾಲ ಪಾಶ್ರ್ವನಾಥ ಶಾಸ್ತ್ರಿ, ಪಂಡಿತ ಜಿನರಾಜ ಶಾಸ್ತ್ರಿ, ಜಗತ್ಪಾಲಯ್ಯ, ದೇವಕುಮಾರ ಶಾಸ್ತ್ರಿ, ನೆಲ್ಲಿಕಾರು ರಾಧಾಬಾಯಿ, ಸರಸ್ವತೀಬಾಯಿ ರಾಜವಾಡೆ, ಕಮಲಾದೇವಿ ಚಟ್ಟೋಪಾಧ್ಯಾಯ. ಇವರಲ್ಲಿ ಹಲವರ ಜೀವನ ಸಾಧನೆಗಳ ವಿಷಯ ಇನ್ನೂ ವ್ಯಾಪಕವಾಗಿ ಕೆಲಸವಾಗಬೇಕು. ವಿಸ್ಮೃತಿಗೆ ಸಂದುಹೋಗಿರುವುದನ್ನು ತೆಗೆದು ತೋರುವುದೂ ಬೆಳಗುವುದೂ ಹೊಸ ಶೋಧವೇ. ಕನ್ನಡ ಸಾಹಿತ್ಯ ಪರಿಷತ್ತಿನ `ಆಧುನಿಕಕನ್ನಡ ಸಾಹಿತ್ಯಚರಿತ್ರೆ', ಸಂಪುಟ 1 (2015) ಕೆಲವು ಆಧಾರ ಸಾಮಗ್ರಿಯನ್ನು ದಿಕ್ಸೂಚಿಯಾಗಿ ನೀಡಬಲ್ಲುದು.

ಇಲ್ಲಿ ವಿಶೇಷವಾಗಿ ಹೇಳತಕ್ಕ ಕೆಲವು ಮಾತುಗಳಿವೆ.

(1) ಹೆಚ್ಚು ಮಂದಿ ಸಾಹಿತಿಗಳು ಯಕ್ಷಗಾನ ಕೃತಿಗಳ ರಚನೆಯಲ್ಲಿ ಆಸಕ್ತಿತೋರಿದ್ದಾರೆ. ಯಕ್ಷಗಾನಕೃತಿಭಂಡಾರವನ್ನು ಬೆಳಸಿದ್ದಾರೆ. ಸ್ಥಳೀಯ ಸಂಸ್ಕೃತಿಯ ವಿಶೇಷತೆಯನ್ನು ಎತ್ತಿ ತೋರಿಸಿದ್ದಾರೆ.

(2) ದಕ್ಷಿಣ ಕನ್ನಡದ ಈ ಪ್ರಾಂತದಲ್ಲಿ ಕಾವ್ಯಸತ್ತ್ವ ? ವಿದ್ವತ್ಪ್ರೌಢಿಮೆ ಸಮಸಮಾಯೋಗ ವಾಗಿರುವ ಸಾಹಿತಿಗಳು ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ. ಕವಿಗಳಿಗೆ ಹಳೆಯ ಭಾಷೆ, ಹಳೆಯ ಶೈಲಿ ಛಂದಸ್ಸುಗಳ ಕಡೆಗೆ ಒಲವು ಹೆಚ್ಚು.

(3) ದೊಡ್ಡ ಸಾಹಿತ್ಯಿಕ ಯೋಜನೆಗಳನ್ನು ಸಾಂಸ್ಥಿಕವಾಗಿ ಕೈಗೆತ್ತಿಕೊಂಡು ಕೈಗೂಡಿಸಿರು ವುದರಲ್ಲಿ ವಿಚಕ್ಷಣೆಯಿಂದ ದುಡಿಯಬಲ್ಲ ಸಾಹಿತ್ಯಸಂಘಟಕರು ಇಲ್ಲಿ ಹೆಚ್ಚಾಗಿದ್ದಾರೆ.

(4) ಪೂರ್ವಸೂರಿಗಳ ವಿಷಯದಲ್ಲಿ ಅಪಾರವಾಗಿ ಭಕ್ತಿ ಗೌರವಗಳನ್ನು ತಳೆದ ಸಾಹಿತ್ಯಪ್ರೇಮಿಗಳು ಆ ಪೂರ್ವಸೂರಿಗಳ ಬರಹಗಳ ಸಮಗ್ರಸಂಪುಟಗಳನ್ನು ಅಚ್ಚುಕಟ್ಟಾಗಿ ಅಣಿಗೊಳಿಸಿ ಪ್ರಕಟಿಸುವುದರಲ್ಲಿ ನಿಪುಣರಾಗಿದ್ದಾರೆ.

ಮೂಡಬಿದರೆಯ ವಿದ್ಯಾಗಿರಿಯಲ್ಲಿಯೇ, ವಿದ್ಯಾಗಿರಿ ಎಂಬ ಹೆಸರಿಗೆ ತಕ್ಕಂತೆ ಸ್ಥಳೀಯ ಕವಿ-ಕಲಾವಿದ-ವಿದ್ವಾಂಸ-ವಿಜ್ಞಾನಿ-ಇತಿಹಾಸಕಾರರ ಒಂದು ಪುಸ್ತಕ ಭಂಡಾರವೂ ವಸ್ತುಕೋಶವೂ ಸ್ಥಾಪನೆಯಾದರೆ, ಅದು ಈ ಹಿರಿಯರಿಗೆ ತೋರಿಸಿದ ದೊಡ್ಡ ಗೌರವವಾಗುತ್ತದೆ. ಇದಕ್ಕೆ ಡಾ. ಮೋಹನ ಆಳ್ವರು ಆ ಹಿರಿಯರ ಸಂತತಿಯವರ ಹಾಗೂ ಸಾರ್ವಜನಿಕರ ಸಹಕಾರ ಪಡೆದು ಕಾಯರ್ೋನ್ಮುಖರಾಗಲಿ ಎಂದು ನಾನು ಹಾರೈಸುತ್ತೇನೆ. ಅವರಂತಹ ಸದಭಿರುಚಿಯ ಧೀರ ಸಂಘಟಕರನ್ನು ನಾವು ಪಡೆದಿರುವಾಗ, ನಮಗೆ ಸಾಧ್ಯವಾಗದ್ದು ಏನಿದೆ?

ಈಚೆಗೆ ಈ ಪ್ರದೇಶದಲ್ಲಿ ಕನ್ನಡದ ಐಕ್ಯಗಾನವನ್ನು ಹಾಡಿ ಹಾಡಿ ಕಣ್ಮರೆಯಾದ ನಾಡೋಜ ಕಯ್ಯಾರ ಕಿಯ್ಯಣ್ಣ ರೈ ಅವರ ಹೆಸರು ನಿಲ್ಲುವಂತೆ ಏನಾದರೂ ಏಪರ್ಾಡು ಆಗಬೇಕು. ಈ ಭಾಗದಲ್ಲಿಯೇ ಹಿರಿಯ ಅಧಿಕಾರಿಗಳಾಗಿದ್ದ ಜಾನಪದಲೋಕದ ಎಚ್.ಎಲ್. ನಾಗೇಗೌಡ, ಪ್ರಸಿದ್ಧ ಕಾದಂಬರಿಕಾರ ಭಾರತೀಸುತ, ಪದಾರ್ಥಚಿಂತಾಮಣಿಯ ಪಾ.ವೆಂ. ಆಚಾರ್ಯ, `ಮೈಸೂರು ಮಲ್ಲಿಗೆ'ಯ ಕವಿ ಕೆ.ಎಸ್. ನರಸಿಂಹಸ್ವಾಮಿ, ನಾಟಕಕಾರ -ಅನುವಾದಕ-ಕಾದಂಬರಿಕಾರ ಸಿ.ಕೆ. ನಾಗರಾಜರಾಯ ಇವರ ಶತಮಾನೋತ್ಸವಗಳ ಸಂದರ್ಭವೂ ಬಂದಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ-ಸಂಸ್ಕೃತಿ ನಿದರ್ೇಶನಾಲಯ ಈ ಬಗ್ಗೆಯೂ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಶ್ರೀಯವರ `ಕವಿಶಿಷ್ಯ'ನ (ಮೂಲ: ಖಿಜ ಖಛಿಠಟಚಿಡಿ: ಖಠಛಜಡಿಣ ಖಠಣಣಜಥಿ) ಈ ಮಾತು ನನಗೆ ಬಹು ಪ್ರಿಯವಾದ್ದರಿಂದ, ಅದರಿಂದ ಈ ಭಾಗವನ್ನು ಮುಗಿಸುತ್ತೇನೆ.

ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ
ಬಳಸಿ ಬಂದಿಹರ ಕಾಣುತಿಹೆನು,
ಎತ್ತೆತ್ತ ಸುಳಿಸುವೆನೊ ಈ ಕಣ್ಣನತ್ತತ್ತ
ಹಳಮೆಯ ಮಹಾತ್ಮರನು, ಪರಮಕವಿಗಳನು.
ನನಗವರೆ ಕೈಬಿಡದ ಕೆಳೆಯರಾದವರು
ದಿನದಿನದಿ ಮಾತುಕಥೆಗೆನಗಿರುವರವರು.

ಯಕ್ಷಗಾನದ ಲಕ್ಷದೀಪ

ಕನರ್ಾಟಕದ ರಂಗಕಲೆಯ ವೈವಿಧ್ಯಮಯ ಪ್ರಕಾರಗಳಲ್ಲಿ ಮುಖ್ಯವಾದ್ದು, ಪ್ರಾಣಪದಕ ದಂತೆ ಉಜ್ವಲವಾದ್ದು ಎಂದರೆ ಯಕ್ಷಗಾನ. ಹಲಕೆಲವು ಸೀಳುಗಳಲ್ಲಿ, ಪ್ರಾದೇಶಿಕಭೇದಗಳಲ್ಲಿ ಅದರ ವ್ಯಾಪ್ತಿ ವೈವಿಧ್ಯಗಳಿವೆ. ಶತಮಾನಗಳಿಂದ ಬೆಳೆದುಕೊಂಡು ಬಂದ ಈ ಕಲೆ ದೃಶ್ಯ ಮತ್ತು ಶ್ರವ್ಯ ಎರಡು ಮಾಧ್ಯಮಗಳನ್ನೂ ಬಂಧುರವಾಗಿ ಬೆಸೆದುಕೊಂಡು ರಸಿಕಜನಮನೋರಂಜಕವಾಗಿ ಖ್ಯಾತವಾಗಿದೆ. ವಿಶೇಷವಾಗಿ ತೌಳವಪ್ರಾಂತದಲ್ಲಿ ಅದರ ವಿಲಾಸ, ವಿಜೃಂಭಣೆ. ತುಳುನಾಡ ರಾಣಿ ಯಕ್ಷಗಾನವಿನೋದಿನಿ. ಕಾವ್ಯೇತಿಹಾಸಗಳ, ಪುರಾಣಗಳ, ನಾನಾ ದೇವತೆಗಳ, ದೇವತಾಕ್ಷೇತ್ರಗಳ ಕಥೆಗಳನ್ನೂ ಮಾಹಾತ್ಮ್ಯಗಳನ್ನೂ ಕಣ್ಣೆದುರು ಕಟ್ಟಿ ನಿಲ್ಲಿಸುವ ಈ ಯಕ್ಷಗಾನವೆಂಬ ಕಲೆ ಇಲ್ಲಿ ತಾನೊಂದು ಜನತಾ ವಿಶ್ವವಿದ್ಯಾನಿಲಯವಾಗಿ ಬೆಳೆದಿದೆ. ಜನತೆಗೆ ಹತ್ತಿರವಾದುದರಿಂದಲೇ ಜನಪದಮೂಲದ ಕಥೆಗಳೂ ಇಲ್ಲಿ ಸೇರಿವೆ.

ಯಕ್ಷಗಾನ ಕರಾವಳಿಪ್ರದೇಶದಲ್ಲಿ ಒಂದು ವೃತ್ತಿಯಾಗಿ ಬೆಳೆದು ಜನತೆಯ ಸಂಸ್ಕೃತಿಯ ಭಾಗವಾಗಿರುವುದು ಒಂದು ವಿಶೇಷ. ಬಡಗತಿಟ್ಟು, ತೆಂಕತಿಟ್ಟು, ಸಣ್ಣಾಟ, ದೊಡ್ಡಾಟ ಎಂಬ ಹೆಸರುಗಳೇ ಇವುಗಳ ದೇಸಿಯ ದೇಸೆಯನ್ನು ಕಡೆದು ನಿಲ್ಲಿಸಿವೆ. ಅಲ್ಲಲ್ಲಿಯ ಸಂಪ್ರದಾಯಗಳ ಕಥಾವಸ್ತು, ಪ್ರದರ್ಶನವಿಧಾನ, ಮಾತುಗಾರಿಕೆ, ವೇಷಭೂಷಣ, ರಂಗಸ್ಥಲ ಇವು ಸಾಕಷ್ಟು ತುಲನಾತ್ಮಕ ಅಧ್ಯಯನಗಳಿಗೆ ಅವಕಾಶಮಾಡುತ್ತವೆ. ಇಂತಹ ಅಧ್ಯಯನಗಳು ಈಗಾಗಲೇ ಸಾಕಷ್ಟು ನಡೆದಿರಬಹುದು; ಇನ್ನೂ ಅವಕಾಶಗಳಂತೂ ಇವೆ.

ಇದೇ ಸಂದರ್ಭದಲ್ಲಿ ದಕ್ಷಿಣಕನ್ನಡದ ಯಕ್ಷಗಾನಕಲಾವಿದರ, ಸಂಶೋಧಕರ ಗಮನವನ್ನು ಮಧ್ಯಕನರ್ಾಟಕದ ಯಕ್ಷಗಾನಸಾಹಿತ್ಯಕೃತಿಗಳ ಬಗೆಗೆ ಸೆಳೆಯಬಯಸುತ್ತೇನೆ. ಮುಮ್ಮಡಿ ಕೃಷ್ಣರಾಜ ಒಡೆಯರ ಅಳಿಯಂದಿರು ಅಳಿಯ ಲಿಂಗರಾಜ ಕವಿ (1823-74) ಬರೆದ ಹಲವಾರು ಕೃತಿಗಳಲ್ಲಿ ಕೆಲವು ಯಕ್ಷಗಾನಕೃತಿಗಳೂ ಇವೆ; ಹಾಗೆಯೇ ಈತನ ಆಶ್ರಿತನಾದ ನಂಜಯ್ಯನೆಂಬುವನು (ಸು. 1860) ಘಟ್ಟದ ಕೆಳಗಣಿಂದ ಬಂದು ಲಿಂಗರಾಜನ ಆಶ್ರಯ ಪಡೆದವನು ರಚಿಸಿದ ನಾಲ್ಕಾರು ಯಕ್ಷಗಾನಕೃತಿಗಳಿವೆ. ಇವರ ಬಗೆಗೆ ಕವಿಚರಿತೆಕಾರರು ಹಲವು ವಿವರಗಳನ್ನು ಕೊಟ್ಟಿದ್ದಾರೆ. ಇವನ್ನು ಭಾಷೆ ವಸ್ತು ಪ್ರದರ್ಶನಗಳ ದೃಷ್ಟಿಯಿಂದ, ತುಲನಾತ್ಮಕದೃಷ್ಟಿಯಿಂದ ಅಭ್ಯಾಸಮಾಡಲು ಬೇಕಾದ ಹಾಗೆ ಅವಕಾಶಗಳಿವೆ. ನಂದಳಿಕೆಯಿಂದ ಮೈಸೂರಿಗೆ ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿ ಯಕ್ಷಗಾನದ ಮೇಳವೊಂದು ಬಂದು ಬಿಡಾರಮಾಡಿದ ಮೇಲೆ ಇಲ್ಲಿ ಈ ಕಲೆಯ ಪರಿಚಯವಾಗಿರಬೇಕು.

ಯಕ್ಷಗಾನ ಬಯಲಾಟಗಳಲ್ಲಿ ವೀರರಸವೇ ಪ್ರಧಾನವಾಗಿರುವುದೇಕೆ, ವಾದ್ಯದ ಬಳಕೆಯಲ್ಲಿ ಚಂಡೆಗೆ ಮಹತ್ತ್ವವೇಕೆ, ರಂಗಸ್ಥಲದ ಅಟ್ಟಣೆಯಂಥ ವೇದಿಕೆಯ ಕಟ್ಟುಪಾಡು ಗ್ರೀಕ್ ರಂಗಭೂಮಿಯ ಅದೊಂದು ಬಗೆಯ ವತರ್ುಲರಂಗದ ವಿನ್ಯಾಸವನ್ನು ಹೋಲುವುದೇಕೆ, ಸಂಗೀತವಿದ್ಯೆಯಲ್ಲಿ `ಮನೋಧರ್ಮಸಂಗೀತ' ಎಂದು ವಿಮಶರ್ಿಸಿ ನೋಡುವಂತೆ ಯಕ್ಷಗಾನದ ಪ್ರದರ್ಶನಗಳಲ್ಲಿಯೂ ಹಾಗೆಯೇ ವಿಮಶರ್ಿಸಿ ನೋಡಬಹುದೇ, ದೇವಾಲಯಗಳ ಶಿಲ್ಪ ಮತ್ತು ವಾಸ್ತು ರಚನೆಗಳ ದೃಷ್ಟಿಯಿಂದ ಕಲಾವಿದರ ಭಂಗಿವಿಶೇಷಗಳನ್ನೂ ಆಭೂಷಣಗಳನ್ನೂ ಕೂಡಿಸಿ ವಿಚಾರಮಾಡಬಹುದೇ, ಒಂದೊಂದು ಮೇಳದ ವೈಖರಿ ವೈಶಿಷ್ಟ್ಯಗಳೇನು, ಕಲಾವಿದರ ಪ್ರತಿಭೆ ಎಂಥದು ? ಇಂತಹ ಪ್ರಶ್ನೆಗಳನ್ನು ಎತ್ತಿ ಪರಿಹಾರದ ಶೋಧಗಳಿಗೆ ಹೊರಡಲು ಸಾಧ್ಯವಿದೆಯಲ್ಲವೇ? ಈಗಾಗಲೇ ನಡೆದಿದ್ದರೆ, ಸಂತೋಷವೇ.

ತಾಳಮದ್ದಲೆ ಎಂಬ ಪಾತ್ರಸಂವಾದಪ್ರಧಾನವಾದ ಯಕ್ಷಗಾನಗೋಷ್ಠಿಗೆ ಎರಡು ವಾದ್ಯಗಳ ಹೆಸರು ಹೆಣಿಗೆಯಾದ್ದೇ ಒಂದು ಕೌತುಕ. ಇಲ್ಲಿ ನಡೆಯುವ ಅರ್ಥಧಾರಿಗಳ, ಸೂಳ್ನುಡಿಯ ಸರದಾರರ, ಸಂವಾದದ ಚಮತ್ಕಾರಗಳನ್ನು ನೋಡಿದರೆ, ಪಂಪಕವಿ ಹೇಳುವಂತಹ `ಅಕ್ಕರಗೊಟ್ಟಿ'ಯ ಪ್ರಪಂಚದಲ್ಲೇ ಇದನ್ನೂ ಗುರುತಿಸಬಹುದು.

ಯಕ್ಷಗಾನ, ಬಯಲಾಟ, ಸಣ್ಣಾಟ, ದೊಡ್ಡಾಟ, ದಾಸರಾಟ, ಸೂತ್ರದ ಬೊಂಬೆಯಾಟ, ತೊಗಲುಗೊಂಬೆಯಾಟ ಇತ್ಯಾದಿ ಪ್ರಭೇದಗಳ ವಿಚಾರ ನಮ್ಮ ಹಳೆಯ ಸಾಹಿತ್ಯದಲ್ಲಿ ಇನ್ನೊಂದು ಮತ್ತೊಂದು ಹೆಸರಿನಲ್ಲಿ ಕಾಣಿಸಿಕೊಂಡಿರಬಹುದು; ಆ ತೆರನ ಸಾಹಿತ್ಯ ರಚನೆಯೂ ಕನಿಷ್ಠ ಈ 200-300 ವರ್ಷಗಳಲ್ಲಿ ಆಗಿರಬಹುದು. ಇವನ್ನು ಕಂಡುಕೊಳ್ಳ ಬೇಕಾಗಿದೆ. 16ನೆಯ ಶತಮಾನದ ಮಧ್ಯಭಾಗದ ಸಾಂಗತ್ಯಕವಿ ರತ್ನಾಕರವಣರ್ಿಯ `ಭರತೇಶವೈಭವ'ದ ಪೂರ್ವ ಮತ್ತು ಉತ್ತರ ನಾಟಕ ಸಂಧಿಗಳಲ್ಲಿ ಬರುವ ನರ್ತನ ವಿಶೇಷಗಳೂ ವಾದ್ಯವೈವಿಧ್ಯವೂ ಇನ್ನೂ ಗಾಢ ಶಾಸ್ತ್ರೀಯ ಪರಿಶೀಲನೆಗೆ ಒಳಗಾದ ಹಾಗಿಲ್ಲ. ಯಕ್ಷಗಾನಕಲೆಯ ಹಿನ್ನೆಲೆಯಲ್ಲಿ ಅವನ್ನು ನೋಡುವುದರಿಂದ ಪ್ರಯೋಜನವಿದೆ. ಏಕೆಂದರೆ, ಅವನು ಇಲ್ಲಿಯ ಕವಿಯೇ. ಸ್ಥಳೀಯ ಕಲಾವಿದ-ಸಂಶೋಧಕರು ಈ ಕಡೆ ಗಮನ ಹರಿಸಬಹುದಾಗಿದೆ.

ಎಂದಿನಿಂದಲೂ ಜನಪದವಾದ್ಯಗಳು, ಅವುಗಳ ರೂಪ, ರಚನೆ ಮತ್ತು ಧ್ವನಿಪ್ರಸಾರ ಗಳ ದೃಷ್ಟಿಯಿಂದ, ಒಂದು ಗಾಢಕುತೂಹಲದ ಅಧ್ಯಯನವಿಷಯ. ಈ ದಿಸೆಯಲ್ಲಿ ಹೆಚ್ಚು ಕೆಲಸ ನಡೆದಹಾಗೆ ತೋರುವುದಿಲ್ಲ. ನಾನು ಕೆಲವು ವರ್ಷಗಳ ಹಿಂದೆ ಗುಜರಾತಿಗೆ ಹೋಗಿದ್ದಾಗ, ಹಾಗೆಯೇ ಮುನ್ನಡೆದು ಬರೋಡದ ಸಕರ್ಾರಿ ವಸ್ತುಸಂಗ್ರಹಾಲಯಕ್ಕೆ ಹೋಗಿದ್ದೆ. ಅಲ್ಲಿ ಸಂಗ್ರಹಿತವಾದ ವಾದ್ಯಗಳನ್ನು ವಿವರಿಸಿದ ಸು. 500 ಪುಟಗಳ ಒಂದು ಸುಂದರ ಸಚಿತ್ರ ಬೃಹತ್ಸಂಪುಟ (ಖಿಜ ಊಜಡಿಣಚಿರಜ ಠಜಿ ಒಣಛಿಚಿಟ ಟಿಣಡಿಣಟಜಟಿಣ: ಂ ಅಚಿಣಚಿಟಠರಣಜ ಠಜಿ ಒಣಛಿಚಿಟ ಟಿಣಡಿಣಟಜಟಿಣ ಟಿ ಣಜ ಒಣಜಣಟ ಠಜಿ ಉಣರಿಚಿಡಿಚಿಣ, 1990) ನನ್ನ ಗಮನ ಸೆಳೆಯಿತು. ಅದನ್ನು ನಾನು ಕೊಂಡು ತಂದೆ. ತುಲನಾತ್ಮಕವಾಗಿ ಕೆಲಸಮಾಡಲು ಇಂಥ ಅಧ್ಯಯನಗಳು ನಮಗೆ ಸಹಕಾರಿಯಾಗಿವೆ.

ಪಾಂಡಿತ್ಯದ ಪ್ರಯೋಜನ
ಕನ್ನಡದ ಕಲಿಕಾಲಸರ್ವಜ್ಞನೆಂದೇ ಹೇಳಬಹುದಾದ ನಾಗವರ್ಮನು ಕವಿತೆ ಹುಟ್ಟಲು ಬೇಕಾದ ಪೂರ್ವಸಿದ್ಧತೆಗಳನ್ನು ತನ್ನ `ಕಾವ್ಯಾವಲೋಕನ'ದಲ್ಲಿ ಹೀಗೆ ವಿವರಿಸಿದ್ದಾನೆ:

ಕವಿತೆಗೆ, ಎಂದರೆ ಕಾವ್ಯನಿಮರ್ಿತಿಗೆ ಇರಲೇಬೇಕಾದ ಕಾರಣಗಳೆಂದರೆ `ಪ್ರತಿಭೆ', ಎಂದರೆ ಹೊಸತನ್ನು ಕಾಣುವ-ಕಟ್ಟುವ ಒಂದು ಅನಿರ್ವಚನೀಯ ಶಕ್ತಿವಿಶೇಷ; `ಕಾವ್ಯವಿದ್ಯೆಯ ಪರಿಚಯ', ಎಂದರೆ ಕಾವ್ಯವನ್ನು ಕಟ್ಟಲು ಬೇಕಾಗುವ ಕಾವ್ಯತತ್ತ್ವಗಳ ಅನುಸಂಧಾನ (ಲೌಕಿಕವಿಚಾರಗಳು, ಶಾಸ್ತ್ರಸಂಬಂಧವಾದ ವಿಚಾರಗಳು ಮತ್ತು ವಿವಿಧರೀತಿಯ ಕಲೆಗಳಲ್ಲಿ ಅಭಿಜ್ಞತೆ); `ವೃದ್ಧಸೇವಾನುರಕ್ತಿ', ಎಂದರೆ ಅನುಭವ ವಯಸ್ಸುಗಳಿಂದ ಜ್ಞಾನಿಗಳಾಗಿರುವ ಹಿರಿಯರನ್ನು ಗುರುಗಳಾಗಿ ತಿಳಿದು ಆಶ್ರಯಿಸಿ, ಅವರ ಪರಿಚಯರ್ೆಮಾಡಿ ವಿಷಯಗಳನ್ನು ತಿಳಿದುಕೊಳ್ಳುವುದು; `ಸತತಾಭ್ಯಾಸಪ್ರಯತ್ನ', ಎಂದರೆ ಅಲಸಿಕೆಯಿಲ್ಲದೆ ಪರಿಶ್ರಮವನ್ನು ಮಾಡುತ್ತಿರುವ ಪ್ರಯತ್ನಶೀಲತೆ.

ಈ ಕಾರಣಗಳು ಕವಿತೆಯ ನಿಮರ್ಾಣಕ್ಕೆ ಮಾತ್ರವಲ್ಲದೆ ಪಾಂಡಿತ್ಯದ ಆರ್ಜನೆಗೂ ಅತ್ಯವಶ್ಯ. ಮೇಲುಮೇಲಿನ ವಿಚಾರಕ್ಕೆ, ಕಾವ್ಯನಿಮರ್ಾಣದ ಪರಿಕರಗಳಲ್ಲಿ ಪ್ರತಿಭೆ ವಿಶೇಷವಾಗಿ ಕವಿಗಳಿಗೆ ಸ್ವಭಾವಲಕ್ಷಣ ಎಂದು ತೋರಬಹುದು. ಆದರೆ ಕವಿಗಳದು ಸೃಜನಾತ್ಮಕವಾದ್ದು, ವಿದ್ವಾಂಸರದು ಸಂಯೋಜನಸಮರ್ಥವಾದ್ದು. ತೀ.ನಂ.ಶ್ರೀ. ಅವರು ಒಂದೆಡೆ ಹೇಳಿರುವಂತೆ ``ಪಾಂಡಿತ್ಯವೆಂದರೆ ಕೇವಲ ವಿಷಯರಾಶಿಯ ಸಂಗ್ರಹವಲ್ಲ. ಆ ರಾಶಿ ಬೇಕೇ ಬೇಕು. ಆದರೆ ಅಷ್ಟೇ ಸಾಲದು. ಆ ವಿವಿಧ ವಿಷಯಗಳಲ್ಲಿ ಮರೆಯಾಗಿರುವ ಸಂಬಂಧಗಳನ್ನು ಊಹಿಸಿ ಗ್ರಹಿಸಿ, ಎಳೆಗಳ ತೊಡಕುಗಳನ್ನು ಬಿಡಿಸಿ ಕೂಡಿಸಿ, ತತ್ತ್ವವನ್ನು ಬೆಳಗುವ ಸಂಯೋಜಕಪ್ರತಿಭೆಯೂ ಅವಶ್ಯವಾಗಿ ಬೇಕು.''

ಒಳ್ಳೆಯ ಕವಿತೆಯ ವಿಚಾರಕ್ಕೆ, ನಯಸೇನ ತನ್ನ `ಧಮರ್ಾಮೃತ'ವೆಂಬ ಕಾವ್ಯದಲ್ಲಿ ಹೇಳುವ ಹಾಗೆ `ಸಹಜ ಕವಿತ್ವ'ಕ್ಕೆ, `ಕಾವ್ಯಾವಲೋಕನ'ದಲ್ಲಿ ಹೇಳಿರುವ ಕಾವ್ಯನಿಮರ್ಿತಿ ಕಾರಣಗಳು ಒಪ್ಪುತ್ತವೆ. ಆದರೆ ಒಳ್ಳೆಯ ಕವಿತೆ ಎನ್ನುವುದು ಕಸ್ತೂರಿ ಚಂದನಗಳ ಹಾಗೆ ದುರ್ಲಭ. ಸಾವಿರ ಕೆಟ್ಟ ಕವಿತೆಗಳಿಗಿಂತ ಒಂದು ವಾದಗ್ರಸ್ತವೇ ಆಗಬಹುದಾದ ಸಾಮಾನ್ಯ ಸಂಶೋಧನಲೇಖನ ಎಷ್ಟೋ ಮೇಲು. ಕವಿ ತನ್ನ ಕಾವ್ಯವನ್ನು ಬ್ರಹ್ಮನ ಸ್ಥಾನದಲ್ಲಿ ನಿಂತು ನಿಮರ್ಿಸಬಹುದು. ಅಷ್ಟಕ್ಕೆ ಆತ ಕೃತಕೃತ್ಯನಾಗಲಾರ. ಅದು ಲೋಕದಲ್ಲಿ ಸಲ್ಲುವಂತಾಗಬೇಕಾದರೆ, ಆ ಕಾವ್ಯಗಳ ಗುಣದೋಷಗಳನ್ನು ವಿವೇಚಿಸಿ, ರಸಸ್ಥಾನಗಳನ್ನು ಗುರುತಿಸಿ, ಶಬ್ದಾರ್ಥಗಳ ಹಾಗೂ ಸಂದರ್ಭವಿಶೇಷಗಳ ಕ್ಲಿಷ್ಟತೆಗಳನ್ನು ಪರಿಹರಿಸಿ ವಿದ್ವಾಂಸರು ಪಾಂಡಿತ್ಯಬಲದಿಂದ ವಿಷ್ಣುವಿನ ನೆಲೆಯಲ್ಲಿ ನಿಂತು ಪಾಲನೆ ? ಲಾಲನೆ ಮಾಡಬೇಕಾಗುತ್ತದೆ. ಕಾಲಪುರುಷನು ಲಯಕಾರಿಯಾದ ರುದ್ರನಾಗಿ ಎಲ್ಲವನ್ನೂ ಗುಡಿಸಿಹಾಕುವುದು ಬೇರೆ ಮಾತು. ಹೀಗಿರುವಾಗ ಪ್ರತಿಭಾವಂತನಾದ ಕವಿ ತಾನು ಹೆಚ್ಚೆಂದು ಹಿಗ್ಗುವುದಿಲ್ಲ; ವಿಮರ್ಶಕನಾದ ವಿದ್ವಾಂಸ ತಾನು ಕಡಮೆಯೆಂದು ಕುಗ್ಗುವುದಿಲ್ಲ. ಡಿ.ಎಲ್. ನರಸಿಂಹಾಚಾರ್ಯರು ಹೇಳುವಂತೆ ``ಕಾವ್ಯವೂ ದೊಡ್ಡದು, ಶಾಸ್ತ್ರವೂ ದೊಡ್ಡದು. ಒಂದು ಇನ್ನೊಂದಕ್ಕೆ ಕೀಳಲ್ಲ, ಮೇಲಲ್ಲ. ಕವಿತ್ವದ ವಿದ್ವತ್ತಿನ ಸಮಸಮಾಯೋಗವೇ ಪೂರ್ಣಸತ್ಯ'' ಎಂಬ ಮಾತು ನಿಲ್ಲುತ್ತದೆ.

ಕಾವ್ಯವಷ್ಟೇ ದೊಡ್ಡದು ಎನ್ನುವುದಾದರೆ, ವಿದ್ವಾಂಸರಿಗೆ ಏನು ಕೆಲಸ? ಇದಕ್ಕೆ ಕೆಲವು ಉತ್ತರಗಳನ್ನು ಪ್ರಶ್ನೆಗಳ ರೂಪದಲ್ಲಿಯೇ ಕೊಡಬಹುದು.

(1) ಕನರ್ಾಟಕದ ಪರಂಪರೆ ಇತಿಹಾಸ ಸಾಹಿತ್ಯ ಸಂಸ್ಕೃತಿಗಳ ಉಗಮ ವಿಕಾಸಗಳನ್ನು, ವೈವಿಧ್ಯ ವೈಲಕ್ಷಣ್ಯಗಳನ್ನು, ಯಾರು ತಾನೆ ನಿರೂಪಿಸುವವರು, ವ್ಯಾಖ್ಯಾನಿಸುವವರು?

(2) ಪ್ರಾಚೀನ ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಸೂಕ್ತವಾದ, ಖಚಿತವಾದ ಶಬ್ದಾರ್ಥಗಳ ನೆಲಗಟ್ಟಿನ ಮೇಲೆ, ಎಂದರೆ ವಾಚ್ಯಾರ್ಥ ವ್ಯಂಗ್ಯಾರ್ಥಗಳಿಗೆ ಭಂಗಬಾರದ ಹಾಗೆ ವಿಶದಮಾಡಿಕೊಟ್ಟು ಅರ್ಥಹೇಳುವವರು ಯಾರು? ಅನಂತರ ವಿಮರ್ಶಕರ ಟೀಕೆ ಟಿಪ್ಪಣಿಗಳಿಗೆ, ವೃತ್ತಿ ವ್ಯಾಖ್ಯಾನಗಳಿಗೆ ವಸ್ತುವನ್ನು ಅಣಿಗೊಳಿಸುವವರು ಯಾರು? ಕವಿಕಾವ್ಯಗಳನ್ನು ಯೋಗ್ಯತಾನುಸಾರವಾಗಿ ಬೆಲೆ ಕಟ್ಟುವುದು, ಸ್ಥಾನ ನಿದರ್ೇಶಿಸುವುದು ಹೇಗೆ?

(3) ಪ್ರಾಚೀನ ಮಧ್ಯಕಾಲೀನ ಕನ್ನಡಭಾಷೆಯ ವಿಶಿಷ್ಟಸ್ವರೂಪವನ್ನು ಸ್ಪಷ್ಟಪಡಿಸುವವರು ಯಾರು? ಆ ಭಾಷೆಯಲ್ಲಿ ಕಟ್ಟಿದ ಸಾಹಿತ್ಯದ ಇತಿಹಾಸವನ್ನು ಕ್ರಮಬದ್ಧವಾಗಿ ರಚಿಸುವವರು ಯಾರು?

(4) ನಿಶ್ಚಿತವಾದ ಅರ್ಥ ಅನ್ವಯಗಳಿಗೆ, ವಿಮಶರ್ೆ ವ್ಯಾಖ್ಯಾನಗಳಿಗೆ ಅವಶ್ಯವಾದ ಛಂದಸ್ಸು ವ್ಯಾಕರಣ ಗ್ರಂಥಸಂಪಾದನೆ ಶಬ್ದಾರ್ಥವಿಚಾರ ನಿಘಂಟು ಅಲಂಕಾರ ಇತ್ಯಾದಿ ಲಕ್ಷಣಭಾಗದ ಅವಲಂಬನೆಯನ್ನು ಸಂದಿಗ್ಧತೆಗೆ ಅವಕಾಶವಿಲ್ಲದಂತೆ ಒದಗಿಸುವವರು ಯಾರು? ಬೇಕಾದ ಅಧಿಷ್ಠಾನಗ್ರಂಥಗಳನ್ನು ಸಿದ್ಧಪಡಿಸುವವರು ಯಾರು?

(5) ಸಾಂಸ್ಕೃತಿಕಸಂದರ್ಭಗಳನ್ನು, ತಾತ್ತ್ವಿಕವಿಷಯಗಳನ್ನು, ಧಾಮರ್ಿಕಪ್ರಕ್ರಿಯೆಗಳನ್ನು ಶಾಸ್ತ್ರಗಳನ್ನೂ ಸೂತ್ರಗಳನ್ನೂ ಹುಡುಕಿ ಅನ್ವಯಿಸುವ ಮೂಲಕ ಕಾವ್ಯಾರ್ಥ ವಿವೇಚನೆಗೆ, ಕವಿಕೃತಿಯ ಭಾವಾನುಭಾವಗಳ ಮೂಲಸೆಲೆಗಳನ್ನು ಗುರುತಿಸುವುದಕ್ಕೆ ಶ್ರಮಿಸುವವರು ಯಾರು?

(6) ವಿಮರ್ಶಕರ, ಪಂಡಿತರ, ಸಂಶೋಧಕರ ವ್ಯವಸಾಯದ ನೆರವಿಲ್ಲದೆ ನಮ್ಮ ಪ್ರಾಚೀನ ಮಧ್ಯಕಾಲೀನ ಕಾವ್ಯಗಳು ತಮ್ಮ ಅರ್ಥ ಅಭಿಪ್ರಾಯಗಳ ಸಾರಸರ್ವಸ್ವವನ್ನು ಬಿಟ್ಟುಕೊಡುತ್ತವೆಯೇ? ಹೇಗೆ ಅರ್ಥವಾದರೆ ಹಾಗೆ, ಎಷ್ಟು ಅರ್ಥವಾದರೆ ಅಷ್ಟು ನಮಗೆ ತಿಳಿದರೆ ಸಾಕೇ? ಅದು ಅರ್ಥಜ್ಞಾನವೋ ಅನ್ಯಥಾಜ್ಞಾನವೋ? ಕವಿಕೃತಿಗೆ ಮಾಡುವ ಪರವಂಚನೆಯೋ ಆತ್ಮವಂಚನೆಯೋ?

ಇದನ್ನು ನಾವು ಗಂಭೀರವಾಗಿ ಯೋಚಿಸಬೇಕು. `ಕಾಕಸ್ಯ ಕತಿ ವಾ ದಂತಾಃ' ಎಂಬ ಕುಚೋದ್ಯದ ಮಾತು ಆಡಿ ಪಂಡಿತರ ಮುಖಭಂಗ ಮಾಡುವ ಕೆಲಸ ನಿಲ್ಲಬೇಕು. ಕನ್ನಡದ ದೌರ್ಬಲ್ಯ ಎಂದರೆ ಈಚಿನ ದಶಕಗಳಲ್ಲಿ ಹೊಸಗನ್ನಡದಲ್ಲಿ ಕೃಷಿ ಮಾಡುವ ಕವಿಗಳು, ಕತೆಗಾರರು, ನಾಟಕಕಾರರು, ಕಾದಂಬರಿಕಾರರು, ವೈಚಾರಿಕಸಾಹಿತ್ಯ ಲೇಖಕರು ಮಾತ್ರ ಹೆಚ್ಚಾಗಿ ಕೀತರ್ಿಪ್ರತಿಷ್ಠೆಗಳಿಗೆ ಭಾಜನರಾಗುತ್ತಿದ್ದಾರೆ. ಆದರೆ ಪರಂಪರೆಯ ಸಾಹಿತ್ಯವನ್ನು, ಕನರ್ಾಟಕದ ಕವಿವರೇಣ್ಯರು ಸುಮಾರು 1500 ವರ್ಷಗಳ ಕಾಲ ಬೆಳಸಿಕೊಂಡು ಬಂದ, ಶ್ರದ್ಧೆ ಶಕ್ತಿಗಳ ಜೀವಸಾರವಾದ ಸಾಹಿತ್ಯವನ್ನು ಕಣ್ಣೆತ್ತಿ ನೋಡುವವರೂ ಆದರದಿಂದ ಆಸ್ವಾದಿಸುವವರೂ ವ್ಯಾಸಂಗಮಾಡುವವರೂ ವ್ಯಾಖ್ಯಾನಿಸುವವರೂ ವಿರಳವಾಗುತ್ತ ಹೋಗುತ್ತಿರುವುದು ಭಾಷೆ ಸಾಹಿತ್ಯಗಳ ಬೆಳೆವಣಿಗೆಯ ದೃಷ್ಟಿಯಿಂದ ತುಂಬ ಅನ್ಯಾಯ ಎನ್ನುವಂತೆ ಆಗಿದೆ. ಪರಂಪರೆಯ ವಿಸ್ಮೃತಿ ಭವಿತವ್ಯವನ್ನು ದುರ್ಬಲಗೊಳಿಸದೆ ಬಿಡುವುದಿಲ್ಲ.

ದಿಟವಾಗಿ, ಪಾಂಡಿತ್ಯ ಅಥವಾ ವಿದ್ವತ್ತೆ ಎಂದರೆ ಏನು? ಪರಂಪರೆಯ ಜ್ಞಾನಸಾಧನಗಳಾದ ಭಾಷಾಸಾಹಿತ್ಯಗಳ ಪಠ್ಯಗಳನ್ನು, ಶಾಸನಗಳನ್ನು, ಶಿಲ್ಪಗಳನ್ನು, ನಾಣ್ಯಗಳನ್ನು, ಮುದ್ರೆಗಳನ್ನು, ಭೂಗರ್ಭದ ವಸ್ತುವಿಶೇಷಗಳನ್ನು, ಚಿತ್ರಗಳನ್ನು ಆಯಾಕಾಲದ ಹಿನ್ನೆಲೆಯಲ್ಲಿ, ಕತರ್ೃವಿನ ಸಾಧನೆಯ, ಸಾಮಥ್ರ್ಯದ ಬೆಳಕಿನಲ್ಲಿ ಸಮರ್ಥವಾಗಿ, ಸಮರ್ಪಕವಾಗಿ, ವ್ಯಾಖ್ಯಾನಿಸುವುದು ಎಂದು ಸ್ಥೂಲವಾಗಿ ಹೇಳಬಹುದು. ಸಾಹಿತ್ಯಕ್ಕೆ ಮಾತ್ರವೇ ಅನ್ವಯಿಸಿ ಹೇಳುವುದಾದರೆ, ಭಾಷೆ ವ್ಯಾಕರಣ ಛಂದಸ್ಸು ಗ್ರಂಥಸಂಪಾದನೆ ನಿಘಂಟು ಶಬ್ದಾರ್ಥವಿವೇಚನೆ ಇವುಗಳಲ್ಲಿಯ ತಜ್ಞತೆ ಎಂದು ತಿಳಿಯಬೇಕು. ಈ ಅರ್ಥ ಆಂಗ್ಲಭಾಷಾವಿದ್ವಾಂಸರಿಗೂ ಸಮ್ಮತವಾದ್ದು. ಅವರಿಗೆ ಪಾಂಡಿತ್ಯದ ಒರೆಗಲ್ಲು ಲ್ಯಾಟಿನ್ ಗ್ರೀಕ್ ಮತ್ತು ಹಳೆಯ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯ ಎಂದಾದರೆ, ನಮಗೆ ಸಂಸ್ಕೃತ ಪ್ರಾಕೃತಗಳು, ಸೋದರ ದ್ರಾವಿಡಭಾಷೆಗಳು ಹಾಗೂ ಹಳಗನ್ನಡ ಭಾಷಾಸಾಹಿತ್ಯಗಳು ಇವುಗಳ ಸಮೀಚೀನವಾದ ಜ್ಞಾನ. ಇಂಗ್ಲಿಷ್ ಮತ್ತು ಜರ್ಮನ್ ವಿದ್ವಾಂಸರು ಅನುಸರಿಸಿದ ಅಧ್ಯಯನವಿಧಾನಗಳು ಒದಗಿಸಿರುವ ಸಾಧನಸಂಪತ್ತಿಯನ್ನೂ ತಪ್ಪದೆ ನಾವು ನೆರವಿಗೆ ಬಳಸಿಕೊಳ್ಳಬೇಕಾಗುತ್ತದೆ.

19ನೆಯ ಶತಮಾನದ ಉತ್ತರಾರ್ಧದಿಂದ ತೊಡಗಿ 20ನೆಯ ಶತಮಾನದ ಪೂವರ್ಾರ್ಧದ ವರೆಗೆ ಸಮಗ್ರ ಭರತಖಂಡದಲ್ಲಿಯೇ ಭಾಷೆ ಸಂಸ್ಕೃತಿ ಇತಿಹಾಸದ ನೆಲೆಗಳಲ್ಲಿ ಜಾಗೃತಿಯ ಮತ್ತು ಶೋಧನೆಯ ಕೆಲಸಗಳು ಉತ್ಸಾಹದಿಂದ ನಡೆದುವು. ಸಂಸ್ಥೆಗಳೂ ವ್ಯಕ್ತಿಗಳೂ ಒಗ್ಗೂಡಿ ಒತ್ತಾಸೆನೀಡಿದ್ದು ಕಂಡುಬಂದದ್ದು ಈ ಕಾಲಘಟ್ಟದಲ್ಲಿಯೇ. ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಕಿಟ್ಟೆಲ್-ರೈಸ್-ಫ್ಲೀಟ್ ಇಂತಹ, ಆರ್. ನರಸಿಂಹಾಚಾರ್, ಆಲೂರು ವೆಂಕಟರಾವ್, ಬಿ.ಎಂ. ಶ್ರೀಕಂಠಯ್ಯ, ಪಂಜೆ ಮಂಗೇಶರಾವ್, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ ಇಂತಹ ಹಲವರ ಪ್ರಯತ್ನಗಳಿಂದ ನಡೆದ ಭಾಷಾಭಿವೃದ್ಧಿಯ ಉದ್ಯಮಗಳು ಸುದೃಢವಾದವು, ದೀರ್ಘಕಾಲಿಕ ವಾದವು. ಈ ಶ್ರೇಣಿಗೆ ಸೇರತಕ್ಕವರು ಇನ್ನೂ ಹಲವರಿದ್ದಾರೆ. ನನ್ನ ಈ ವೃದ್ಧಾಪ್ಯದ ದಿನಗಳಲ್ಲಿ ಇವರ ಜೀವನ ಸಾಧನೆಗಳನ್ನು ನೆಮ್ಮದಿಯಿಂದ ಪರಿಚಯಮಾಡಿಕೊಳ್ಳಲು, ಈಚಿನ ಪೀಳಿಗೆಯವರಿಗೆ ಸಾಧ್ಯವಾದಮಟ್ಟಿಗೆ ಪರಿಚಯಮಾಡಿಕೊಡಲು ನನ್ನ ಹೊತ್ತು ಹೋಗುತ್ತಿದೆ ಎಂದು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ನನ್ನ ಪಾಲಿಗೆ ಪಂಪ-ಕುಮಾರವ್ಯಾಸರೂ ರತ್ನಾಕರವಣರ್ಿ-ಮುದ್ದಣರೂ ಎಷ್ಟು ಪೂಜ್ಯರೋ, ಅಷ್ಟೇ ಮಟ್ಟಿಗೆ ಈ ಮೂರ್ಧನ್ಯಪ್ರಾಯರಾದ ಪಂಡಿತರೂ ಪೂಜ್ಯರು. ಏಕೆಂದರೆ, ಇವರು ಕನ್ನಡ ನಾಡು ನುಡಿಗಳ ಮೂಲಾಧಾರಗಳನ್ನು ಕಟ್ಟುವ, ಗಟ್ಟಿಮಾಡುವ ಪುಣ್ಯಕಾರ್ಯದಲ್ಲಿ ಕಟಿಬದ್ಧರಾಗಿ ದುಡಿದು ಜೀವತೆತ್ತವರು.

ವಿದ್ವಾಂಸರ, ವಿದ್ವತ್ಕಾರ್ಯಗಳ ದಾಖಲಾತಿ
ನಮ್ಮ ಭಾಷೆ ಸಾಹಿತ್ಯಗಳ ವಿಷಯದಲ್ಲಿ ಆರಂಭದಲ್ಲಿ ವಿದ್ವಾಂಸರು ಮಾಡಿರುವ ಕೆಲಸಗಳು ಒಳ್ಳೆಯ ಫಲಗಳನ್ನೇ ನೀಡಿವೆ. ನಮ್ಮ ಭಾಷೆ ಸಾಹಿತ್ಯ ಸಂಸ್ಕೃತಿ ಇತಿಹಾಸ ಈ ನಾಲ್ಕು ಮುಖಗಳಲ್ಲಿಯೂ ಶ್ರಮಿಸಿದ ವಿದೇಶೀಯರು ಸುಮಾರು 60-70 ಮಂದಿಯಾದರೂ ಇರಬಹುದು.

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಸ್ತಿತ್ವ ನಿಂತುಹೋದಮೇಲೆಯೂ ಐರೋಪ್ಯ ವಿದ್ವಾಂಸರ ಬರಹಗಳು ಉಳಿಯುತ್ತವೆ ಎಂಬುದಾಗಿ ಗವರ್ನಲ್ ಜನರಲ್ ವಾರೆನ್ ಹೇಸ್ಟಿಂಗ್ಸ್ 1784ರಲ್ಲಿಯೇ ಪ್ರವಾದಿಯಂತೆ ನುಡಿದನು. ಆದರೆ ಎಷ್ಟೋ ರಾಷ್ಟ್ರೀಯ ವಿಶ್ವಕೋಶಗಳಲ್ಲಿ ಇವರಲ್ಲಿ ಗಣ್ಯರಾದ ಎಫ್. ಕಿಟ್ಟೆಲ್, ಬಿ.ಎಲ್.ರೈಸ್., ಜೆ.ಎಫ್. ಫ್ಲೀಟ್ ಇಂಥವರ ಹೆಸರುಗಳೇ ಮುಖ್ಯ ಉಲ್ಲೇಖಗಳಾಗಿ ಕಂಡುಬರುವುದಿಲ್ಲ. ಎ. ವೆಂಕಟಸುಬ್ಬಯ್ಯ, ಎಂ.ಎ. ರಾಮಾನುಜ ಅಯ್ಯಂಗಾರ್, ಕ.ವೆಂ. ರಾಘವಾಚಾರ್, ಶಿ.ಶಿ. ಬಸವನಾಳ, ಸೇಡಿಯಾಪು ಕೃಷ್ಣಭಟ್ಟ, ಎತರ್ೂರು ಶಾಂತಿರಾಜಶಾಸ್ತ್ರಿ, ರಾ.ಹ. ದೇಶಪಾಂಡೆ, ಶ್ಯಾಮರಾವ್ ವಿಟ್ಠ್ಠಲ ಕೈಕಿಣಿ, ಫ.ಗು. ಹಳಕಟ್ಟಿ ಇವರ ಹೆಸರುಗಳೂ ಹೀಗೆಯೇ ಕಾಣಿಸುವುದಿಲ್ಲ. ಭಾರತೀಯ ಸಾಹಿತ್ಯ ವಿಶ್ವಕೋಶದಲ್ಲಿ ಡೋಗ್ರಿ ಮೈಥಿಲಿ ಇಂಥ ಭಾಷೆಗಳ ಭಾಷಾವೈಜ್ಞಾನಿಕ ಅಧ್ಯಯನಗಳ ಬಗೆಗೆ ಪ್ರಬಂಧಗಳಿದ್ದರೂ, ಕನ್ನಡದ ಸಂಬಂಧದಲ್ಲಿ ಒಂದು ಸಾಲು ಬರೆವಣಿಗೆಯೂ ಇಲ್ಲ. ಇದು ಕನ್ನಡಕ್ಕೆ ಆಗಿರುವ ಅನ್ಯಾಯ.

ಕನ್ನಡ ಭಾಷೆ ಸಾಹಿತ್ಯಗಳ ಚರಿತ್ರೆಯನ್ನು ಬರೆಯುವವರು ಸಾಮಾನ್ಯಕವಿಗಳಿಗೆ ಕೂಡ ವಿಮಶರ್ೆಯ ಭಾಗ್ಯ ದೊರಕಿಸುತ್ತಾರೆ; ಶ್ರೇಷ್ಠದಜರ್ೆಯ ವಿದ್ವತ್ಕಾರ್ಯಗಳನ್ನು ಕೈಗೂಡಿಸಿದವರ ಹೆಸರನ್ನೇ ಹೇಳುವುದಿಲ್ಲ. ಆದರೆ ಸಮದಶರ್ಿಗಳಾದ ತೀ.ನಂ. ಶ್ರೀಕಂಠಯ್ಯನವರು ಕನ್ನಡ ಭಾಷೆ ಸಾಹಿತ್ಯಗಳ ಸಂಬಂಧವಾಗಿ ಐತಿಹಾಸಿಕಲೇಖನ ಬರೆಯುವಾಗ ವಿದ್ವತ್ತೆಯ ವ್ಯವಸಾಯವನ್ನೂ ಪಂಡಿತರ ಹೆಸರುಗಳನ್ನೂ ದಾಖಲಿಸಿದ್ದಾರೆ. ಡಿ.ಎಲ್. ನರಸಿಂಹಾಚಾರ್ಯರು ತಮ್ಮ 41ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ (1960) ವಿದ್ವತ್ತೆಯ ಪೋಷಣೆ, ವಿದ್ವಾಂಸರ ಕಾರ್ಯ ಎರಡನ್ನೂ ಸವಿಸ್ತರವಾಗಿ ಪ್ರಸ್ತಾವಿಸುತ್ತಾರೆ.

ರೈಸ್ ಮತ್ತು ಕಿಟ್ಟೆಲ್ ಇಬ್ಬರಿಗೂ ನಾನಾ ವಿಧಗಳಲ್ಲಿ ಸಹಾಯಮಾಡಿದ, ಸಿಬ್ಬಂದಿ ಯಲ್ಲಿ ಒಬ್ಬರಾಗಿ ಅವಿರತವಾಗಿ ಶ್ರಮಿಸಿದ ಬುರುಡುಗುಂಟೆ ಶ್ರೀನಿವಾಸಯ್ಯಂಗಾರ್, ಚಿಂಚೋಳಿ ವೆಂಕಣ್ಣಾಚಾರ್ (ಇವರ ಮಗ ಚಿಂಚೋಳಿ ವೇಣುಗೋಪಾಲಾಚಾರ್ಯರು ಬೆಂಗಳೂರು ಸೆಯಿಂಟ್ ಜೋಸೆಫ್ಸ್ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದರು; ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು), ಧನ್ವಂತ್ರಿ ಭೀಮಾಚಾರ್ಯ, ಸೋಸಲೆ ಅಯ್ಯಶಾಸ್ತ್ರಿ, ಕೆ. ರಾಮರಾವ್, ಬ್ರಹ್ಮಸೂರಿ ಪಂಡಿತ, ತಿರುಮಲೆ ಶಾಮಣ್ಣ, ಎಂ.ಸಿ. ಶ್ರೀನಿವಾಸಾಚಾರಿ, ವಸ್ತ್ರದ ಶಿವಲಿಂಗಪ್ಪ, ಉದ್ದಿ ದಕ್ಷಿಣಾಮೂತರ್ಿಶಾಸ್ತ್ರಿ, ಸುರಧೇನುಪುರದ ನರಸಿಂಹಶಾಸ್ತ್ರಿ, ರಾಯಪಾಳ್ಯಂ ರಾಘವಾಚಾರ್ಯ, ಗೌಡಗೆರೆ ವೆಂಕಟರಮಣಾಚಾರ್ಯ, ಬಿ. ವೆಂಕಟರಾಯಾಚಾರ್ಯ, ಆನಂದಾಳ್ವಾರ್, ವಿ. ಶ್ಯಾಮಾಚಾರ್ಯ, ಪದ್ಮರಾಜಪಂಡಿತ ಹೀಗೆ ಸಾಲು ಸಾಲು ಹೆಸರುಗಳು ಉಲ್ಲೇಖಮಾತ್ರವಾಗಿ ಕಾಣುತ್ತವೆಯಲ್ಲದೆ ಕಾರ್ಯಭಾರವೇನು ಎಂದು ತಿಳಿಯುವುದಿಲ್ಲ. ತಿಳಿಯಬೇಕೆಂಬವರ ಕುತೂಹಲವನ್ನು ತಣಿಸುವ ಬಗೆ ಹೇಗೆ? ನಮ್ಮ ದುದರ್ೈವವೆಂದರೆ, ಪೀಳಿಗೆಯ ಮಕ್ಕಳು ಮೊಮ್ಮಕ್ಕಳಿಗೇ ತಮ್ಮ ಹಿರಿಯರ ಬಗೆಗೆ ಇರಬೇಕಾಗಿದ್ದ ಅಭಿಮಾನವಿಲ್ಲದಿರುವುದು, ಮನೆಗಳಲ್ಲಿ ಅವರದಾಗಿ ಏನೂ ಮಾಹಿತಿಗಳನ್ನೂ ಸಾಮಗ್ರಿಗಳನ್ನೂ ಉಳಿಸಿಕೊಳ್ಳದಿರುವುದು. ಕೆಲವು ಅಪವಾದಗಳು ಇರಬಹುದು. ನಾನು ಅನ್ಯತ್ರ ಇದರ ವಿಚಾರವನ್ನು ಮಾಡಿದ್ದೇನೆ.

ಹೊಸತನದ ಹುಡುಕಾಟ: ಸಾಹಿತ್ಯದ ಮೂರು ಗಣಿಗಳು
ಅಜ್ಞಾತಸಾಹಿತ್ಯ, ಅನುಪಲಬ್ಧಸಾಹಿತ್ಯ ಮತ್ತು ಅಲಕ್ಷಿತಸಾಹಿತ್ಯ ಇವನ್ನು ಮೂರು ಗಣಿಗಳೆಂದು ನಾನು ಗಣಿಸಿದ್ದೇನೆ. ಈ ವಿಷಯದಲ್ಲಿ ಕೆಲವರು ಗಣ್ಯವಿದ್ವಾಂಸರು ಸ್ವಲ್ಪ ಕೆಲಸ ಮಾಡಿದ್ದಾರೆ. ಈ ಕೆಲಸ ಮುಂದುವರಿಯಬೇಕಾಗಿದೆ.

ಅಜ್ಞಾತಸಾಹಿತ್ಯ: `ಕವಿರಾಜಮಾರ್ಗ'ದಲ್ಲಿ ಶೋಧಿಸತಕ್ಕ ಇನ್ನೂ ಹಲವು ವಿಷಯಗಳಿವೆ. ಸಾಹಿತ್ಯಪ್ರಕಾರಗಳಾದ ಚತ್ತಾಣ ಬೆದಂಡೆ ಗದ್ಯಕಥೆಗಳ ಸ್ವರೂಪ, ಮಾದರಿಗಳು ಅವುಗಳಲ್ಲಿ ಒಂದು. ಹಾಗೆಯೇ ಕಾವ್ಯಾವಲೋಕನದಲ್ಲಿ ಉಕ್ತವಾಗಿರುವ, ಇಡುಕುಂಗಬ್ಬ (=ಮುಕ್ತಕ), ಪದ, ಮೆಲ್ವಾಡು, ಪ್ರಬಂಧ, ಪಾಡು, ಪಾಡುಗಬ್ಬ, ಮೆಲ್ವಾಡು, ಬೆದಂಡೆಗಬ್ಬ, ಬಾಜನೆಗಬ್ಬ ಎಂದಿರುವ ಸಾಹಿತ್ಯಪ್ರಕಾರಗಳ ರೂಪ ಮತ್ತು ಪ್ರಯೋಗಗಳ ಸಂಬಂಧವಾಗಿ ಈ ಶೋಧ ಮುನ್ನಡೆದು, ಮಾದರಿಗಳನ್ನು ಗುರುತಿಸಬಹುದೇ ಅಥವಾ ಸಣ್ಣ ಪ್ರಮಾಣದವು ಪ್ರಬಂಧಗಳ ಮೈಯಲ್ಲಿ ಅಡಗಿಕೊಂಡಿವೆಯೇ ಕಂಡುಹಿಡಿಯ ಬೇಕಾಗಿದೆ.

ಹಾಗೆಯೇ ಕನ್ನಡದಲ್ಲಿ `ಕವಿರಾಜಮಾರ್ಗ', `ಕಾವ್ಯಾವಲೋಕನ' ಮೊದಲುಗೊಂಡು ಪ್ರಾಚೀನ ಅಲಂಕಾರಶಾಸ್ತ್ರ ಗ್ರಂಥಗಳಲ್ಲಿ, `ಸೂಕ್ತಿಸುಧಾರ್ಣವ', `ಕಾವ್ಯಸಾರ' ಮೊದಲಾದ ಪದ್ಯಸಂಕಲನಗಳಲ್ಲಿ ಚದುರಿಹೋಗಿರುವ ಬಹುಸಂಖ್ಯೆಯ ಲಕ್ಷ್ಯಪದ್ಯಗಳ ಹಾಗೂ ಉದಾಹರಣೆಗಳ ಅಜ್ಞಾತಮೂಲಗಳನ್ನು ಶೋಧಿಸಿ, ಅವುಗಳ ಕತರ್ೃತ್ವ ಆಕರಗಳನ್ನೂ ಬೌದ್ಧಿಕ ನೆಲೆಯಲ್ಲಿ ಕಥಾವಸ್ತು ಸಂಸ್ಕೃತಿ ಇತಿಹಾಸ ಮೊದಲಾದ ವಿವರಗಳನ್ನೂ ಶೋಧಿಸಬೇಕಾಗಿದೆ. ಸುಳಿವು ಸುದ್ದಿಗಳನ್ನು ಕೊಡದೆ ನಷ್ಟಪ್ರಾಯವಾಗಿರುವ ಸಾಹಿತ್ಯಿಕ ಸಂಗತಿಗಳೇನಿವೆಯೋ ಅವನ್ನು ಅನುಮಾನಪ್ರಮಾಣದ ಬಲದಿಂದ ಕಟ್ಟಿಕೊಡುವುದು ಸಾಧ್ಯವೇ ಹೇಗೆ ಎನ್ನುವುದನ್ನು ವಿವೇಚಿಸಬೇಕು. ಆರ್. ನರಸಿಂಹಾಚಾರ್ಯರು ಮೊದಲು ಗೊಂಡು ಕೆಲವರು ಈ ದಿಕ್ಕಿನಲ್ಲಿ ಕೆಲಸಮಾಡಿದ್ದರೂ ಪ್ರತ್ಯೇಕ ಪ್ರಾಮುಖ್ಯದ ವಿಷಯವಾಗಿ ಶೋಧ ನಡೆಯಬೇಕಾಗಿದೆ.

ಅನುಪಲಬ್ಧಸಾಹಿತ್ಯ: `ಕವಿರಾಜಮಾರ್ಗ', ಜಯಕೀತರ್ಿಯ `ಛಂದೋನುಶಾಸನ' ಮೊದಲಾದ ಶಾಸ್ತ್ರಕೃತಿಗಳಲ್ಲಿಯೂ ಪೊನ್ನ ರನ್ನ ಮೊದಲಾದವರ ಕಾವ್ಯಗಳಲ್ಲಿಯೂ ದೊರೆಯುವ ಹಾಗೂ ಅನ್ಯ ಸಾಕ್ಷ್ಯಾಧಾರಗಳಿಂದ ತಿಳಿಯುವ ಸಾಹಿತ್ಯ ಕೃತಿಗಳು ಯಾವುವು, ಎಷ್ಟು. ಇವುಗಳನ್ನು ಗೊತ್ತುಮಾಡಿ ಕ್ಷೇತ್ರಕಾರ್ಯದಲ್ಲಿ ಆಸಕ್ತರಾದವರು ತಮ್ಮ ಕೆಲಸಗಳನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ. ಈಗ ಕನ್ನಡದಲ್ಲಿ ರಚಿತವಾಗಿರುವ ಪ್ರಾಚೀನ ಕಾವ್ಯಸಂಕಲನಗಳಲ್ಲಿ ಸಂಕಲಿತವಾಗಿರುವ ಪದ್ಯರಾಶಿಯಲ್ಲಿ ಜ್ಞಾತ ಅಜ್ಞಾತ ಆಕರಗಳ ಅಂದಾಜು ಲೆಕ್ಕ ನೋಡಿದರೆ, ನಾವು ನಮ್ಮ ಪ್ರಾಚೀನ ಕನ್ನಡಸಾಹಿತ್ಯದ ಸು. ಅರ್ಧಭಾಗದಷ್ಟನ್ನು ಕಳೆದುಕೊಂಡಿದ್ದೇವೆ ಎಂದು ತೋರುತ್ತದೆ. ಇನ್ನು ನಡುಗನ್ನಡ ಕಾಲದ ಸಾಹಿತ್ಯಕೃತಿಗಳಿಗೆ ಬೇರೆಯೇ ಲೆಕ್ಕಾಚಾರದ ಅಂದಾಜು ಬೇಕಾಗುತ್ತದೆ. ಆಕಸ್ಮಿಕ ವಾಗಿ ನಾಗವರ್ಮನ 11ನೆಯ ಶತಮಾನದ `ವೀರವರ್ಧಮಾನಪುರಾಣ' ದೊರೆತು ಪ್ರಕಟವಾದ ಹಾಗೆ, ಅಜ್ಞಾತಕತರ್ೃಕವಾದ ಸು. 1700ರ `ಧರ್ಮಗುಪ್ತ ಚರಿತೆ' ದೊರೆತು ಪ್ರಕಟನೆಯ ಸಿದ್ಧತೆಯಲ್ಲಿರುವ ಹಾಗೆ, ಹುಡುಕಲು ಹೊರಡುವವರಿಗೆ ಗಣಿಯೊಳಗಿನ ರತ್ನಗಳು ಕಣ್ಣಿಗೆ ಬೀಳಬಹುದಾಗಿದೆ. ಶ್ರವಣಬೆಳಗೊಳದ ಶ್ರೀಮಠ ಅಂಥ ಕೆಲವನ್ನು ಪ್ರಕಟಿಸಿದೆ.

ಅಲಕ್ಷಿತಸಾಹಿತ್ಯ : ಇದು ವಿಶೇಷವಾಗಿ ಗಮನಿಸಬೇಕಾದ್ದು. ಸಾಹಿತ್ಯ ಲಭ್ಯವಿದೆ; ಹಸ್ತಪ್ರತಿಗಳ ರೂಪದಲ್ಲಿಯೋ ಮುದ್ರಣಗೊಂಡು ಪ್ರಕಟವಾಗಿಯೋ ಪರಾಮಶರ್ೆಗೆ ಸಿಕ್ಕುತ್ತದೆ; ಆದರೆ ಸಾಹಿತ್ಯಾಸಕ್ತರಿಂದಲೂ ಸಂಶೋಧಕರಿಂದಲೂ ಅದು ಅಲಕ್ಷ್ಯಕ್ಕೆ ಒಳಗಾಗಿರುವ ಹಾಗೆ ತೋರುತ್ತದೆ. ಅದರ ಪ್ರಾಶಸ್ತ್ಯ ಮಹತ್ತ್ವಗಳ ಬಗೆಗೆ ಉದಾಸೀನವಿದ್ದು, ಹೆಚ್ಚಿನ ಹಸ್ತಪ್ರತಿಗಳು ಕತ್ತಲೆಕೋಣೆಯ ಕಪಾಟುಗಳಲ್ಲಿ ನಿದ್ರಿಸಿವೆ; ಪ್ರಕಟವಾಗಿದ್ದ ಪಕ್ಷದಲ್ಲಿ, ತಿರಸ್ಕಾರಭಾವವಿದೆ; ಅಸಹಾಯಕತೆಯೂ ಇದೆ.
                    (ಮುಂದುವರಿಯುವುದು.)

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries