ಕುಂಬಳೆ: ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಿದ ಕ್ರಮಕ್ಕೆ ಪ್ರತಿಭಟಿಸಿ ಹಿಂದೂ ಐಕ್ಯವೇದಿ ಮತ್ತು ಶಬರಿಮಲೆ ಕ್ರಿಯಾ ಸಮಿತಿ ಕರೆನೀಡಿದ ಹರತಾಳವು ಪೂರ್ಣ ಯಶಸ್ವಿಗೊಂಡಿತು.
ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಹರತಾಳ ನಡೆಯಿತು. ಬಿಜೆಪಿ ಬೆಂಬಲ ಸೂಚಿಸಿದೆ. ವೈದ್ಯಕೀಯ, ಹಾಲು ವಿತರಣೆ, ಪತ್ರಿಕೆ ಮೊದಲಾದ ಅಗತ್ಯ ಸೇವೆಗಳಿಗೆ ಹರತಾಳ ಬಾಧಕವಲ್ಲ.
ಮುಳ್ಳೇರಿಯ, ಅಡೂರು, ಬೆಳ್ಳೂರು, ಬೋವಿಕ್ಕಾನ, ಕುಂಬಳೆ, ಪೆರ್ಲ, ನೀಚರ್ಾಲು, ಬದಿಯಡ್ಕ, ಮಂಜೇಶ್ವರ ಪ್ರದೇಶಗಳಲ್ಲಿ ಸ್ವಯಂ ಪ್ರೇರಿತರಾಗಿ ಬೆಳಿಗ್ಗಿನಿಂದಲೇ ಹರತಾಳ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಬೆರಳೆಣಿಕೆ ಸಂಖ್ಯೆಯ ದ್ವಿಚಕ್ರವಾಹನ ಬಿಟ್ಟರೆ ಬೇರೆ ಯಾವುದೇ ವಾಹನ ಸಂಚಾರವಿರಲಿಲ್ಲ.
ವಿವಿಧ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಬಂಧಿಸಿದಕ್ಕೆ ವಿರೋಧಿಸಿ ಪ್ರತಿಭಟಿಸಿದರು. ಸಂಘಪರಿವಾರದ ಸಂಘಟನೆಗಳು, ಅಯ್ಯಪ್ಪ ಸ್ವಾಮಿ ಭಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಹರತಾಳದ ಕಾರಣ ಶನಿವಾರ ನಡೆಯಬೇಕಿದ್ದ ಕಣ್ಣೂರು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.



