ಕುಂಬಳೆ: ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಅವರನ್ನು ಶಬರಿಮಲೆ ದರ್ಶನ ಗೈಯ್ಯುವ ಮಧ್ಯೆ ಶುಕ್ರವಾರ ರಾತ್ರಿ ಬಂಧಿಸಿರುವುದನ್ನು ಪ್ರತಿಭಟಿಸಿ ಶನಿವಾರ ಹಠಾತ್ ರಾಜ್ಯವ್ಯಾಪಕ ಹರತಾಳದಿಂದ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದು, ಮೂಡಬಿದ್ರೆಯಿಂದ ಆಗಮಿಸಿದ ಮಹಿಳೆಯರು ತೊಂದರೆಗೊಳಗಾದ ಘಟನೆ ನಡೆದಿದೆ.
ಮೂಡಬಿದ್ರೆಯಿಂದ ಒಂಭತ್ತು ಮಂದಿ ಮಹಿಳೆಯರು ಜಿಲ್ಲೆಯ ವಿವಿಧ ಕ್ಷೆತ್ರ ದರ್ಶನಕ್ಕೆ ಶನಿವಾರ ಆಗಮಿಸಿದ್ದರು. ಕುಂಬಳೆ ರೈಲು ನಿಲ್ದಾಣದಲ್ಲಿ ಬಮದಿಳಿಯುತ್ತಿದ್ದಂತೆ ಬಸ್ ಸಹಿತ ವಾಹನ ಸಂಚಾರವಿಲ್ಲದ್ದನ್ನು ಗಮನಿಸಿ ಗಲಿಬಿಲಿಗೊಳಗಾದರು. ಈ ಸಂದರ್ಭ ಕುಂಬಳೆ ಪೆಟೆಯಲ್ಲಿ ಐಕ್ಯವೇದಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಮಹಿಳೆಯರನ್ನು ಗಮನಿಸಿ ವಿಷಯ ತಿಳಿದು ಬಳಿಕ ಟೆಂಪೋ ವಾಹನ ಮೂಲಕ ಅನಂತಪುರ ಶ್ರೀಕ್ಷೇತ್ರಕ್ಕೆ ಕಳುಹಿಸಿ ಮಹಿಳೆಯರ ಗಲಿಬಿಲಿಗೆ ನೆರವಾಗಿ ಸಹಕರಿಸಿ ಶ್ಲಾಘನೆಗೊಳಗಾದರು.






