ಜೋಪಾನ ಮಾರ್ರೆ-ಹೀಗೂ ಒಂದು ಕಾನೂನಿದೆ- ಖಾತೆದಾರನ ಪತ್ನಿಗೆ ಅಕೌಂಟ್ ಸ್ಟೇಟ್‍ಮೆಂಟ್ ನೀಡಿದ ಬ್ಯಾಂಕ್ ಗೆ 10 ಸಾವಿರ ರೂ. ದಂಡ!
0
ಡಿಸೆಂಬರ್ 10, 2018
ಅಹಮದಾಬಾದ್: ಖಾತೆದಾರನ ಪತ್ನಿಗೆ ಅಕೌಂಟ್ ಸ್ಟೇಟ್‍ಮೆಂಟ್ ನೀಡಿದ ಬ್ಯಾಂಕ್ ಗೆ ಗ್ರಾಹಕ ವಿವಾದ ಪರಿಹಾರ ವೇದಿಕೆ 10 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಪತಿಯ ಬ್ಯಾಂಕ್ ವಿವರಗಳನ್ನು ಪತ್ನಿಗೆ ಬ್ಯಾಂಕ್ ಗಳು ನೀಡಬಹುದಾ? ಇಲ್ಲಾ ಅದು ತಪ್ಪು ಎನ್ನುತ್ತಿದೆ ಗ್ರಾಹಕ ವಿವಾದ ಪರಿಹಾರ ವೇದಿಕೆಯ ಇತ್ತೀಚಿನ ತೀರ್ಪು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಖಾತೆದಾರನ ಪತ್ನಿಗೆ ಅಕೌಂಟ್ ಸ್ಟೇಟ್‍ಮೆಂಟ್ ನೀಡಿದ ಬ್ಯಾಂಕ್ ಗೆ ಗ್ರಾಹಕ ವಿವಾದ ಪರಿಹಾರ ವೇದಿಕೆ 10 ಸಾವಿರ ರೂ. ದಂಡ ವಿಧಿಸಿದೆ.
ಪತಿಯ ಅನುಮತಿ ಇಲ್ಲದೇ, ಆತನ ಬ್ಯಾಂಕ್ ಖಾತೆಗಳ ಮೂರು ವರ್ಷದ ಸ್ಟೇಟ್ ಮೆಂಟ್‍ಗಳನ್ನು ಆತನ ಪತ್ನಿಗೆ ವಿತರಿಸಿದ್ದ ಬ್ಯಾಂಕ್ ನಡೆ ತಪ್ಪು ಎಂದು ಅಹಮದಾಬಾದ್ ಗ್ರಾಹಕ ವಿವಾದ ಪರಿಹಾರ ವೇದಿಕೆ ಅಭಿಪ್ರಾಯಪಟ್ಟಿದ್ದು, ಇದೇ ಕಾರಣಕ್ಕೆ ಬ್ಯಾಂಕ್ ಗೆ 10 ಸಾವಿರ ದಂಡ ವಿಧಿಸಿರುವುದಾಗಿ ಹೇಳಿದೆ.
ತಮ್ಮ ಗಮನಕ್ಕೆ ತರದೇ ವೈಯಕ್ತಿಕ ವಿವರಗಳನ್ನು ಪತ್ನಿಗೆ ನೀಡಿದ ಇಂಡಿಯನ್ ಓವರ್ಸೀಸ್ ಬ್ಯಾಂಕ್(ಐಒಬಿ) ವಿರುದ್ಧ ಅಹಮದಾಬಾದ್‍ನ ದಿನೇಶ್ ಪಮ್ನಾನಿ ಎಂಬ ಗ್ರಾಹಕ ದೂರು ಸಲ್ಲಿಸಿದ್ದರು. 'ಕೌಟುಂಬಿಕ ನ್ಯಾಯಾಲಯದಲ್ಲಿ ನಮ್ಮ ಕುಟುಂಬ ಕಲಹದ ಪ್ರಕರಣವಿದ್ದು, ಈ ಸಂದರ್ಭದಲ್ಲಿ ನನ್ನ ಬ್ಯಾಂಕ್ ವಿವರಗಳನ್ನು ಪತ್ನಿಗೆ ಬ್ಯಾಂಕ್ ನೀಡಿದೆ. ನನ್ನ ಅನುಮತಿ ಇಲ್ಲದೇ ನೀಡಿರುವುದು ತಪ್ಪು,' ಎಂದು ವಾದಿಸಿದ್ದರು.
'ದಿನೇಶ್ ಪ್ರತಿನಿಧಿಯಾಗಿ ಅವರ ಪತ್ನಿ ಬ್ಯಾಂಕಿಗೆ ಬಂದಿದ್ದರು. ಹೀಗಾಗಿ, ನಾವು ಸ್ಟೇಟ್ ಮೆಂಟ್ ವಿತರಿಸಿದೆವು. ಇದರಿಂದ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲ,' ಎಂದು ಬ್ಯಾಂಕ್ ವಾದಿಸಿತ್ತು. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್‍ಬಿಐ) ಮಾರ್ಗಸೂಚಿ ಪ್ರಕಾರ, ವ್ಯಕ್ತಿಯ ಒಪ್ಪಿಗೆ ಪತ್ರವಿಲ್ಲದೇ ಮೂರನೇ ವ್ಯಕ್ತಿಗೆ ಬ್ಯಾಂಕ್ ಸ್ಟೇಟ್‍ಮೆಂಟ್ ಗಳನ್ನು ನೀಡುವಂತಿಲ್ಲ. ಖಾಸಗಿತನದ ಉಲ್ಲಂಘನೆ ಮಾಡುವಂತಿಲ್ಲ. ತಮ್ಮ ಖಾತೆಯಿಂದ 103 ರೂ. ಕಡಿತ ಮಾಡಿರುವುದಾಗಿ ದಿನೇಶ್ ಗೆ ಬ್ಯಾಂಕ್‍ನಿಂದ ಎಸ್ಸೆಮ್ಮೆಸ್ ಬಂದಿತ್ತು. ಈ ಬಗ್ಗೆ ವಿವರಗಳನ್ನು ಕೇಳಿದಾಗ, ಸ್ಟೇಟ್‍ಮೆಂಟ್ ವಿಷಯ ಬಯಲಾಗಿದೆ.
ಇದನ್ನೇ ಮುಂದಿಟ್ಟು ಕೊಂಡು ದಿನೇಶ್ ದೂರು ನೀಡಿದ್ದರು ಎಂದು ತಿಳಿದುಬಂದಿದೆ.ಈ ಘಟನೆ ಕಾನೂನು ವ್ಯವಸ್ಥೆಗಳ ಬಗ್ಗೆ ಜನಸಾಮಾನ್ಯರು ಜಾಗೃತರಾಗಿರಬೇಕು ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ.





