ಹಾಲಿ ವರ್ಷ ಸೇನೆಯಿಂದ 230 ಉಗ್ರರು ಹತ, ಗಣನೀಯ ಪ್ರಮಾಣದಲ್ಲಿ ಕಲ್ಲು ತೂರಾಟ ಪ್ರಕರಣಗಳ ಇಳಿಕೆ!
0
ಡಿಸೆಂಬರ್ 10, 2018
ನವದೆಹಲಿ: ಕಾಶ್ಮೀರದಲ್ಲಿ ಈ ವರ್ಷ ಬರೊಬ್ಬರಿ 230 ಉಗ್ರರರನ್ನು ಹೊಡೆದುರುಳಿಸಲಾಗಿದ್ದು, ಕಲ್ಲು ತೂರಾಟ ಪ್ರಕರಗಳೂ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸೇನಾಧಿಕಾರಿಗಳು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಕಳೆದೊಂದು ವರ್ಷದ ಅವಧಿಯಲ್ಲಿ ಭಾರತದ ರಕ್ಷಣಾ ಸಿಬ್ಬಂದಿಗಳು ಜಮ್ಮು ಮತ್ತು ಕಾಶ್ಮೀರ ಕಣಿವೆ ಪ್ರದೇಶದಲ್ಲಿ 230 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಅದೇ ಹೊತ್ತಿನಲ್ಲೇ ಭಾರತದ ಕಡೆಯೂ ಹಲವರು ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯಿಂದಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ವರ್ಷದ ಜೂನ್ 25 ರಿಂದ ಸೆಪ್ಟೆಂಬರ್ 14ರ ವರೆಗೆ 51 ಉಗ್ರರನ್ನು, ಸೆಪ್ಟೆಂಬರ್ 15ರಿಂದ ಡಿಸೆಂಬರ್ 5 ವರೆಗಿನ ಅವಧಿಯಲ್ಲಿ 85 ಉಗ್ರರನ್ನು ಕೊಲ್ಲಲಾಗಿದೆ. ಅದರಂತೆ, ಭಾರತದಲ್ಲಿ ಜೂನ್ 25ರಿಂದ ಸೆಪ್ಟೆಂಬರ್ 14ರ ವರೆಗಿನ ಅವಧಿಯಲ್ಲಿ ರಕ್ಷಣಾ ಸಿಬ್ಬಂದಿಯೂ ಸೇರಿದಂತೆ 8 ಮಂದಿ ಹತರಾಗಿದ್ದು, ಅಂತೆಯೇ 216 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರ್ಷದಲ್ಲಿ ಇಲ್ಲಿಯ ವರೆಗೆ ಒಟ್ಟು 232 ಉಗ್ರರನ್ನು ಕೊಲ್ಲಲಾಗಿದೆ. ಇದೇ ವೇಳೆ 240 ಮಂದಿ ಉಗ್ರರು ಮತ್ತು ವಿದೇಶಿಯರು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರಪತಿ ಆಡಳಿತ ಹೇರಿಕೆ ಬಳಿಕ ಕಾಶ್ಮೀರದಲ್ಲಿ ಗಣನೀಯ ಪ್ರಮಾಣದಲ್ಲಿ ಭದ್ರತೆ ಹೆಚ್ಚಳ:
ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಬಳಿಕ ಕಾಶ್ಮೀರದಲ್ಲಿ ಗಣನೀಯ ಪ್ರಮಾಣದಲ್ಲಿ ಭದ್ರತೆ ಹೆಚ್ಚಳವಾಗಿದ್ದು, ಜೂನ್ 19ರಂದು ಕಾಶ್ಮೀರದಲ್ಲಿ ಸರ್ಕಾರ ಪತನಗೊಂಡು ನಂತರ ಭದ್ರತೆಯನ್ನು ಎಂದಿಗಿಂತಲೂ ಹೆಚ್ಚಿಸಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





