HEALTH TIPS

ಒಲುಮೆ ಕೃತಿ ಬಿಡುಗಡೆ

ಉಪ್ಪಳ: ಮನೋವಿಕಾಸಕ್ಕೆ ಕಾರಣವಾಗುವ ಉತ್ತಮ ಬರಹಗಳ ಓದುವಿಕೆಯತ್ತ ಯುವ ಸಮೂಹ ಆಸಕ್ತರಾಗಬೇಕು. ಭಾವನೆಗಳನ್ನು ಅಕ್ಷರ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ಸದಾಶಯಗಳನ್ನು ಆ ಮೂಲಕವೂ ಪಸರಿಸುವ ಕವಿಮನಸ್ಸುಗಳ ಸಂಖ್ಯೆ ಬೆಳೆಯಬೇಕು ಎಂದು ಹಿರಿಯ ಸಾಮಾಜಿಕ ಧುರೀಣ ವೀರಪ್ಪ ಅಂಬಾರ್ ತಿಳಿಸಿದರು. ಚೆರುಗೋಳಿಯ ಶ್ರೀಧೂಮಾವತಿ-ಕೋಮಾರುಚಾಮುಂಡಿ ದೈವಗಳ ಇತ್ತೀಚೆಗೆ ನಡೆದ ವಾರ್ಷಿಕ ಜಾತ್ರೆಯ ಪ್ರಯುಕ್ತ ಸ್ಥಳೀಯ ಶ್ರೀಸದಾಶಿವ ಕಲಾವೃಂದದ 45ನೇ ವಾರ್ಷಿಕೋತ್ಸವದ ಸಂದರ್ಭ ಪತ್ರಕರ್ತೆ, ಕವಯಿತ್ರಿ ಸುನಿತ ಜಿ.ಕೃಷ್ಣ ಮಂಗಲ್ಪಾಡಿ ಅವರ ಕವನ ಸಂಕಲನ "ಒಲುಮೆ" ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೃತಿಗೆ ಮುನ್ನುಡಿ ಬರೆದ ಚುಟುಕು ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಕೃತಿಯ ಬಗ್ಗೆ ವಿಮರ್ಶೆ ನಡೆಸಿ, ಸರಳ, ಸುಂದರ ಸಾಲುಗಳ ಮೂಲಕ ಕವಯಿತ್ರಿ ಸಾಮಾಜಿಕ ಕಳಕಳಿಯನ್ನು ತಮ್ಮ ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಒಲವಿನ ಒಲುಮೆ ಕೃತಿಯ ಓದು ಹೊಸತನಕ್ಕೆ ತೆರೆದುಕೊಂಡಿದೆ ಎಂದು ತಿಳಿಸಿದರು. ಸಾಹಿತ್ಯ ಬರಹಗಳ ಓದುವ ಹವ್ಯಾಸ ಇನ್ನಷ್ಟು ಬೆಳೆಯಬೇಕು. ಪುಸ್ತಕಗಳನ್ನು ಕೊಂಡು ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಅನುಭವಗಳ ಸಾಕಾರತೆಗಳು ಅಂತರಾಳದಲ್ಲಿ ಅಮೂರ್ತವಾಗಿರುವುದರಿಂದ ಯಾವ ಪ್ರಯೋಜನಗಳೂ ಇರುವುದಿಲ್ಲ. ಅಂತಹ ಭಾವನೆಗಳು ಅಕ್ಷರದ ಮೂಲಕ ಮೂರ್ತತೆ ಪಡೆದಾಗ ಅದು ಓದುಗನನ್ನು ತಟ್ಟಿ ಮುದಗೊಳಿಸಿ ಸಾಕಾರತೆ ಪಡೆಯುತ್ತದೆ. ಸುನಿತಾ ಜಿ. ಕೃಷ್ಣ ಅವರ ಕಣ್ತೆರೆಸುವ ಅಕ್ಷರ ರೂಪಕಗಳು ಸಾಹಿತ್ಯ ಪ್ರಪಂಚಕ್ಕೆ ಗರಿಮೆ ತರುತ್ತದೆ ಎಂದು ತಿಳಿಸಿದರು. ನಿವೃತ್ತ ಕಂದಾಯ ಅಧಿಕಾರಿ ಲಿಂಗಪ್ಪ ಶೆಟ್ಟಿಗಾರ್ ಪರಂಕಿಲ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಿಹಿಂಪ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಂಕರ ಭಟ್ ಉಳುವಾನ, ನಿವೃತ್ತ ಪೋಲೀಸ್ ಅಧಿಕಾರಿ ಶೀನಪ್ಪ ಪೂಜಾರಿ ಎ.ಅಲಾರ್.ದುರ್ಗಿಪಳ್ಳ, ಉದ್ಯಮಿ ಮೋಹನ್ ಎನ್.ಶೆಟ್ಟಿ ಮಜ್ಜಾರ್ ಕುಳೂರು, ಶ್ರೀಸದಾಶಿವ ಕಲಾವೃಂದದ ಅಧ್ಯಕ್ಷ ಸಂಜೀವ ಶೆಟ್ಟಿ, ಹಿರಿಯರಾದ ಸುಬ್ಬಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಕೃತಿಕರ್ತೃ ಸುನಿತ ಜಿ. ಕೃಷ್ಣ ಉಪಸ್ಥಿತರಿದ್ದು ಕೃತಿ ಮೂಡಿಬಂದ ಹಾದಿಯ ಬಗ್ಗೆ ಮಾತನಾಡಿದರು. ಬಾಲಕೃಷ್ಣ ಪಿ. ಸ್ವಾಗತಿಸಿ, ಬಾಲಕೃಷ್ಣ ಅಂಬಾರ್ ವಂದಿಸಿದರು. ಕಲಾವೃಂದದ ಕಾರ್ಯದರ್ಶಿ ಶಮಂತ್ ಶೆಟ್ಟಿ ವರದಿ ವಾಚಿಸಿದರು. ರಮಾನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries