HEALTH TIPS

ಐಸಿಡಿಎಸ್‍ನಿಂದ ವೈದ್ಯಕೀಯ ಶಿಬಿರ-ತರಬೇತಿ

ಬದಿಯಡ್ಕ: ಸುದೃಢ ಸಮಾಜದ ನಿರ್ಮಾಣ ಮಾದರಿ ತಾಯಿಯಿಂದ ಮಾತ್ರ ಸಾಧ್ಯ. ಗರ್ಭಾವಸ್ಥೆಯಲ್ಲಿ ಮತ್ತು ತಾಯಿಯಾದ ಎರಡು ವರ್ಷಗಳ ಕಾಲ ತಾಯಿ ಸೇವಿಸುವ ಆಹಾರ ಹಾಗೂ ಮಗುವಿನ ಮೇಲಿನ ಕಾಳಜಿ ಮತ್ತು ಸರಿಯಾದ ಪರಿಪಾಲನೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ದೈಹಿಕ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಠಿಸಿದಾಗ ಮಾತ್ರ ತಾಯಿ ಮತ್ತು ಮಗು ನೆಮ್ಮದಿಯಿಂದಿರಲು ಸಾಧ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು. ಅವರು ಕೇರಳ ಸರಕಾರದ ವನಿತಾ ಶಿಶು ಅಭಿವೃದ್ದಿ ಇಲಾಖೆ ಐ.ಸಿ.ಡಿ.ಎಸ್, ಬದಿಯಡ್ಕ ಗ್ರಾಮ ಪಂಚಾಯತು ಆಶ್ರಯದಲ್ಲಿ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಗರ್ಭಿಣಿಯರಿಗೂ ಹಾಗೂ ಹಾಲುಣಿಸುವ ತಾಯಂದಿರಿಗೂ ಮೊದಲ ಸಾವಿರ ದಿನಗಳು 2018-19 ವೈದ್ಯಕೀಯ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತು ಸದಸ್ಯ ಅನ್ವರ್ ಓಝೋನ್ ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ ಮಗುವಿನ ಸರ್ವತೋಮುಖ ಬೆಳವಣಿಗೆಯ ಭದ್ರ ಬುನಾದಿ ಹಾಕಲು ಸೂಕ್ತ ಸಮಯ ಇದಾಗಿದ್ದು ಶಾರೀರಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಉತ್ತಮ ತಳಹದಿಯನ್ನೊದಗಿಸಲು ಪೂರಕವಾದ ಪ್ರಾಯವಾಗಿರುತ್ತದೆ ಎಂದವರು ಅಭಿಪ್ರಾಯ ಪಟ್ಟರು. ಯೋಜನೆಯಲ್ಲಿ ಮಕ್ಕಳ ಜನನ ತೂಕವನ್ನು ಸಮತೋಲನದಲ್ಲಿರಿಸುವುದು ಮತ್ತು ಮಾತೃ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು ಹಾಗೂ ಮಕ್ಕಳಲ್ಲಿ ಪ್ರಾಯಕ್ಕನುಗುಣವಾದ ಬೆಳವಣಿಗೆಯನ್ನು ಸಾಧಿಸುವುದಕ್ಕಾಗಿ ಬದಿಯಡ್ಕ ಪಂಚಾಯತಿನ ವ್ಯಾಪ್ತಿಗೊಳಪಟ್ಟ 2018-19 ವರ್ಷದಲ್ಲಿ 'ಮಗುವಿನ ಮೊದಲ 1000 ದಿನಗಳು' ಎಂಬ ಪದ್ಧತಿಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಪಂಚಾಯತಿನ ವ್ಯಾಪ್ತಿಯಲ್ಲಿ ಬರುವ ಗರ್ಭಿಣಿಯರು, ಬಾಣಂತಿಯರಿಗಾಗಿ 3 ತಿಂಗಳಿಗೊಮ್ಮೆ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಮನೆ ಸಂದರ್ಶಿಸಿ ಮಕ್ಕಳ ತೂಕದಲ್ಲಾಗುವ ವ್ಯತ್ಯಾಸಗಳು, ಹೆರಿಗೆಯಾದ ವಿವರಗಳು, ಮಕ್ಕಳ ಬೆಳವಣಿಗೆಯ ನಿರೀಕ್ಷಣೆ ಮಾಡುತ್ತಾರೆ. ಮಾತ್ರವಲ್ಲದೆ ಅಂಗನವಾಡಿಗಳಲ್ಲಿ ಆರೋಗ್ಯ ಮತ್ತು ಪೋಷಕಾಹಾರದ ಕುರಿತಾದ ತರಗತಿಗಳನ್ನೂ ನಡೆಸಲಾಗುತ್ತದೆ. ಕಾರ್ಯಕ್ರಮದಲ್ಲಿ ಕಾಸರಗೋಡು ಹೆಚ್ಚುವರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿಶಾ.ಯಂ ತಾಯಂದಿರಿಗೆ ಆರೋಗ್ಯ ಜಾಗೃತಿ ಹಾಗೂ ಎದೆಹಾಲುಣಿಸುವ ಮಹತ್ವವನ್ನು ತಿಳಿಯಪಡಿಸಿದರು. ವೈದ್ಯಾಧಿಕಾರಿ ಸತ್ಯಶಂಕರ ಭಟ್, ಪಂಚಾಯತು ಸದಸ್ಯರುಗಳಾದ ವಿಶ್ವನಾಥ ಪ್ರಭು, ಬಾಲಕೃಷ್ಣ ಶೆಟ್ಟಿ, ರಾಜೇಶ್ವರಿ, ಜಯಂತಿ ಉಪಸ್ಥಿತರಿದ್ದರು. ಐಸಿಡಿಎಸ್ ಮೇಲ್ವಿಚಾರಕಿ ಜ್ಯೋತಿ ಸ್ವಾಗತಿಸಿ, ಭವ್ಯ ವಂದಿಸಿದರು. ಮಾಹಿತಿಗಳ ವಿವರ: ಗರ್ಭಿಣಿಯರು ಮತ್ತು ತಾಯಂದಿರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸಮಯಾಸಮಕ್ಕೆ ಗರ್ಭಿಣಿಯರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಉತ್ತಮವಾದ ಆಹಾರದ ಸೇವನೆದಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಹಾಗೆಯೇ ರಕ್ತಹೀನತೆ ದೂರವಾಗುತ್ತದೆ. ಸದೃಢ ಮಗುವಿನ ಬೆಳವಣಿಗೆ ತಾಯಿಯ ದೈಹಿಕ ಮಾನಸಿಕ ಆರೋಗ್ಯವನ್ನು ಅವಲಂಬಿಸಿದೆ. ಎದೆಹಾಲಿನಲ್ಲಿ ರೋಗ ಪ್ರತಿರೋಧಕ ಶಕ್ತಿ ಅಡಕವಾಗಿರುವುದರಿಂದ ತಪ್ಪದೆ ಮಗುವಿಗೆ ಹಾಲೂಡಿಸಬೇಕು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries