ಬದಿಯಡ್ಕ: ಸಿದ್ದಾಂತಗಳು ಮೂಲ ರೂಪದಲ್ಲಿ ವೇದಗಳಲ್ಲಿ ಅಡಕವಾಗಿದೆ. ಆದರೆ ಮಿಕ್ಕುಳಿದಂತೆ ದಶಾವತಾರದಲ್ಲಿ ಅವುಗಳನ್ನು ವಿಸ್ತಾರವಾಗಿ ಬೆಳೆಸಲಾಗಿದ್ದು ಅವುಗಳೆಲ್ಲ ನಿಜವಲ್ಲ. ನೈಜತೆ ಮತ್ತು ಮಹಾದ್ಬುತಗಳನ್ನು ಸಮ್ಮಿಲನಗೊಳಿಸಿ ಬರೆದ ಪುರಾಣಗಳಲ್ಲಿ ಹಲವುಗಳನ್ನು ಮರೆಮಾಚಲಾಗಿದ್ದು, ಈ ಬಗ್ಗೆ ಹೇಳಬೇಕಾದವುಗಳನ್ನು ತನ್ನ ಪರ್ವ ಮತ್ತು ಉತ್ತರಕಾಂಡ ಕಾದಂಬರಿಗಳಲ್ಲಿ ಉಲ್ಲೇಖಿಸಿದ್ದೇನೆ. ವರ್ತಮಾನದ ಕಾಲಘಟ್ಟದಲ್ಲಿ ಜನಜೀವನ, ರಾಷ್ಟ್ರದ ಪರಿಕಲ್ಪನೆಗೆ ಪುರಾಣ ಇತಿಹಾಸಗಳ ಮರುಶೋಧನೆಯ ಚಿಂತನೆಗಳ ಆಸಕ್ತಿ ಮೂಡಬೇಕು ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜ, ಕಾದಂಬರಿಕಾರ ಡಾ.ಎಸ್.ಎಲ್.ಬೈರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೋತ್ಥಾನಕ್ಕಾಗಿ ಸಕಾರಾತ್ಮಕ ಶಕ್ತಿ ಸಂಚಯನದ ಉದ್ದೇಶದೊಂದಿಗೆ ನೀರ್ಚಾಲು ಮಾನ್ಯ ಸಮೀಪದ ಮೇಗಿನಡ್ಕದಲ್ಲಿ ಹಮ್ಮಿಕೊಳ್ಳಲಾದ ಚತುರ್ಮುಖ ಚಿಂತನೆಗಳಿಂದೊಡಗೂಡಿದ ನಮೋ, ಜ್ಞಾನ, ಭಕ್ತಿ, ಯಕ್ಷ ಯಜ್ಞಗಳ ಎರಡನೇ ದಿವಾದ ಶನಿವಾರ ನಡೆದ ಜ್ಞಾನ ಯಜ್ಞ ಸಮಾರಂಭದಲ್ಲಿ ತಮ್ಮ ಉತ್ತರಕಾಂಡಕಾದಂಬರಿಯ ಬಗ್ಗೆ ಮಾತು-ಕತೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯನ್ನು ಸಕಾರಾತ್ಮಕವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಆಳ ಚಿಂತನೆಗಳ ಅಗತ್ಯ ಇದೆ. ಪ್ರಾಚೀನ ಗ್ರಂಥಗಳ ಹೊಸ ಒಳನೋಟಗಳಿಂದ ಅಲ್ಲಿ ಉಲ್ಲೇಖಿಸಲಾದ ಪಾತ್ರಗಳಲ್ಲಿ ಒಳಪಡದ ವ್ಯಕ್ತಿತ್ವಗಳು ಏನು ಹೇಳುತ್ತವೆ ಎಂಬ ಶೋಧನೆ ತನ್ನನ್ನು ಅಧ್ಯಯನಕ್ಕೆ ಪ್ರೇರೇಪಿಸಿದ್ದು ತೃಪ್ತಿದಾಯಕವಾಗಿ ಬರೆಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ರಾಮಾಯಣದ ಊರ್ಮಿಳೆ. ಲಕ್ಷ್ಮಣ, ಸೀತೆ, ಶಬರಿ, ಇಂದ್ರಜಿತು ಮೊದಲಾದ ಪಾತ್ರಗಳು ಏನನ್ನು ಹೇಳಬೇಕಿತ್ತೋ ಅದನ್ನು ಹೇಳಲಾರದೆ ಮರೆಮಾಚಲ್ಪಟ್ಟ ಮುಖಗಳಾಗಿ ಎಂದಿಗೂ ಕಾಡುತ್ತವೆ. ಇಂತಹ ಮರೆಮಾಚುವಿಕೆ ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಬೆಳಕಿಗೆ ತರುವ ಮೂಲಕ ಅವುಗಳ ಸತ್ಪಥದೆಡೆಗೆ ಮುನ್ನಡೆಯಬೇಕು ಎಂದು ಬೈರಪ್ಪ ಕರೆನೀಡಿದರು. ಶ್ರೀರಾಮನ ವನವಾಸದ ಹದಿನಾಲ್ಕು ವರ್ಷಗಳ ಅಯೋಧ್ಯೆಯ ಸ್ಥಿತಿ ಉಲ್ಲೇಖಗೊಳ್ಳುವುದಿಲ್ಲ. ಆಡಳಿತದ ಬಗ್ಗೆ ಅನನುಭವಿಯಾದ ಭರತನ ಅಧಿಕಾರ ನಿರಾಕರಣೆ ಮತ್ತು ಅವನಿಂದ ಆಳಲ್ಪಡುವ ಅಯೋಧ್ಯೆಯ ಬಗ್ಗೆ ತಿಳಿಯಬೇಕಾದ ಅಗತ್ಯ ಇದೆ. ಪಿತೃವಾಕ್ಯ ಪರಿಪಾಲನೆಯ ಆದರ್ಶವನ್ನಿರಿಸಿ ಶ್ರೀರಾಮಚಂದ್ರ ಅಯೋಧ್ಯೆಯ ಆಡಳಿತವನ್ನು ಅವಗಣಿಸಿದ್ದರ ಬಗ್ಗೆ ನಾವು ಚಿಂತಿಸಬೇಕು. ಅಂತಹ ಸಂದಿಗ್ದತೆಯ ಸಾಮ್ರಾಜ್ಯದ ಗೊಂದಲಗಳನ್ನು ಭಾರತ ಮತ್ತೆ ಮತ್ತೆ ಎದುರಿಸಿದೆ. ಇಂದು ಅದು ಸುಸ್ಥಿರತೆಯ ತನ್ನ ಪೂರ್ಣ ಸ್ವರೂಪವನ್ನು ಪಡೆಯಲು ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಇತಿಹಾಸಗಳ ಮರುಶೋಧ, ಅದರೊಳಗೆ ಅನುಸಂಧಾನಗೊಂಡು ರಾಷ್ಟ್ರ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಕರೆನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಮಾಜಿ ಸಚೇತಕ ಕ್ಯಾಪ್ಟನ್. ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಸಾಹಿತ್ಯ ಪ್ರೇಮಿಗಳಾಗಿ ಕೇವಲ ಓದು-ಪಾತ್ರಗಳ ಬಂದುಹೋಗುವಿಕೆಯಲ್ಲಿ ಮೈಮರೆಯದೆ ಅಲ್ಲಿಯ ಪ್ರತಿಯೊಂದು ಪಾತ್ರಗಳು ತೀರ್ಮಾನ ಕೈಗೊಂಡ ಸನ್ನಿವೇಶಗಳ ಬಗ್ಗೆ ಚಿಂತನೆ ನಡೆಸಬೇಕಾದ ಅಗತ್ಯ ಇದೆ. ಪಾತ್ರಗಳನ್ನು ಸಮಕಾಲೀನ ವಿಷಯಗಳೊಂದಿಗೆ ಬರೆಯುವ ಶಕ್ತಿ ಬೈರಪ್ಪನವರ ವಿಶೇಷತೆಯಾಗಿದ್ದು, ಪುರಾಣ-ಇತಿಹಾಸಗಳಲ್ಲಿ ಉಲ್ಲೇಖಿಸಿದ ಸನ್ನಿವೇಶಗಳು ಈಗಲೂ ನಮ್ಮಿದಿರಿಗೆ ಸವಾಲಾಗಿ ವಿಭ್ರಾಂತಿಗೊಳಿಸುತ್ತಿದ್ದು, ಚಿಂತನಶೀಲ ಓದುವಿಕೆ ಅಗತ್ಯ ಎಂದು ತಿಳಿಸಿದರು. ಸದಾಶಯದ ಆಡಳಿತ ನಡೆಸುತ್ತಿರುವ ನರೇಂದ್ರಮೋದಿಯವರ ಕನಸಿಗೆ ಭೀತಿಯಾಗುತ್ತಿರುವ ರಾಕ್ಷಸೀ ಪ್ರವೃತ್ತಿಗಳು ನಾಶಹೊಂದುವುದರಲ್ಲಿ ಸಂಶಯವಿಲ್ಲ. ಸಕಾರಾತ್ಮಕ ಚಿಂತನೆಗಳು ಎಲ್ಲೆಡೆ ಆವಿರ್ಭವಿಸಿ ಸುಸ್ಥಿರ ಸಮಾಜ ನಿರ್ಮಾಣವಾಗಲಿ ಎಂದು ಅವರು ತಿಳಿಸಿದರು.
ಈ ಸಂದರ್ಭ ಡಾ.ಎಸ್.ಎಲ್. ಬೈರಪ್ಪ ಅವರೊಂದಿಗೆ ಸಾಹಿತ್ಯ ಪ್ರೇಮಿಗಳಿಂದ ಸಂವಾದ ನಡೆಯಿತು. ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೈರಪ್ಪ ಅವರು, ಪುರಾಣ-ಇತಿಹಾಸಗಳ ಜನಜೀವನ, ಸ್ತ್ರೀಯ ಬಗೆಗಿನ ಪರಿಕಲ್ಪನೆ ಏನಿತ್ತೋ ಅಂತೆಯೇ ವರ್ತಮಾನದಲ್ಲೂ ಅದೇ ಕಲ್ಪನೆಯಂತೆ ಚಿತ್ರಿಸಬೇಕಾದ ಅನಿವಾರ್ಯತೆ ಕೃತಿಕಾರನಿಗಿದೆ. ನೈಜವಾಗಿ ಅದುವೇ ಸತ್ಯ ಹೌದು ಎಂದು ತಿಳಿಸಿದರು. ತನಗೆ ಜ್ಞಾನಪೀಠ ಲಭಿಸಬೇಕೆಂದು ಇತ್ತೀಚೆಗೆ ಭಾರೀ ಹೇಳಿಕೆಗಳು ವ್ಯಕ್ತವಾಗುತ್ತಿದೆ. ಆದರೆ ಇದರಿಂದ ತನಗೆ ನೋವಾಗುತ್ತಿದ್ದು, ತನ್ನನ್ನು ಕೃತಿಗಳಿಂದ ಮಾತ್ರ ಗೌರವಿಸಿ. ಸಾಹಿತ್ಯ ಕೃತಿಗಳನ್ನು ಕೊಂಡು ಓದಿ ಪಡೆಯುವ ಜ್ಞಾನ ತನಗೆ ಲಭಿಸುವ ನೈಜ ಪ್ರಶಸ್ತಿಯಾಗಿದೆ. ಪ್ರಶಸ್ತಿಗಾಗಿ ಬರೆಯಲು ಸಾಧ್ಯವಿಲ್ಲ. ಶತಶತಮಾನಗಳ ಹಿಂದಿನ ಕವಿಗಳು ಬರೆದ ಕಾವ್ಯಗಳು ಇಂದಿಗೂ ನಮ್ಮಿದಿರು ಪ್ರಸ್ತುತವೆಂದಾದರೆ ಅದುವೇ ಪ್ರಶಸ್ತಿ. ಅಂತಹ ಕನಸು ನನ್ನದು ಎಂದು ತಿಳಿಸಿದರು.
ಎಸ್ ಎಲ್ ಬೈರಪ್ಪ ಅವರ ಒಡನಾಡಿ, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಧಾನ ಗುರುದತ್ತ್ ಅಧ್ಯಕ್ಷತೆ ವಹಿಸಿ, ಬೈರಪ್ಪ ಅವರ ಕೃತಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ಸಂಯೋಜಕ ಡಾ.ಮನೋಹರ ಮೇಗಿನಡ್ಕ ಅವರು ಉಪಸ್ಥಿತರಿದ್ದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿರು. ಬೆಂಗಳೂರಿನ ಸಮರ್ಥನಂ ಅಂಗವಿಕಲ ಸಂಸ್ಥೆಯ ರೂವಾರಿ ಸತೀಶ್ ಕೆ. ವಂದಿಸಿದರು.
ಬಳಿಕ ಡಾ.ಎಸ್.ಎಲ್.ಬೈರಪ್ಪ ಅವರ ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕøತ ಕೃತಿ ಮಂದ್ರ ಕಾದಂಬರಿಯಲ್ಲಿ ಉಲ್ಲೇಖಿಸಲ್ಪಟ್ಟ ರಾಗಗಳ ಪ್ರಾತ್ಯಕ್ಷಿಕೆಯು ಡಾ.ನಾಗರಾಜ ರಾವ್ ಹವಾಲ್ದಾರ್ ಅವರಿಂದ ನಡೆಯಿತು.ಹಾಡುಗಾರಿಕೆಯ ಹಿಮ್ಮೇಳದಲ್ಲಿ ಕೇದಾರನಾಥ ಹವಾಲ್ದಾರ್(ತಬಲಾ),ಸಮೀರ್ ಹವಾಲ್ದಾರ್(ಹಾರ್ಮೋನಿಯಂ)ನಲ್ಲಿ ಸಹಕರಿಸಿದರು.
ಇಂದು(ಡಿ.30) ಭಕ್ತಿ ಯಜ್ಞದ ಅಂಗವಾಗಿ ಸಂಜೆ 4 ರಿಂದ ಡಾ.ವಿದ್ಯಾಭೂಷಣ ಬೆಂಗಳೂರು ಅವರಿಂದ ಭಕ್ತಿಸಂಗೀತ ಸೌರಭ ನಡೆಯಲಿದೆ. ಹಿರಿಯ ಪತ್ರಕರ್ತ, ಸಂಗೀತ ವಿಮರ್ಶಕ ಎ.ಈಶ್ವರಯ್ಯ ಅಧ್ಯಕ್ಷತೆ ವಹಿಸುವರು. ಸದಾನಂದ ರಾವ್ ನವದೆಹಲಿ, ಸದಾಶಿವ ಶಾನುಭೋಗ್ ಕಿರಿಮಂಜೇಶ್ವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.





