HEALTH TIPS

ಮಹಾಮೌನಿ ಬುದ್ದನನ ಹಾಗೆ ಜ್ಞಾನೋದಯದ ಕವಿತೆಗಳು ಬರಲಿ"-ಆರ್.ಕೆ.ಉಳಿಯತ್ತಡ್ಕ ಜಾನಪದಪರಿಷತ್ತು ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಅಭಿಮತ

ಉಪ್ಪಳ: ಸಾಹಿತ್ಯ ಪರ ಸಂಸ್ಕøತಿ, ಅದರ ಪ್ರೀತಿ ಜನರ ಅಂತರಂಗವನ್ನು, ಸಾಮಾಜಿಕತೆಯನ್ನು ಧ್ವನಿಸುತ್ತದೆ. ವರ್ತಮಾನದ ಆಗುಹೋಗುಗಳ ತಲ್ಲಣ, ಒಳ ಆಂತರ್ಯದ ಮೂರ್ತ ಸ್ವರೂಪವಾಗಿ ಕವಿತೆ, ಬರಹಗಳು ಹುಟ್ಟಿಕೊಳ್ಳುತ್ತದೆ ಎಂದು ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ಭಾಗವಾಗಿ ಅಪರಾಹ್ನ ಹಮ್ಮಿಕೊಂಡ ರಾಜ್ಯೋತ್ಸವ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾತು ಕಡೆಯುವ ಪ್ರಕ್ರಿಯೆಯಾದ ಸಾಹಿತ್ಯಗಳು, ಕವಿಯ ಒಂದು ಸಂದರ್ಭದ ದೃಢತೆಯ ಸಂಕಲ್ಪದಲ್ಲಿ ಹುಟ್ಟಲ್ಪಡುತ್ತದೆ. ಆದರೆ ಓದುಗನ ಮಿತಿಗೆ ಅನುಸರಿಸಿ ಅರ್ಥೈಸಲ್ಪಡುವ ಬರಹಗಳು ಸಾರ್ವಕಾಲಿಕ ಮೌಲ್ಯಗಳದ್ದಾಗಿದ್ದರೆ ಕವಿ ಗೆಲ್ಲುತ್ತಾನೆ ಎಂದು ಅವರು ಈ ಸಂದರ್ಭ ತಿಳಿಸಿದರು. ವಾಚ್ಯಾರ್ಥ ಒಂದಾಗಿದ್ದರೆ, ಸೂಚ್ಯಾರ್ಥಗಳಲ್ಲಿ ವಿಶಾಲತೆಯಿರುವ ಕವಿತೆಗಳು ಭಾವನೆಗಳ, ವಿಚಾರವಂತಿಕೆಗಳ ಸಾಂದ್ರರೂಪಗಳಾಗಬೇಕು. ಕನಿಷ್ಠ ಶಬ್ದಗಳಲ್ಲಿ ಅಧ್ಯಯನ, ಓದು, ಅನುಭವಗಳ ಮೂಲಕ ಸೂಕ್ಷ್ಮಮತಿತ್ವದ ಅಂತಚಕ್ಷುಗಳನ್ನು ತೆರೆದು ಬರೆಯುವ ಕವಿ ಕಾವ್ಯ ಶಿಸ್ತುಗಳನ್ನು ಅಳವಡಿಸಿದಾಗ ಕವಿತೆ ಗೆಲ್ಲುತ್ತದೆ, ಕಾವ್ಯ ಮುಟ್ಟಿ ತಟ್ಟುತ್ತದೆ ಎಂದು ರಾಧಾಕೃಷ್ಣ ಉಳಿಯತ್ತಡ್ಕ ತಿಳಿಸಿದರು. ಬರೆಯುವ ಹಂಬಲ ಸಹಜವಾದರೂ ಮೂಲ ಸ್ವರೂಪದ ಕಲ್ಪನೆಯೊಂದಿಗೆ ಕವಿತೆಗೆ ಹುಟ್ಟು ನೀಡಬೇಕು. ಅವಸರದ, ಅಧ್ಯಯನ ರಹಿತ ಅಕ್ಷರಗಳ ಜೋಡನೆ ಸಾಹಿತ್ಯವನ್ನು ಸಾಯಿಸುತ್ತದೆ. ಈ ನಿಟ್ಟಿನಲ್ಲಿ ಯುವ ಸಾಹಿತಿಗಳು ಪರಾಮರ್ಶೆ ನಡೆಸಬೇಕು ಎಂದು ಅವರು ಕರೆನೀಡಿದರು. ಬಳಿಕ ಸ್ವರಚಿತ ಕವಿತೆಗಳು ಬರಲಿ ಎಂಬ ಕವನವೊಂದನ್ನು ವಾಚಿಸಿದ ಅವರು, "ಹಸಿದ ಒಡಲುಗಳಿಗೆ ತುತ್ತುನೀಡುವ ಕವಿತೆಗಳು ಬರಲಿ, ಬಂಜರು ನೆಲ ಜಲ ಹೀರಿಕೊಳ್ಳಲಿ, ಬಿಸಿಲ ಬೇಗೆಯನು ಹತ್ತಿಕ್ಕುವ ಕವಿತೆಗಳು ಬರಲಿ, ಆಧುನಿಕ ಬೆವರು ಹನಿಗಳಾಗಿ ಹರಿಯಲಿ, ಭೀತಿಯಿಲ್ಲದೆ ಕಣ್ಣು ತೆರೆದಾಗ ಕಾಮನ ಬಿಲ್ಲುಗಳು ಕಾಣಲಿ..ಮಹಾಮೌನಿ ಬುದ್ದನನ ಹಾಗೆ ಜ್ಞಾನೋದಯದ ಕವಿತೆಗಳು ಬರಲಿ" ಎಂದು ಕವಿತೆಗಳ ಆಶಯ ಮತ್ತು ಕವಿಭಾವದ ಸ್ವಂತಿಕೆಯನ್ನು ಪರಿಚಯಿಸಿದರು. ಹಿರಿಯ ಬಹುಭಾಷಾ ಸಾಹಿತಿ, ಪತ್ರಕರ್ತ ಮಲಾರು ಜಯರಾಮ ರೈ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಡಾ. ಸುರೇಶ್ ನೆಗಲಗುಳಿ, ಸಾಹಿತಿ ಡಾ.ಅಶೋಕ್ ಕುಮಾರ್ ಕಾಸರಗೋಡು, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಕವಯಿತ್ರಿ ಸಂಧ್ಯಾಗೀತ ಬಾಯಾರು ಉಪಸ್ಥಿತರಿದ್ದು, ಮಾತನಾಡಿದರು. ಬಹುಭಾಷಾ ಕವಿಗೋಷ್ಠಿಯಲ್ಲಿ ತಾರಾನಾಥ ಬೋಳಾರು, ಗುಣಾಜೆ ರಾಮಚಂದ್ರ ಭಟ್, ಶ್ಯಾಮಲಾ ರವಿರಾಜ್ ಕುಂಬಳೆ, ವಿಜಯಲಕ್ಷ್ಮೀ ಶಾನುಭೋಗ್, ಚಂದ್ರಿಕಾ ಶೆಣೈ, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ಹರೀಶ್ ಪೆರ್ಲ, ಜುನೈದ್ ಕೊಡಗು, ದುರ್ಗಾ ಸುಬ್ರಹ್ಮಣ್ಯ, ಅನುಷಾ ಸುಬ್ರಹ್ಮಣ್ಯ, ನಿರ್ಮಲಾ ಸೇಸಪ್ಪ, ಸುಭಾಶ್ ಪೆರ್ಲ, ಪರಮೇಶ್ವರಿ ಸುಳ್ಯ, ನಯನಾ ವಿ.ಭಟ್ ಬೈಲುಕುರಿಯ, ಅರುಂಧತೀ ರಾವ್, ಸೃಷ್ಠಿ, ಪೃಥ್ವಿ ಕಾಟುಕುಕ್ಕೆ, ಪ್ರದೀಶ್ ರಾಜ್, ಶಶಿಕಲಾ ಟೀಚರ್ ಕುಂಬಳೆ, ವಿರಾಜ್ ಅಡೂರು, ಅಭಿಲಾಷ್ ಪೆರ್ಲ, ಅಪೂರ್ವ ಎಂ, ಬದ್ರುದ್ದೀನ್ ಕೂಳೂರು, ಉದಯಶಂಕರ ಸುಳ್ಯ ಸಹಿತ ನಲ್ವತ್ತಕ್ಕಿಂತಲೂ ಮಿಕ್ಕಿದಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ಯುವ ಕವಿ ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ ಸ್ವಾಗತಿಸಿ, ಗೋಷ್ಠಿ ನಿರ್ವಹಿಸಿದರು. ಪುರುಷೋತ್ತಮ ಭಟ್ ಕೆ ವಂದಿಸಿದರು. ಭಾಗವಹಿಸಿ ಕವಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries