ಮೇಧಾ ಸರಸ್ವತಿ ಯಾಗಕ್ಕೆ ಅದ್ದೂರಿ ಚಾಲನೆ
0
ಡಿಸೆಂಬರ್ 28, 2018
ಮುಳ್ಳೇರಿಯ : ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಗುರುವಾರ ಮೇಧಾ ಸರಸ್ವತಿ ಯಾಗಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಇದರೊಂದಿಗೆ ವಿದ್ಯಾಲಯದ ನೂತನ ಶಿಶುಮಂದಿರ ಕಟ್ಟಡ ಲೋಕಾರ್ಪಣೆಯೂ ನಡೆಯಲಿದೆ.
ಗುರುವಾರ ಬೆಳಿಗ್ಗೆ ಅಡೂರು ಮಹಾದ್ವಾರ ಕಟ್ಟೆಯಿಂದ ಯಾಗ ಸಮುಚ್ಛಯಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾಗ ಸಮಿತಿ ಅಧ್ಯಕ್ಷ ಗಂಗಾಧರ ರಾವ್ ಕಾಂತಡ್ಕ, ಮುಖಂಡರಾದ ವೆಂಕಟ್ರಾಜ್, ಪ್ರದೀಪ ಕುಮಾರ್ ಬಳ್ಳಕ್ಕಾನ, ಪ್ರೇಮಾ ಎಂ ಭಾರಿತ್ತಾಯ, ಸುಧಿರಾಜ್, ಬಾಲಸುಬ್ರಹ್ಮಣ್ಯ ಭಟ್ ಬೈತನಡ್ಕ, ಶಾರದಾದೇವಿ ನೇತೃತ್ವ ವಹಿಸಿದ್ದರು. ಬಳಿಕ ಶ್ರೀಧರ ಮಾಟೆ ಅವರಿಂದ ಇಂದ್ರಜಾಲ ಪ್ರದರ್ಶನ, ಶಾಲಾ ಮಕ್ಕಳಿಂದ ಗಾಯನ ಕಾರ್ಯಕ್ರಮ ನಡೆಯಿತು. ಸಂಜೆ 3ರಿಂದ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳ ಸಹಿತ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ 6 ಗಂಟೆಯಿಂದ ನೂತನ ಕಟ್ಟಡದಲ್ಲಿ ಸುಳ್ಯದ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ನೇತೃತ್ವದಲ್ಲಿ ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದುವು.
ಇಂದು (ಡಿ.28ರಂದು) ಬೆಳಿಗ್ಗೆ 7ರಿಂದ ಮೇಧಾ ಸರಸ್ವತಿ ಯಾಗ ಆರಂಭವಾಗಲಿದೆ. ಬೆಳಿಗ್ಗೆ 11ಕ್ಕೆ ಶಿಶುಮಂದಿರದ ಲೋಕಾರ್ಪಣೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಡಿ ವೆಂಕಟ್ರಾಜ್ ಪ್ರಾಸ್ತಾವಿಕವಾಗಿ ಮಾತನಾಡುವರು. ಭಾರತೀಯ ವಿದ್ಯಾನಿಕೇತನ್ ಜಿಲ್ಲಾ ಅಧ್ಯಕ್ಷ ಶಿವಶಂಕರನ್, ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಕೆ ರಂಗನಾಥ ಶಣೈ, ಉಪ್ಪಿನಂಗಡಿ ಶ್ರೀರಾಮ ಪೌಢಶಾಲೆಯ ಸಂಚಾಲಕ ಯು ಜಿ ರಾಧ, ಜಾಲ್ಸೂರು ವಿವೇಕಾನಂದ ವಿದ್ಯಾ ಸಂಸ್ಥೆಗಳ ಸಂಚಾಲಕ ಸುಧಾಕರ ಕಾಮತ್, ಪಿ ರಾಮಚಂದ್ರ ಸುಳ್ಯ ಭಾಗವಹಿಸುವರು. ಸಂಜೆ 3ರಿಂದ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ಗಾನ-ನೃತ್ಯ ಸಂಗಮ ನಡೆಯಲಿದೆ.





