ಎಂತ ಮರ್ರೆ-ವ್ಯಾಪಾರ ಎಂದ್ರೆ ಹೀಗೂ ಮಾಡ್ತಾರಾ!-ಹೋಟೆಲುಗಳ ತ್ಯಾಜ್ಯ ನೀರು ರಹಸ್ಯವಾಗಿ ಸಾರ್ವಜನಿಕ ಸ್ಥಳಕ್ಕೆ: ಕಾಂಕ್ರೀಟಿನ ಅಡಿಭಾಗದಿಂದ ಹಾಕಿದ ಪೈಪನ್ನು ಪತ್ತೆ ಹಚ್ಚಿದ ಪಂಚಾಯತು ಅಧಿಕೃತರು
0
ಡಿಸೆಂಬರ್ 14, 2018
ಮಂಜೇಶ್ವರ: ಕುಂಜತ್ತೂರು ಮಾಸ್ಕೋ ಹಾಲಿನ ಹಿಂಬದಿಯಲ್ಲಿರುವ ಪಳ್ಳಂ ಎಂಬ ಪ್ರದೇಶಕ್ಕೆ ಅದೆಷ್ಟೋ ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯ ಬದಿಯಿಂದ ಹರಿದು ಬರುತಿದ್ದ ತ್ಯಾಜ್ಯ ನೀರಿನಿಂದಾಗಿ ಈ ಪ್ರದೇಶದ ಜನತೆ ಹಲವು ರೀತಿಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಂಬಂಧಪಟ್ಟವರಿಗೆ ಅದೆಷ್ಟೋ ಸಲ ದೂರುಗಳನ್ನು ನೀಡಿದ್ದರೂ ತ್ಯಾಜ್ಯ ನೀರು ಎಲ್ಲಿಂದ ಬರುವುದೆಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದು ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ತಲೆ ನೋವಾಗಿ ಪರಿಣಮಿಸಿತ್ತು.
ಮಳೆಗಾಲದಲ್ಲಂತೂ ಇತರ ನೀರಿನೊಂದಿಗೆ ಬೆರೆತು ಬರುತಿದ್ದ ತ್ಯಾಜ್ಯ ನೀರು ಉರವರಿಗೊಂದು ಸವಲಾಗಿತ್ತು. ಇದರಂತೆ ಸ್ಥಳೀಯರ ಒತ್ತಡಕ್ಕೊಳಗಾಗಿ ಆಗಮಿಸಿದ ಆರೋಗ್ಯ ಇಲಾಖೆ ಹಾಗೂ ಪಂಚಾಯತು ಅಧಿಕೃತರು ಚರಂಡಿಯನ್ನು ಮುಚ್ಚಿದ್ದ ಕಾಂಕ್ರಿಟ್ ಮುಚ್ಚಳವನ್ನು ಮೂರು ಕಡೆಯಲ್ಲಿ ತೆರೆದು ನೋಡಿದಾಗ ಕುಂಜತ್ತೂರು ಜಂಕ್ಷನಿನಲ್ಲಿ ಕಾರ್ಯಾಚರಿಸುತ್ತಿರುವ ಎರಡು ಖಾಸಗಿ ವ್ಯಕ್ತಿಗಳ ಹೋಟೆಲುಗಳ ತ್ಯಾಜ್ಯ ನೀರು ಹರಿದು ಬರುವುದನ್ನು ಪತ್ತೆ ಹಚ್ಚಲಾಗಿದೆ. ಈ ಮೊದಲು ಇದೇ ಹೋಟೆಲಿನವರಿಗೆ ಗ್ರಾ.ಪಂ. ತ್ಯಾಜ್ಯ ನೀರನ್ನು ಸಾರ್ವಜನಿಕ ಸ್ಥಳಕ್ಕೆ ಬಿಡಬಾರದೆಂಬ ಆದೇಶವನ್ನು ನೀಡಿತ್ತು. ತ್ಯಾಜ್ಯ ನೀರು ಹರಿದು ಹೋಗಲು ಬದಲಿ ವ್ಯವಸ್ಥೆ ಮಾಡಿರುವುದಾಗಿ ಖಾತ್ರಿ ಪಡಿಸಿದ ಹಿನ್ನೆಲೆಯಲ್ಲಿ ಆ ಸಮಯದಲ್ಲಿ ಗ್ರಾ.ಪಂ. ಸುಮ್ಮನಾಗಿತ್ತು.
ಆದರೆ ಇದೀಗ ಹೋಟೆಲಿನ ತ್ಯಾಜ್ಯ ನೀರನ್ನು ಪತ್ತೆ ಹಚ್ಚಿರುವ ಹಿನ್ನೆಲೆಯಲ್ಲಿ ಎರಡು ಹೋಟೆಲುಗಳಿಗೆ ಗ್ರಾಮ ಪಂಚಾಯತು ಹಾಗೂ ಆರೋಗ್ಯ ಇಲಾಖೆ ನೋಟೀಸು ನೀಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹೋಟೆಲ್‍ಗೆ ಸಂಬಂಧಪಟ್ಟವರು ಬದಲಿ ವ್ಯವಸ್ಥೆಯನ್ನು ಮಾಡಿದ ಬಳಿಕ ಚರಂಡಿಯ ತೆರೆದ ಕಾಂಕ್ರೀಟ್ ಮುಚ್ಚಳವನ್ನು ಮುಚ್ಚಿದರೆ ಸಾಕೆಂದು ಊರವರು ಗ್ರಾ.ಪಂ. ಅಧಿಕೃತರನ್ನು ಒತ್ತಾಯಿಸಿದ್ದಾರೆ.


