ಕುಟುಂಬಶ್ರೀಯ ಯಶಸ್ವಿ ಯೋಜನೆ : ಜನಪ್ರಿಯವಾಗುತ್ತಿರುವ ಊರಸಂತೆಗಳು
0
ಡಿಸೆಂಬರ್ 12, 2018
ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಆಶ್ರಯದಲ್ಲಿ ಎಂ.ಕೆ.ಎಸ್.ಪಿ. ಯೋಜನೆಯ ಅಂಗವಾಗಿ ಚಟುವಟಿಕೆ ನಡೆಸುತ್ತಿರುವ ಊರಸಂತೆ (ನಾಟ್ ಚಂದ)ಗಳು ಜನಪ್ರಿಯ ಉದ್ಯಮಗಳಾಗಿ ಬೆಳೆಯುತ್ತಿವೆ.
ಜಿಲ್ಲೆಯ ಸಿ.ಡಿ.ಎಸ್.ಗಳ ನೇತೃತ್ವದಲ್ಲಿ ಊರಸಂತೆಗಳು ಚಟುವಟಿಕೆ ನಡೆಸುತ್ತಿವೆ. ವಶಾರದಲ್ಲಿ 3 ದಿನ ಈ ಸಂತೆಗಳು ವಿವಿಧೆಡೆ ತೆರದಿರುತ್ತವೆ. ಅ.10ರಿಂದ ಈ ವರೆಗೆ ಒಟ್ಟು 202 ಸಂತೆಗಳನ್ನು ನಡೆಸಲಾಗಿದ್ದು,8,92,228 ರೂ.ನ ಆದಾಯ ಲಭಿಸಿದೆ. ಕುಟುಂಬಶ್ರೀ ಕೃಷಿಕರು ಬೆಳೆಯುವ ಜೈವಿಕ ತರಕಾರಿಗಳು, ಅರಿಶ್ರೀ ಅಕ್ಕಿ, ಸಫಲಂ ಗೇರುಬೀಜ, ಕರಕುಶಲ ಸಾಮಾಗ್ರಿಗಳು ಇತ್ಯಾದಿಗಳಿಂದ ತೊಡಗಿ ಗ್ರಾಮೀಣ ಉತ್ಪನ್ನಗಳ ವರೆಗೆ ಊರಸಂತೆಯಲ್ಲಿ ಲಭ್ಯವಿವೆ. ಕೇಕ್ ಹಬ್ಬ, ಪಾಯಸಮೇಳ ಇತ್ಯಾದಿಗಳೂ ಊರಸಂತೆಯ ಆಶ್ರಯದಲ್ಲಿ ನಡೆದು ಈಗಾಗಲೇ ಗಮನಸೆಳೆದಿವೆ.
ಊರಸಂತೆಯ ಜಿಲ್ಲಾ ಮಟ್ಟದ ಸ್ಪರ್ಧೆಗಳೂ ನಡೆಯುವುದಿದೆ. ಆಯಾ ಸಿ.ಡಿ.ಎಸ್. ನಡೆಸಿದ ಮಾರಾಟದ ಹಿನ್ನೆಲೆಯಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಕೃಷಿ ಸಂಸ್ಕಾರವನ್ನು ಮರಳಿ ತರುವ ಉದ್ದೇಶ, ಜನತೆಗೆ ನ್ಯಾಯಬೆಲೆಗೆ ಜೈವಿಕ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಊರಸಂತೆಗಳು ಯಶಶ್ವಿಯಾಗಿವೆ. ಹಂತಹಂತವಾಗಿ ಸಾರ್ವಜನಿಕ ಬೆಂಬಲ ಹೆಚ್ಚುತ್ತಿರುವುದು ಊರಸಂತೆಯ ಚಟುವಟಿಕೆಗಳ ಉತ್ಸಾಹ ಹೆಚ್ಚಿಸುತ್ತಿದೆ.
ಫೊಟೋ ಕುಟುಂಬಶ್ರೀ-ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಕಾಸರಗೋಡು ಜಿಲ್ಲೆಯ ಕಿನಾನೂರು-ಕರಿಂದಳಂನಲ್ಲಿ ನಡೆದ ಊರುಸಂತೆ.




