ಅಂಬೇಡ್ಕರ್ ಪರಿನಿರ್ಯಾಣ ದಿನಾಚರಣೆ
0
ಡಿಸೆಂಬರ್ 11, 2018
ಬದಿಯಡ್ಕ: ಬಾಬಾಸಾಹೇಬ್ ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರ 63ನೇ ಪರಿನಿರ್ಯಾಣ ದಿನಾಚರಣೆಯನ್ನು ಬದಿಯಡ್ಕ ಸರಕಾರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಆಚರಿಸಲಾಯಿತು.
ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಕೆ. ರವಿಕಾಂತ ಕೇಸರಿ ಕಡಾರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ಅವರು ಈ ಸಂದರ್ಭ ಮಾತನಾಡಿ ಶ್ರಮಿಕ ವರ್ಗಗಳ ಬಗ್ಗೆ ಚಿಂತನೆ ನಡೆಸಿ ಅವರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಧೀಮಂತ ವ್ಯಕ್ತಿಯಾದ ಅಂಬೇಡ್ಕರ್ ಸರ್ವಮಾನ್ಯರು. ಕಾರ್ಮಿಕರು ಮತ್ತು ಮಾಲೀಕರ ನಡುವಿನ ಬಾಂಧವ್ಯಕ್ಕೆ ಗಟ್ಟಿಯಾದ ತಳಪಾಯನ್ನು ಅವರು ಹಾಕಿಕೊಟ್ಟಿದ್ದಾರೆ ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಮುರಿಯಂಕೂಡ್ಲು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಜೀವನದಲ್ಲಿ ನಾವು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಮಾತನಾಡಿ ಅಂಬೇಡ್ಕರ್‍ರ ಜೀವನವನ್ನು ಸ್ಮರಿಸಿಕೊಂಡರು. ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ, ಅಧ್ಯಾಪಕರಾದ ಚಂದ್ರಹಾಸ ನಂಬಿಯಾರ್, ಚಂದ್ರಶೇಖರ ನುಡಿನಮನ ಸಲ್ಲಿಸಿದರು. ಅಧ್ಯಾಪಿಕೆ ದಿವ್ಯ ಗಂಗ ಪಿ. ಸ್ವಾಗತಿಸಿ, ಅಧ್ಯಾಪಕ ಸುಹೇಲ್ ವಂದಿಸಿದರು. ರಿಶಾದ್ ಪೆರ್ಲ ನಿರೂಪಿಸಿದರು.





