ಜಾತಿ ಆಧಾರದ ಮೇಲೆ ರಾಷ್ಟ್ರಪತಿಗಳ ಅಂಗರಕ್ಷಕರ ನೇಮಕ ಆರೋಪ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್
0
ಡಿಸೆಂಬರ್ 26, 2018
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಅಂಗರಕ್ಷಕರ ಹುದ್ದೆಗೆ ಕೇವಲ ಮೂರು ಜಾತಿಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ಸೇನಾ ಮುಖ್ಯಸ್ಥರ ಪ್ರತಿಕ್ರಿಯೆ ಕೇಳಿದೆ.
ಜಾತಿ ಆಧಾರದ ಮೇಲೆ ರಾಷ್ಟ್ರಪತಿಗಳ ಅಂಗರಕ್ಷಕರ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಮುರಳಿಧರ್ ಮತ್ತು ಸಂಜೀವ್ ನರುಲ ಅವರು, ರಕ್ಷಣಾ ಸಚಿವಾಲಯಕ್ಕೆ, ಸೇನಾ ಮುಖ್ಯಸ್ಥರಿಗೆ, ರಾಷ್ಟ್ರಪತಿಗಳ ಅಂಗರಕ್ಷಕರ ಕಮಾಂಡರ್ ಗೆ ಹಾಗೂ ಸೇನಾ ನೇಮಕಾತಿ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ. ಅಲ್ಲದೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಕಳೆದ 2017ರ ಸೆಪ್ಟೆಂಬರ್ 4 ರಂದು ನಡೆದ ರಾಷ್ಟ್ರಪತಿಗಳ ಅಂಗರಕ್ಷಕರ ನೇಮಕಾತಿ ವೇಳೆ ಕೇವಲ ಜಾಟ್, ರಜಪೂತ್ ಮತ್ತು ಜಾಟ್ ಸಿಖ್ ರನ್ನು ಮಾತ್ರ ಪರಿಗಣಿಸಲಾಗಿದೆ. ತಾನು ಅಹಿರ್/ಯಾದವ್ ಜಾತಿಗೆ ಸೇರಿರುವುದರಿಂದ ಹುದ್ದೆಗೆ ಆಯ್ಕೆಯಾಗಲು ಬೇಕಾದ ಎಲ್ಲಾ ಅರ್ಹತೆಗಳಿದ್ದರೂ ತನ್ನನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ ಹರಿಯಾಣ ಮೂಲದ ಗೌರವ್ ಯಾದವ್ ಅವರು ಪಿಐಎಲ್ ಸಲ್ಲಿಸಿದ್ದರು.
ರಾಷ್ಟ್ರಪತಿಗಳ ಅಂಗರಕ್ಷಕರ ನೇಮಕಾತಿಯಲ್ಲಿ ಕೇವಲ ಮೂರು ಜಾತಿಯನ್ನು ಪರಿಗಣಿಸಿರುವುದರಿಂದ ಅರ್ಹತೆ ಇದ್ದರೂ ಇತರೆ ನಾಗರಿಕರು ಅವಕಾಶ ವಂಚಿತರಾಗಿದ್ದಾರೆ ಎಂದು ಗೌರವ್ ಯಾದವ್ ಪರ ವಕೀಲ ರಾಮ್ ನರೇಶ್ ಯಾದವ್ ಅವರು ಆರೋಪಿಸಿದ್ದಾರೆ.


