ಮಾಧ್ಯಮ ಪಾಠಕ್ಕೆ ಮಕ್ಕಳ ತಯಾರಿ -ಪುಟಾಣಿ ವರದಿಗಾರ ಸಿದ್ಧತೆಗೆ ತರಬೇತಿ ಆರಂಭ
0
ಡಿಸೆಂಬರ್ 26, 2018
ಕಾಸರಗೋಡು: ಪಠ್ಯ ಚಟುವಟಿಕೆಗಾಗಿ ಡಿಜಿಟಲ್ ತಂತ್ರಜ್ಞಾನ ಬಳಕೆ ನಡೆಸುವುದರೊಂದಿಗೆ, ವಿದ್ಯಾಲಯಗಳ ಚಟುವಟಿಕೆಗಳು ಇತ್ಯಾದಿಗಳನ್ನು ಸುದ್ದಿಯಾಗಿಸುವ ತರಬೇತಿ ಶಿಬಿರಕ್ಕೆ ಚಾಲನೆ ಲಭಿಸಿದೆ.
ಜಿಲ್ಲೆಯ 3246 ಲಿಟಲ್ ಕೈಟ್ ಸದಸ್ಯರನ್ನು ಪುಟಾಣಿ ವರದಿಗಾರರನ್ನಾಗಿಸುವ ಉದ್ದೇಶದಿಂದ ಕೇರಳ ಇನ್ಫ್ರಾಸ್ಟ್ರಕ್ಚರ್ ಆಂಡ್ ಟೆಕ್ನಾಲಜಿ ಫಾರ್ ಎಜುಕೇಶನ್(ಕೈಟ್) ಆಶ್ರಯದಲ್ಲಿ ತರಬೇತಿ ಶಿಬಿರ ಆರಂಭಗೊಂಡಿದೆ.
ಮೊದಲ ಹಂತದಲ್ಲಿ ಶಿಬಿರವು ಬುಧವಾರ ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭವಾಗಿದೆ. ಜಿಲ್ಲೆಯ ಒಟ್ಟು 112 ಕೈಟ್ ಘಟಕಗಳಿಂದ ಆಯ್ದ 332 ಸದಸ್ಯರಿಗೆ 15 ಕೇಂದ್ರಗಳಲ್ಲಿ ಎರಡು ದಿನಗಳ ಈ ಶಿಬಿರ ನಡೆಸಲಾಗುತ್ತಿದೆ.
ಡಿಜಿಲ್ ಕೆಮರಾ ಬಳಸಿ ಪಠ್ಯೋಪಕರಣಗಳನ್ನು ಸಿದ್ಧಪಡಿಸುವುದು, ಕೈಟ್ಸ್ ವಿಕ್ಟರ್ಸ್ ಶೈಕ್ಷಣಿಕ ಚಾನೆಲ್ ಮೂಲಕ ವಾರ್ತೆ, ತತ್ಸಂಬಧಿ ಚಟುವಟಿಕೆಗಳನ್ನು ಸಿದ್ಧಪಡಿಸುವುದು ಇತ್ಯಾದಿ ಚಟುವಟಿಕೆಗಳು ಶಿಬಿರದಲ್ಲಿ ನಡೆಯುತ್ತಿವೆ.
ಕೈಟ್ ಹೈಟೆಕ್ ಶಾಲಾ ಯೋಜನೆ ಅಂಗವಾಗಿ ಸುದ್ದಿ ಪತ್ತೆ ಮತ್ತು ವರದಿಗಾರಿಕೆ, ಸ್ಕ್ರಿಪ್ಟ್ ಸಿದ್ಧಪಡಿಸುವಿಕೆ, ಕೆಮರಾ ಬಳಸುವಿಕೆ, ವೀಡಿಯೋ ಬಳಕೆ, ರೆಕಾಡಿರ್ಂಗ್, ಆಡಿಯೋ ಮಿಕ್ಸಿಂಗ್, ವೀಡಿಯೋ ಎಡಿಟಿಂಗ್, ಟೈಟಲಿಂಗ್, ಆಂಕರಿಂಗ್ ಇತ್ಯಾದಿ ಚಟುವಟಿಕೆಗಳು ಶಿಬಿರದಲ್ಲಿ ನಡೆದುವು. ಮಕ್ಕಳು ಸಿದ್ಧಪಡಿಸುವ ವೀಡಿಯೋಗಳು ಹೈಟೆಕ್ ಶಾಲೆಗಳ ಡಿಜಿಟಲ್ ಸರಣಿ ಮೂಲಕ ಕೇಂದ್ರ ಸರ್ವರ್ ನಿಂದ ಶಾಲೆಗಳಿಗೆ ಅಪ್ ಲೋಡ್ ನಡೆಸಲೂ ಸೌಲಭ್ಯ ಏರ್ಪಡಿಸಲಾಗಿದೆ.
ಹೈಟೆಕ್ ಶಾಲೆ ಯೋಜನೆ ಅಂಗವಾಗಿ ಜಿಲ್ಲೆಯ ಪ್ರೌಢಶಾಲೆ-ಹೈಯರ್ ಸೆಕಂಡರಿ ವಿಭಾಗಗಳ 244 ಶಾಲೆಗಳಿಗೆ ಡಿ.ಎಸ್.ಎಲ್.ಆರ್. ಕೆಮರಾ ವಿತರಿಸಲಾಗಿದೆ. ಇವುಗಳ ಬಳಸುವಿಕೆ, ತರಬೇತಿ ಇತ್ಯಾದಿಗಳನ್ನು ಹೊಣೆ ಹೊತ್ತ ಸಂಬಂಧಪಟ್ಟವರಿಗೆ ನೀಡಲಾಗಿದೆ.
"ಸಮಗ್ರ" ಎಂಬ ಹೆಸರಿನ ಪೋರ್ಟಲ್‍ಗೆ ಅಕಾಡೆಮಿಕ್ ಆಗಿರುವ ಡಿಜಿಟಲ್ ವಿಷಯಗಳನ್ನು ಸಿದ್ಧಪಡಿಸಲು ಈಗಾಗಲೇ ತರಬೇತಿ ನೀಡಲಾಗುತ್ತಿದೆ. ಇದಲ್ಲದೆ ಕೈಟ್ ವಿಕ್ಟರ್ಸ್ ಚಾನೆಲ್ ವರದಿಗಾರಿಕೆ ಇನ್ನಿತರ ವಿಚಾರಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಶಿಬಿರ ನಡೆಸಲಾಗುತ್ತಿದೆ.
ಏನ್ ಗೊತ್ತಾ ವಿಶೇಷ:
ದೇಶದಲ್ಲೇ ಪ್ರಥಮ ಬಾರಿ
ಪೂರ್ಣ ರೂಪದಲ್ಲಿ ಸ್ವತಂತ್ರ ಸಾಫ್ಟ್‍ವೇರ್ ಕೇಂದ್ರಿತ ಮಲ್ಟಿಮೀಡಿಯಾ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಅತ್ಯಧಿಕ ಮಂದಿ ವರದಿಗಾರಿಕೆ, ಎಡಿಟಿಂಗ್ ಇತ್ಯಾದಿ ನಡೆಸಲು ವ್ಯವಸ್ಥೆ ಏರ್ಪಡಿಸಿರುವ ಈ ಕ್ರಮ ದೇಶದಲ್ಲೇ ಪ್ರಥಮ ಎಂದು ಕೈಟ್ ಉಪಾಧ್ಯಕ್ಷ ಕೆ.ಅನ್ವರ್ ಸಾದತ್ ಅಭಿಪ್ರಾಯಪಟ್ಟಿದ್ದಾರೆ.

