HEALTH TIPS

ಧಾರ್ಮಿಕ, ವೈದಿಕ ಚಟುವಟಿಕೆಗಳಿಂದ ಧನಾತ್ಮಕ ಶಕ್ತಿ ವೃದ್ದಿ-ಮಾಣಿಲ ಶ್ರೀ ಇಡಿಯಡ್ಕ ಕ್ಷೇತ್ರ ಧಾರ್ಮಿಕ ಸಭೆಯಲ್ಲಿ ಅಭಿಮತ


          ಪೆರ್ಲ: ರಾಷ್ಟ್ರದ ಮೂಲ ಪರಂಪರೆಯು ಸರ್ವರ ಒಳಿತನ್ನೂ ಬಯಸುವ ಉದಾತ್ತ ತ್ವದಡಿಯಲ್ಲಿ ನೆಲೆಗೊಂಡಿದೆ. ಭಾರತದ ಆಧ್ಯಾತ್ಮ ಪರಂಪರೆಯ ಪೂರ್ಣತೆ ಹಾಗೂ ಪಾವಿತ್ರ್ಯತೆಯು ಚಾರಿತ್ರ್ಯವನ್ನೂ ಕಾಯ್ದು ನಾನಾ ರೀತಿಯ ವಿಪತ್ತುಗಳಿಂದ ನಲುಗುವ ಪ್ರಪಂಚಕ್ಕೆ ಸಮಷ್ಟಿ ಜೀವನವನ್ನು ಪ್ರದಾನ ಮಾಡುವ ಮೂಲ ಸೆಲೆಯಾಗಿದೆ ಎಂದು ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
        ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
        ಜೀವನ ಶೈಲಿ, ಬದ್ಧತೆ ಕಳೆದುಕೊಂಡಾಗ ಆಚಾರ, ಆಚರಣೆಗಳು, ಸಂಸ್ಕಾರ ನಶಿಸುವುದು.ಮಂಗಳ ಕಾರ್ಯಗಳು ಅಮಂಗಳವಾದರೆ ಅತೃಪ್ತಿ, ಅಶಾಂತಿ, ಪ್ರಕೃತಿ ವಿಕೋಪಗಳು, ಅಧರ್ಮ ತಾಂಡವವಾಡುವುದು. ಪ್ರತಿ ಮನೆಯಲ್ಲೂ ಮಕ್ಕಳ ಮನಸ್ಸಲ್ಲಿ ಸಂಸ್ಕಾರ ಮೂಡಿಸುವ ಪ್ರಯತ್ನ ನಡೆಯಬೇಕು.ಮಠ ಮಂದಿರಗಳಲ್ಲಿ ನಡೆಯುವ ಧಾರ್ಮಿಕ, ದೈವಿಕ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾದರೆ ಧನಾತ್ಮಕತೆ ರೂಪುಗೊಂಡು ಪ್ರಕೃತಿ ಶಾಂತವಾಗುವುದು.
       ಕೆಲವೊಂದು ಕಾರಣಗಳಿಗೆ ದೇಶದ ಅಖಂಡತೆಯನ್ನು ಒಡೆಯುವ ಪ್ರಯತ್ನ ನಡೆಸಲಾಗುತ್ತಿದೆ.ಜಾತಿ, ಧರ್ಮವೆನ್ನದೆ ಯುವ ಜನಾಂಗ ಸಾಧು ಸಂತರು, ಸಂಘಟನೆಗಳ ನಡುವಿನ ಸಂಘರ್ಷಗಳನ್ನು ತಡೆದು ನೀತಿಯಡಿಯಲ್ಲಿ ದೇಶ ಕಟ್ಟಲು ಮುಂದೆ ಬಂದಲ್ಲಿ ಭಾರತವು ವಿಶ್ವ ಗುರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
       ಧಾರ್ಮಿಕ ಮುಂದಾಳು ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರು ಧಾರ್ಮಿಕ ಉಪನ್ಯಾಸಗೈದು,  ಭಾರತವು ಗುರು ಪರಂಪರೆಯನ್ನು ನಂಬಿಕೊಂಡು ಬಂದ ದೇಶ. ಪ್ರಕೃತಿಯ ಆರಾಧನೆ ಹಿಂದೂ ಸಂಸ್ಕೃತಿಯ ಮೂಲಭೂತ ಅಡಿಪಾಯ. ಪಂಚಭೂತಗಳಿಂದ ಕೂಡಿದ ಪ್ರಕೃತಿಯ ಸೃಷ್ಠಿಯ ಹಿಂದಿನ ಚೈತನ್ಯದ ಪರಿಕಲ್ಪನೆ ಅಥವಾ ಸಂಕಲ್ಪ ಬೇಕೇ ಹೊರತು ಹೆಸರು ಅಥವಾ ರೂಪ ಮುಖ್ಯವಲ್ಲ. ಸೃಷ್ಠಿಕರ್ತನ ಅನುಗ್ರಹದಿಂದ ಜಗತ್ತು ರಕ್ಷಿಸಲ್ಪಟ್ಟಿದೆ ಎಂದು ಮಾನವ ಧರ್ಮದ ಮೂಲಾಧಾರಗಳಾದ ವೇದ, ಉಪನಿಷತ್ತುಗಳು ಸಾರುತ್ತಿವೆ. ದೇವರು ಸರ್ವವ್ಯಾಪಿ ಯಾಗಿದ್ದರೂ  ಕೇಂದ್ರೀಕೃತ­ವಾಗಲು ಕ್ಷೇತ್ರದ ಗರ್ಭಗುಡಿಯಲ್ಲಿ ನೆಲೆ ನಿಲ್ಲಿಸಲಾಗುತ್ತದೆ. ಬ್ರಹ್ಮಕಲಶದ ಬಳಿಕವೂ ಪೂಜೆ ಪುರಸ್ಕಾರಗಳು, ಅಭಿಷೇಕ, ಭಕ್ತರ ಪ್ರಾರ್ಥನೆ, ಅನ್ನದಾನ ಮೊದಲಾದ ವ್ಯವಸ್ಥಿತ ಕ್ರಿಯಾ ಚಟುವಟಿಕೆಗಳು ನಿರಂತರವಾಗಿ ನಡೆದಾಗ ಮಾತ್ರ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗುವುದು. ಮಾನವ ಸಂಪನ್ಮೂಲದ ಸದುಪಯೋಗದ ಅರಿವು ನಮ್ಮಲ್ಲಿ ಮೂಡಬೇಕಾಗಿದೆ. ವಿದ್ಯೆ ವಿನಯದೊಂದಿಗೆ ಸಮಾಜದ ಒಳಿತನ್ನು ಗುರುತಿಸಿ, ತಾಳ್ಮೆ ಸಂಸ್ಕಾರಗಳನ್ನು ಮೈಗೂಡಿಸಿ ನಮ್ಮ ಅನುಷ್ಟಾನಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯ ನಡೆಯ ಬೇಕಿದೆ ಎಂದರು.
    ಸಿ.ಸಂಜೀವ ರೈ ಕೆಂಗಣಾಜೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಭಾಗವಹಿಸಿದ ಪಡ್ರೆ  ಪಾಲೆಪ್ಪಾಡಿ ವನಶಾಸ್ತಾರ ದೇವಳದ ಸುಬ್ರಾಯ ಕಡಂಬಳಿತ್ತಾಯ ಪಂಬೆತ್ತಡ್ಕ ಮಾತನಾಡಿ ಮನಸ್ಸನ್ನು ನಿಯಂತ್ರಿಸಿದಲ್ಲಿ ಉಳಿದೆಲ್ಲವೂ ನಮ್ಮ ನಿಯಂತ್ರಣದಲ್ಲಿರುವುದು. ಸಮಾಜವನ್ನು ಪ್ರಶ್ನಿಸುವ ಮೊದಲು ಸ್ವಯಂ ವಿಮರ್ಶಿಸಿ ತಮ್ಮ ತಪ್ಪುಗಳನ್ನು ತಿದ್ದಿ ಪರಿಹಾರ ಮಾರ್ಗ ಕಂಡು ಕೊಳ್ಳಬೇಕು ಎಂದರು.
   ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯ ಶಾಲೆಯ ಡಾ.ಜಯಗೋವಿಂದ ಮಾತನಾಡಿ, ಶೋಷಣೆ ಇರುವಷ್ಟು ಕಾಲ ಸಮಾಜದ ಉನ್ನತಿ ಅಸಾಧ್ಯವಾಗಿದ್ದು ಸಂಘಟಿತ ಹೋರಾಟ ಅನಿವಾರ್ಯ ಎಂದರು.
   ಮೊಗೇರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಾಮಚಂದ್ರ ನಾಯಕ್ ಅಲ್ಚಾರು ಮಾತನಾಡಿದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪತ್ತಡ್ಕ ಗಣಪತಿ ಭಟ್ ಉಪಸ್ಥಿತರಿದ್ದರು.
    ಕಳೆದ ಹತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲೊಸುತ್ತಿರುವ ಯಕ್ಷಗಾನ ಕಲಾವಿದ ಶಿವಾನಂದ ಬಜಕೂಡ್ಲು ಅವರನ್ನು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಗೌರವಿಸಿ ಆಶೀರ್ವದಿಸಿದರು.
  ಸ್ನೇಹ ಬಾಳಿಕೆ ಸ್ವಾಗತಿಸಿ, ರವೀಂದ್ರ ಶೆಟ್ಟಿ ಪೆರ್ಲ ಬೀಡು ವಂದಿಸಿದರು.ಪೆರ್ಲ ಶಾಲಾ ಶಿಕ್ಷಕ ಉಮೇಶ್ ಕೆ. ನಿರೂಪಿಸಿದರು.
     ಇಂದಿನ ಕಾರ್ಯಕ್ರಮಗಳು:
   ವೈದಿಕ ಕಾರ್ಯಕ್ರಮ
    ಬೆಳಗ್ಗೆ 6ರಿಂದ ಗಣಪತಿ ಹವನ, ತ್ರಿಕಾಲ ಪೂಜೆ, ಸಂಹಾರ ತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಶರ್ಕರಿ ಪೂಜೆ, ಅಧಿವಾಸ ಹೋಮದ ಅಗ್ನಿಜನನ, ತತ್ವ ಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವ ಕಲಶ, ಶಯ್ಯೋನ್ನಯನ, 8ರಿಂದ ಸಂಗ್ರಹಮಖ ಮಹಾ ಮೃತ್ಯುಂಜಯ ಯಾಗ, ಮಧ್ಯಾಹ್ನ 12.30ರಿಂದ ಅಂಕುರ ಪೂಜೆ, ಮಹಾಪೂಜೆ, ಸಂಜೆ 6ರಿಂದ ಧ್ಯಾನಾಧಿವಾಸ, ಅಧಿವಾಸ ಹೋಮ, ಶಿರಸ್ತತ್ವ ಹೋಮ, ಪ್ರತಿಷ್ಠಾ ಹೋಮ, ಪುಣ್ಯಾಹವಾಚನ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಬ್ರಹ್ಮಕಲಶ ಪೂಜೆ
    ಧಾರ್ಮಿಕ ಕಾರ್ಯಕ್ರಮ
   ಸಂಜೆ 5.30ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಆಶೀರ್ವಚನ ನೀಡಲಿದ್ದು ಉದ್ಯಮಿ ಕೃಷ್ಣಪ್ರಸಾದ ಅಡ್ಯಂತಾಯ ಕುಂದಾಪುರ ಅಧ್ಯಕ್ಷತೆಯಲ್ಲಿ ಯುವ ವಾಗ್ಮಿ ಚೈತ್ರಾ ಕುಂದಾಪುರ ಧಾರ್ಮಿಕ ಭಾಷಣ ಮಾಡುವರು.ಸತ್ಯ ನಾರಾಯಣ ವಿದ್ಯಾ ಸಂಸ್ಥೆ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ, ಕಾಸರಗೋಡು ವಿದ್ಯಾಭ್ಯಾಸ ಇಲಾಖೆಯ ನಿವೃತ್ತ ಎ.ಪಿ.ಎಫ್. ಅರವಿಂದ ಕುಮಾರ್ ನೇರಪ್ಪಾಡಿ ಉಪಸ್ಥಿತರಿರುವರು.ಭಾರತೀಯ ಭೂಸೇನಾ ಸೈನಿಕ ಬಾಲಕೃಷ್ಣ ಬದಿಯಾರು, ಧ್ವಜಸ್ಥಂಭದ ಮರ ನೀಡಿದ ಸುಬ್ರಹ್ಮಣ್ಯ ಬಳ್ಳಕ್ಕ ಅವರಿಗೆ ಗೌರವಾರ್ಪಣೆ ನಡೆಯಲಿದೆ.
    ಸಾಂಸ್ಕೃತಿಕ ಕಾರ್ಯಕ್ರಮಗಳು:
  ಬೆಳಿಗ್ಗೆ 10ರಿಂದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದಿಂದ ಭಜನೆ, ಮಧ್ಯಾಹ್ನ 1ರಿಂದ ಮಣಿಯಂಪಾರೆ ದುರ್ಗಾಪರಮೇಶ್ವರಿ ಭಜನಾ ಸಂಘದಿಂದ ಕುಣಿತ ಭಜನೆ, 3ರಿಂದ ಪೆರ್ಲ ಸಿಂಚನಾ ಮ್ಯೂಸಿಕಲ್ಸ್  ಇವರ ಭಕ್ತಿಗಾನ ಸುಧಾ, ರಾತ್ರಿ 8ರಿಂದ ಅಂಜಲಿ ಪೆರ್ಲ ಬಳಗದ ಗಾನಾಂಜಲಿ ಕಾರ್ಯಕ್ರಮ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries