ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿದ 16 ವರ್ಷದ ಸೌರಬ್
0
ಫೆಬ್ರವರಿ 24, 2019
ನವದೆಹಲಿ: ಐಎಸ್ ಎಸ್ ಎಫ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ ಸೌರಬ್ ಚೌದರಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
16 ವರ್ಷದ ಸೌರಬ್ ಚೌದರಿ, 10 ಮೀಟರ್ ಏರ್ ಪಿಸ್ತೂಲ್ ಪುರುಷರ ವಿಭಾಗದಲ್ಲಿ ಒಟ್ಟಾರೇ 245 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಸೆರ್ಬಿಯಾದ ಡಾಮಿ ಮೈಕೆಕ್ 239. 3 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದರೆ, ಚೀನಾದ ವೈ ಪಾಂಗ್ 215.2 ಅಂಕಗಳೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಬೆಳ್ಳಿ ಪದಕ ವಿಜೇತ ಡಾಮಿ ಮೈಕೆಕ್ ಅವರ ವಿರುದ್ಧ ಪ್ರಾಬಲ್ಯ ಸಾಧಿಸಿದ ಸೌರಬ್ 5.7 ಅಂಕಗಳೊಂದಿಗೆ ಪಂದ್ಯ ಮುಕ್ತಾಯಗೊಳಿಸಿದರು.
ಮೊದಲ ಸರಣಿಯಲ್ಲಿ ಮೈಕೆಕ್ ಅವರೊಂದಿಗೆ ಟೈ ಮಾಡಿಕೊಂಡಿದ್ದ ಸೌರಬ್ ಎರಡನೇ ಸರಣಿಯಲ್ಲಿ ಉತ್ತಮ ಆಟ ಪ್ರದರ್ಶಿಸುವ ಮೂಲಕ ಮೊದಲ ಸ್ಥಾನ ಪಡೆದು ಚಿನ್ನ ಬಾಚಿಕೊಂಡರು.
ಮತ್ತೊಂದೆಡೆ ಅಭಿಷೇಕ್ ವರ್ಮಾ ಹಾಗೂ ರವೀಂದರ್ ಸಿಂಗ್ ಫೈನಲ್ ಪ್ರವೇಶಿಸುವ ಅರ್ಹತೆ ಕಳೆದುಕೊಂಡರು. ಅರ್ಹತಾ ಸುತ್ತಿನಲ್ಲಿ ಇಬ್ಬರು 576 ಅಂಕಗಳನ್ನು ಪಡೆಯುವ ಮೂಲಕ ಪಂದ್ಯವನ್ನು ಪೂರ್ಣಗೊಳಿಸಿದರು.

