ಮನೆ ಖರೀದಿಸುವವರಿಗೆ ಸಿಹಿ ಸುದ್ದಿ: ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಜಿಎಸ್ ಟಿ ಶೇ.5 ಕ್ಕೆ ಇಳಿಕೆ!
0
ಫೆಬ್ರವರಿ 24, 2019
ನವದೆಹಲಿ: ಗೃಹ ಖರೀದಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲಿನ ಜಿಎಸ್ ಟಿಯನ್ನು ಶೇ.5 ಕ್ಕೆ ಇಳಿಕೆ ಮಾಡಲಾಗಿದೆ.
ಈಗಿರುವ ಶೇ.12 ರಷ್ಟು ಜಿಎಸ್ ಟಿಯನ್ನು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆಯೇ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.
ಫೆ.24 ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೈಗೆಟುಕುವ ಮನೆ (ಅಫರ್ಡಬಲ್ ಹೌಸಿಂಗ್) ಗಳ ಮೇಲಿನ ಜಿಎಸ್ ಟಿಯನ್ನು ಶೇ.8 ರಿಂದ ಶೇ.1ಕ್ಕೆ ಇಳಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮೆಟ್ರೋ ನಗರಗಳಲ್ಲಿ ಕೈಗೆಟುಕುವ ಮನೆಗಳ ವ್ಯಾಪ್ತಿಯನ್ನು 45 ಲಕ್ಷ ರೂಪಾಯಿ ಬೆಲೆ ಹೊಂದಿರುವ 60 ಚದರ ಮೀಟರ್ ಗಳಿಗೆ ಹಾಗೂ ಇತರ ಪ್ರದೇಶಗಳಲ್ಲಿ 90 ಚದರ ಮೀಟರ್ ಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಪರಿಷ್ಕೃತ ತೆರಿಗೆ ದರಗಳು 2019 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈಗಿನ ತೆರಿಗೆ ದರದ ಪ್ರಕಾರ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಖರೀದಿಗೆ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈಗ ಜಿಎಸ್ ಟಿ ಕಡಿಮೆ ಮಾಡಿರುವುದರಿಂದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

