HEALTH TIPS

ಪ್ರಾಮಾಣಿಕತೆ, ವೃತ್ತಿ ನಿಷ್ಠೆ, ತಂದೆ ತಾಯಂದಿರಲ್ಲಿ ಗೌರವಕ್ಕಿಂತ ಮಿಗಿಲಾದ ಭಕ್ತಿ ಬೇರೆ ಇಲ್ಲ ಬೆದ್ರಂಪಳ್ಳ ಗಣೇಶ ಭಜನ ಮಂದಿರದ ಧಾರ್ಮಿಕ ಸಭೆಯಲ್ಲಿ ಅನುಗ್ರಹ ನೀಡಿ ಶ್ರೀ ಮುಕ್ತಾನಂದ ಸ್ವಾಮೀಜಿ

ಪೆರ್ಲ:ಗೋಕುಲದಲ್ಲಿ ಹುಟ್ಟಿ ಬೆಳೆದ ಭಗವಾನ್ ಶ್ರೀಕೃಷ್ಣ ಪರಮಾತ್ಮನೆಂಬ ಅಹಂಭಾವ ತೋರದೆ ಗೋಪಾಲಕನಾಗಿ, ಸಾರಥಿಯಾಗಿ, ಅಶ್ವಗಳ ಪರಿಪಾಲನೆ ನಡೆಸಿ ತನ್ನ ಕರ್ತವ್ಯ ನಿರ್ವಹಿಸಿದ್ದಾನೆ.ದಿನ ಪೂರ್ತಿ ಉರಿ ಬಿಸಿಲಿನಲ್ಲಿ ದುಡಿಯುವ ರೈತ ನೆಮ್ಮದಿಯ ಬದುಕು ಸಾಗಿಸುವುದಲ್ಲದೆ ಇತರರಿಗೂ ಉಣ ಬಡಿಸುತ್ತಾನೆ. ಪ್ರಾಮಾಣಿಕತೆ, ವೃತ್ತಿ ನಿಷ್ಟೆಗಳಿಗಿಂತ ಮಿಗಿಲಾದ ಭಕ್ತಿ ಇನ್ನೊಂದಿಲ್ಲ ಎಂದು ಮೂಡುಬಿದ್ರೆ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು. ಬೆದ್ರಂಪಳ್ಳ ಗಣೇಶ್ ನಗರದಲ್ಲಿ ಗುರುವಾರ ನಡೆದ ನೂತನ ಶ್ರೀ ಗಣೇಶ ಭಜನ ಮಂದಿರ ಲೋಕಾರ್ಪಣೆ, ಶ್ರೀ ದೇವರ ಛಾಯಾಚಿತ್ರ ಪುನರ್ ಪ್ರತಿಷ್ಠೆ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಅನುಗ್ರಹ ನೀಡಿ ಅವರು ಮಾತನಾಡಿದರು. ಶಿವನ ಆಣತಿಯಂತೆ ಷಣ್ಮುಖ ಪ್ರಪಂಚವನ್ನು ಸುತ್ತಿಬಂದಾಗ ವಿವೇಕ, ಬುದ್ಧಿಯ ಅಧಿಪತಿ ಗಣಪ ತಂದೆ ತಾಯಂದಿರಿಗೆ ಮೂರು ಸುತ್ತು ಬಂದು ನಮಿಸಿ ತಂದೆ ತಾಯಿಗಿಂತ ಮಿಗಿಲಾಗಿ ಪ್ರಪಂಚದಲ್ಲಿ ಬೇರೇನೂ ಇಲ್ಲ ಎಂದು ಸಾರಿದ.ನಾನು ಎಂಬುದು ಶೂನ್ಯ.ಶೂನ್ಯದಿಂದ ಸೃಷ್ಟಿ ಅಸಾಧ್ಯ.ಸರ್ವವೂ ಭಗವಂತನ ಸೃಷ್ಟಿಯೇ ಹೊರತು ನಾವು ಮಾಡಿದ್ದಾಗಿ ಏನೂ ಇಲ್ಲ.ತಾಂತ್ರಿಕ ಯುಗದಲ್ಲಿ ಆಧ್ಯಾತ್ಮಿಕತೆಯಿಂದ ವಿಮುಖರಾಗುತ್ತಾ ವಿಭಜಿತರಾಗುತ್ತಿದ್ದೇವೆ.ರಾಜಕೀಯ ದ್ವೇಷ, ವಿದ್ವೇಷಗಳಿಗೆ ಕಾರಣವಾಗುತ್ತಾ ಜನರನ್ನು ವಿಭಜಿಸುತ್ತದೆ.ಧರ್ಮ, ಧಾರ್ಮಿಕತೆ, ಧಾರ್ಮಿಕ ಕ್ಷೇತ್ರಗಳು, ಭಜನೆ, ಭಜನ ಮಂದಿರಗಳು ಜನರನ್ನು ಒಂದು ಗೂಡಿಸುತ್ತದೆ.ದೇವತೆಗಳ ಅವತಾರ ಹಾಗೂ ಪವಿತ್ರ ಪಾವನ ಭೂಮಿ ಭಾರತ ಬಲಿಷ್ಟ ರಾಷ್ತ್ರವಾದರೂ ತಾನಾಗಿ ಇನ್ನೊಂದು ರಾಷ್ಟ್ರದ ವಿರುದ್ಧ ಸಮರ ಸಾರಿಲ್ಲ.ದೇಶ, ಧರ್ಮ, ಹಾಗೂ ದೇವರ ಸ್ಮರಣೆಯೊಂದಿಗೆ ದೀನ ದಲಿತರ ಸೇವೆ ಮಾಡುತ್ತಾ, ಸಮಾಜ ಮುಖಿ ವಿಶಾಲ ಮನೋಭಾವ ನಮ್ಮಲ್ಲಿರಬೇಕು.ಬದಲಾವಣೆಯ ಗಾಳಿಯೊಂದಿಗೆ ಜೀವನ ಅಭಿವೃದ್ಧಿ ಪಥದತ್ತ ಸಾಗುವಲ್ಲಿ ಅವಿರತ ಪ್ರಯತ್ನ ಹಾಗೂ ದೈವಾನುಗ್ರಹ ಮುಖ್ಯ ಎಂದರು. ಮಂಗಳೂರು ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆ ಪ್ರಾಚಾರ್ಯ ಡಾ.ಕಿಶೋರ್ ಕುಮಾರ್ ರೈ ಶೇಣಿ ಧಾರ್ಮಿಕ ಭಾಷಣದಲ್ಲಿ ಮಾತನಾಡಿ, ಆಧುನಿಕತೆಗೆ ಮಿತಿ ಇರಬೇಕು.ಕೃಷಿ ಬದುಕಿನಿಂದ ವಿಮುಖರಾಗುತ್ತಿರುವ ನಾವು ಕೃಷಿ ಅನುಭವಕ್ಕೆ ವಿಕಿಪೀಡಿಯ ಹುಡುಕಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ.ಮಕ್ಕಳ ಗುಣ ನಡತೆ, ಸಂಸ್ಕಾರ ಮೈಗೂಡಿಸುವಲ್ಲಿ ತಾಯಂದಿರ ಪಾತ್ರ ನಿರ್ಣಾಯಕ.ಹೆತ್ತವರ ಅನುಕರಣೆಯೊಂದಿಗೆ ಬೆಳೆಯುವ ಮಕ್ಕಳು ಅವರ ಸಂಸ್ಕಾರವನ್ನೇ ರೂಢಿಸುತ್ತಾರೆ.ಮಕ್ಕಳನ್ನು ತಿದ್ದಿ ತೀಡಿ ಉತ್ತಮ ಪ್ರಜೆಯಾಗಿ ಮುನ್ನಡೆಸುವಲ್ಲಿ ಪೋಷಕರು ಜವಾಬ್ದಾರಿ ವಹಿಸಬೇಕು. ಭಾರತದಲ್ಲಿ ಮಾನಸಿಕ ಬಡತನವಿದೆಯೇ ಹೊರತು ಆರ್ಥಿಕ ಬಡತನವಿಲ್ಲ. ಮಾನವನ ಬಯಕೆ, ಆಸೆ ಆಕಾಂಕ್ಷೆಗಳಿಗೆ ಮಿತಿ ಎಂಬುದಿಲ್ಲ.ಅಹಂಭಾವ ತೊರೆದು ತಲೆ ಬಾಗಿ ನಡೆದಲ್ಲಿ ಜೀವನ ಸಾರ್ಥಕ್ಯ ಪಡೆಯ ಬಹುದು ಎಂದರು. ಮಂದಿರದ ಪುನರ್ ಪ್ರತಿಷ್ಠಾ ಸಮಿತಿ ಅಧ್ಯಕ್ಷ ಸೋಮಶೇಖರ್ ಜೆ. ಯಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮರಸ್ಯ ಕಾಪಾಡುವುದರೊಂದಿಗೆ ನಾಡಿನ ಅಭಿವೃದ್ಧಿಗೆ ನೂತನ ಭಜನ ಮಂದಿರ ವೇದಿಕೆಯಾಗಲಿ ಎಂದು ಹಾರೈಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ., ಪಂಚಾಯಿತಿ ಸದಸ್ಯೆ ಪ್ರೇಮಾ ಎಂ., ಮುಗು ಶ್ರೀ ಸುಬ್ರಾಯ ಕ್ಷೇತ್ರದ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ, ಇಡಿಯಡ್ಕ ಕ್ಷೇತ್ರದ ಸದಾನಂದ ಶೆಟ್ಟಿ ಕುದ್ವ, ಭಜನ ಮಂದಿರ ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ, ಇಂಜಿನಿಯರ್ ಪ್ರಶಾಂತ್ ಬಜಕೂಡ್ಲು ಮಾತನಾಡಿದರು. ಧಾರ್ಮಿಕ ಮುಂದಾಳು ಮಾಧವ ಚೆಟ್ಟಿಯಾರ್, ಬಜಕೂಡ್ಲು ಮಹಾಲಿಂಗೇಶ್ವರ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೃಷ್ಣ ಶ್ಯಾನುಭೋಗ್, ಬೆದ್ರಂಪಳ್ಳ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಬೆದ್ರಂಪಳ್ಳ, ಭಜನ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಆಳ್ವ ವೈ. ಸ್ಥಾಪಕ ಸದಸ್ಯ ಸುಬ್ಬ ಪಾಟಾಳಿ, ಕುಶಲ ಕರ್ಮಿ ಎಂ.ಜಿ.ಕೆ.ಆಚಾರ್ಯ ಕುಂಬಳೆ, ದಾರು ಶಿಲ್ಪಿ ಕೃಷ್ಣ ಆಚಾರ್ಯ ಬೆದ್ರಂಪಳ್ಳ ಉಪಸ್ಥಿತರಿದ್ದರು. ಭಜನ ಮಂದಿರ ನಿರ್ಮಾಣ, ಕಾರ್ಯಕ್ರಮಗಳ ಯಶಸ್ವಿಗೆ ಅಹೋ ರಾತ್ರಿ ದುಡಿದವರನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯಕ್ ಕುಕ್ಕಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಮೋಹನ್ ಕುಮಾರ್ ಬೆದ್ರಂಪಳ್ಳ ವಂದಿಸಿದರು.ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳ 'ಸಾಂಸ್ಕೃತಿಕ ಸಂಜೆ', ವಿಟ್ಲ ವಿಠಲ್ ನಾಯಕ್ ಬಳಗದ 'ಗೀತ ಸಾಹಿತ್ಯ ಸಂಭ್ರಮ' ನಡೆಯಿತು. 'ಜಾತಿ ಸಂಕೋಲೆಯೊಳಗೆ ಜೀವಿಸುವ ಸಂಕುಚಿತ ಮನೋಭಾವ ಸಲ್ಲದು. ಕಾಯಕದಿಂದ ಗುರುತಿಸುವ ಸಲುವಾಗಿ ಜಾತಿ ಪದ್ಧತಿ ರೂಢಿಯಾಗಿದೆಯೇ ಹೊರತು ಸಮಾಜದಲ್ಲಿ ಮೇಲ್ಜಾತಿ, ಕೀಳು ಜಾತಿ ಎಂಬುದಿಲ್ಲ.ಇಂದಿಗೂ ಜಾತಿ ಪದ್ಧತಿ ಮುಂದುವರಿಕೆ ಸರಿಯಲ್ಲ.ಭಜನೆಗಳು ನಡೆಯ ಬೇಕೇ ಹೊರತು ವಿಭಜನೆಗಳಲ್ಲ.ಕಾಮ, ಕ್ರೋಧ, ಲೋಭ ಮೋಹ, ಮದ, ಮತ್ಸರಗಳನ್ನು ಜಯಿಸಿ ಸಂಸ್ಕೃತಿಯನ್ನು ಮುನ್ನಡೆಸುವ ಚಳವಳಿ ನಡೆಯಬೇಕು' ಡಾ.ಶ್ರೀಪತಿ ಕಜಂಪಾಡಿ ವೈದ್ಯರು, ಸಾಮಾಜಿಕ ಕಾರ್ಯಕರ್ತರು ಪೆರ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries