ರಂಗಚೇತನದಿಂದ ತ್ರಿದಿನ ಮಕ್ಕಳ ಶಿಬಿರ-ಸಮಾಲೋಚನೆ
0
ಮಾರ್ಚ್ 15, 2019
ಮಂಜೇಶ್ವರ: ರಂಗ ಚೇತನ ಕಾಸರಗೋಡು ಸಮಿತಿಯ ಸಭೆ ಹೊಸಂಗಡಿಯ ಕೆ.ಎಸ್.ಟಿ.ಎ.ಭವನದಲ್ಲಿ ಇತ್ತೀಚೆಗೆ ನಡೆಯಿತು.
ಚಲನಚಿತ್ರ ನಟ ಬಾಲಕೃಷ್ಣ ಅಡೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ರಂಗಭೂಮಿಯನ್ನು ಕ್ರಿಯಾತ್ಮಕಗೊಳಿಸುವ ನಿಟ್ಟಿನಲ್ಲಿ ರಂಗ ಚೇತನದ ನೇತೃತ್ವದಲ್ಲಿ ಪೆರ್ಮುದೆಯ ಅನುದಾನಿತ ಶಾಲೆಯ ಸಹಯೋಗದೊಂದಿಗೆ ರಂಗ-ರಂಗೋಲಿ ತ್ರಿದಿನ ಮಕ್ಕಳ ರಂಗ ಶಿಬಿರವನ್ನು ಪೆರ್ಮುದೆ ಶಾಲೆಯಲ್ಲಿ ಏ.9 ರಿಂದ 11ರ ವರೆಗೆ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಂಗ ಶಿಬಿರದ ಪೂರ್ವಭಾವಿಯಾಗಿ ಮಾ.23 ರಂದು ಪೆರ್ಮುದೆ ಅನುದಾನಿತ ಶಾಲೆಯಲ್ಲಿ ಅಪರಾಹ್ನ 2ಕ್ಕೆ ಸ್ವಾಗತ ಸಮಿತಿ ರೂಪೀಕರಿಸಲು ಸಭೆ ನಡೆಸಲು ತೀರ್ಮಾನಿಸಲಾಯಿತು. ಇತ್ತೀಚೆಗೆ ಪುಲ್ವಾಮಾ ಧಾಳಿಯಲ್ಲಿ ಉಗ್ರರಿಂದ ಹತರಾದ ವೀರಯೋಧರಿಗೆ ಹಾಗೂ ಇತ್ತೀಚೆಗೆ ನಿಧನರಾದ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕೇರಳ ರಾಜ್ಯ ಶಾಲಾ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಕನ್ನಡ ನಾಟಕ ಕೊಂಬು ಮೀಸೆಯ ನಿರ್ದೇಶಕ ಸದಾಶಿವ ಮಾಸ್ತರ್ ಪೊಯ್ಯೆ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಮಿತಿಯ ಉಪಾಧ್ಯಕ್ಷ ವಿಜಯಕುಮಾರ್ ಪಾವಳ, ರಂಗ ನಿರ್ದೇಶಕ ಉದಯ ಸಾರಂಗ್, ಜಯಪ್ರಕಾಶ್ ಶೆಟ್ಟಿ ಬೇಳ, ಮೆಲ್ವಿನ್ ಪೆರ್ಮುದೆ ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ರಂಗ ಚೇತನದ ಕಾರ್ಯದರ್ಶಿ ಅಶೋಕ ಮಾಸ್ತರ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸದಾಶಿವ ಪೊಯ್ಯೆ ವಂದಿಸಿದರು.

