ಇಂದು ವ್ಯಾಪಾರಿ ಸಹಾಯ ಧನ ವಿತರಣೆ
0
ಮಾರ್ಚ್ 08, 2019
ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಕಾಸರಗೋಡು ಜಿಲ್ಲಾ ಘಟಕವು ಜಾರಿಗೊಳಿಸಿದ ಟ್ರೇಡರ್ಸ್ ಫ್ಯಾಮಿಲಿ ವೆಲ್ಪೇರ್ ಬೆನಿಫಿಟ್ ಸ್ಕೀಮ್ ಪ್ರಕಾರವಿರುವ ಮರಣದ ನಂತರ ಆರ್ಥಿಕ ಸಹಾಯ ಧನ ವಿತರಣಾ ಕಾರ್ಯಕ್ರಮ ಇಂದು ಬೆಳಿಗ್ಗೆ 10 ರಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪವಿರುವ ಕೋಟೆಕಣಿ ರಸ್ತೆಯ ಜೀವಾಸ್ ಸಭಾಂಗಣದಲ್ಲಿ ಜರಗಲಿದೆ. ಏಕೋಪನಾ ಸಮಿತಿಯ ರಾಜ್ಯಾಧ್ಯಕ್ಷ ಟಿ.ನಸಿರುದ್ದೀನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಕೆ.ಅಹಮ್ಮದ್ ಶೆರೀಫ್ ಅವರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮೃತಪಟ್ಟ ಸಮಿತಿಯ ಮೂರು ಮಂದಿ ಸದಸ್ಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಗಳನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಶಾಸಕರುಗಳಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞರಾಮನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿನ್ ಕೋಳಿಕ್ಕರ, ಎ.ಕೆ.ಮೊಯ್ದೀನ್ ಕುಂಞ, ಎ.ಎ.ಅಸೀಸ್, ಟಿ.ಎ.ಇಲ್ಯಾಸ್, ಕೆ.ವಿ.ಬಾಲಕೃಷ್ಣನ್ ಉಪಸ್ಥಿತರಿದ್ದರು.




