ನಾಳೆ ಕನ್ನಡ ಮಾಧ್ಯಮ ಅಂಗನವಾಡಿ ಅಧ್ಯಾಪಕಿಯರ, ಸಹಾಯಕಿಯರ ಸಭೆ
0
ಮಾರ್ಚ್ 07, 2019
ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು-ಮಂಜೇಶ್ವರ ತಾಲೂಕು ವ್ಯಾಪ್ತಿಯ ಅಂಗನವಾಡಿಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸುವುದರೊಂದಿಗೆ ಮಲಯಾಳೀಕರಣಗೊಳಿಸುವ ಪಕ್ಷಪಾತ ನೀತಿಯ ವಿರುದ್ಧ ತೀವ್ರ ಹೋರಾಟ ನಡೆಸಲು ಅಂಗನವಾಡಿ ಕನ್ನಡ ಮಾಧ್ಯಮ ಅಧ್ಯಾಪಕಿ ಸಹಾಯಕಿಯರ ಸಂಘಟನೆ ತೀರ್ಮಾನಿಸಿದೆ.
ಪ್ರಸ್ತುತ ಎರಡು ತಾಲೂಕುಗಳಲ್ಲಿ ಕನ್ನಡ ಬಲ್ಲ ಅಂಗನವಾಡಿ ಮೇಲ್ವಿಚಾರಕಿಯರ ಹುದ್ದೆಯನ್ನು ಕನ್ನಡಿಗರಿಗೆ ಮೀಸಲಿರಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಿ ವಿಜ್ಞಾಪನೆ ಹೊರಡಿಸಲು ಬೇಕಾದ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ನಾಳೆ(ಮಾರ್ಚ್ 9) ಬೆಳಗ್ಗೆ 10 ಗಂಟೆಗೆ ಉಪ್ಪಳ ಕೈಕಂಬ ಪಂಚಮಿ ಹಾಲ್‍ನಲ್ಲಿ ಕನ್ನಡ ಮಾಧ್ಯಮ ಅಂಗನವಾಡಿ ಅಧ್ಯಾಪಕಿಯರ, ಸಹಾಯಕಿಯರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಬೃಹತ್ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಜರಗಿದ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಶೋಭಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮುಂದಾಳುಗಳಾದ ಎಸ್.ವಿ.ಭಟ್, ಟಿ.ಶಂಕರನಾರಾಯಣ ಭಟ್, ಭಾಸ್ಕರ ಕಾಸರಗೋಡು, ಅಧ್ಯಾಪಕಿಯರಾದ ಸಚಿತ, ಸುಜಾತ, ರೂಪಕಲ, ಭವ್ಯ, ಶಶಿಕಲ ಮೊದಲಾದವರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು. ಜಯಲಕ್ಷ್ಮಿ ವಂದಿಸಿದರು.




