ಪಿ.ಎಸ್.ಸಿ. ಯಿಂದ ಕನ್ನಡಿಗರ ಮೇಲೆ ಮತ್ತೆ ಮಲತಾಯಿ ಧೋರಣೆ
0
ಮಾರ್ಚ್ 14, 2019
ಕುಂಬಳೆ: ಕೇರಳ ಲೋಕಸೇವಾ ಆಯೋಗ(ಪಿ.ಎಸ್.ಸಿ.) ಇಲಾಖೆ ಕಾಸರಗೋಡಿನ ಕನ್ನಡಿಗರ ಮೇಲೆ ನಿರಂತರವಾಗಿ ಗದಾಪ್ರಹಾರ ಮಾಡುವುದರ ಮೂಲಕ ಇಲ್ಲಿನ ಕನ್ನಡ ಉದ್ಯೋಗಾರ್ಥಿಗಳಿಗೆ ನ್ಯಾಯವಾಗಿ ದೊರೆಯ ಬೇಕಾದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆಂದು ಕನ್ನಡ ಹೋರಾಟ ಸಮಿತಿ ಆರೋಪಿಸಿದೆ.
ರಾಜ್ಯದ ಹಲವು ಇಲಾಖೆಗಳ ಉದ್ಯೋಗಾರ್ಥಿಗಳ ನೇಮಕಾತಿಗಾಗಿ ಇಲಾಖೆ ನಡೆಸುವ ಪರೀಕ್ಷೆಗಳಿಗೆ ಅಪಾರ ಸಂಖ್ಯೆಯಲ್ಲಿ ಕನ್ನಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಅಭ್ಯರ್ಥಿಗಳಿಗೆ ಮಲಯಾಳ ಪ್ರಶ್ನೆ ಪತ್ರಿಕೆಯ ಕನ್ನಡ ಭಾಷಾಂತರ ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಗುತ್ತಿದೆ. ಆದರೆ ಹಲವು ಬಾರಿ ಕನ್ನಡ ಪ್ರಶ್ನೆ ಪತ್ರಿಕೆಗಳ ತಪ್ಪು ಮುದ್ರಣ ಮತ್ತು ಅದರ ಉತ್ತರದ ಮಾದರಿಗಳು ಪ್ರಶ್ನೆಗೆ ವಿರುದ್ಧ ರೀತಿಯಲ್ಲಿರುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗುವುದು ಸಹಜವಾಗಿದೆ.
ಇಂತಹ ತಪ್ಪುಗಳು ಸಂಭವಿಸಿದಾಗ ಕನ್ನಡ ಸಂಘ ಸಂಸ್ಥೆಗಳು ನೊಂದ ಪರೀಕ್ಷಾರ್ಥಿಗಳು ಸಂಬಂಧಪಟ್ಟವರ ಗಮನಕ್ಕೆ ಲಿಖಿತ ಮೂಲಕ ತಿಳಿಸಿದರೂ ಮತ್ತೆ ಅದೇ ರೀತಿಯಲ್ಲಿ ತಪ್ಪುಗಳು ಪುನರಾವರ್ತನೆಯಾಗುತ್ತಿದೆ. 2019 ಫೆ.23 ರಂದು ಎಲ್‍ಡಿ ಕ್ಲರ್ಕ್ ಸೆಕೆಂಡ್ ಗ್ರೇಡ್ ಅಸಿಸ್ಟೆಂಟ್ ಖಾದಿ ಮತ್ತು ಗ್ರಾಮ ಕೈಗಾರಿಕೆ ಬೋರ್ಡ್ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ತಪ್ಪುಗಳು ಮತ್ತೆ ಆವರ್ತನೆಯಾಗಿದೆ. ಇದು ಉದ್ದೇಶಪೂರ್ವಕವಾಗಿ ಕನ್ನಡ ಅಭ್ಯರ್ಥಿಗಳನ್ನು ರ್ಯಾಂಕ್ ಲಿಸ್ಟ್‍ನಲ್ಲಿ ಬಾರದ ಹಾಗೆ ಮಾಡುವ ವ್ಯವಸ್ಥಿತ ಸಂಚು ಮಾಡುಲಾಗುತ್ತಿದೆ ಎಂಬ ಆರೋಪವಿದೆ. ಕನ್ನಡ ಅಭ್ಯರ್ಥಿಗಳು ರ್ಯಾಂಕ್ ಲಿಸ್ಟ್‍ನಲ್ಲಿ ಇಲ್ಲದಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಎಲ್ಲಾ ಸರಕಾರಿ, ಅರೆ ಸರಕಾರಿ ಮತ್ತು ಇತರ ಇಲಾಖೆಗಳಲ್ಲಿ ಮಲಯಾಳಿ ನೌಕರರನ್ನು ಸುಲಭದಲ್ಲಿ ನೇಮಕಾತಿ ಮಾಡುವುದರ ಮೂಲಕ ಕನ್ನಡ ಭಾಷೆ, ಸಂಸ್ಕøತಿಯನ್ನು ನಾಶಮಾಡುವ ವ್ಯವಸ್ಥಿತ ಹುನ್ನಾರವಾಗಿದೆ.
ಈ ಬಗ್ಗೆ ಕನ್ನಡ ಹೋರಾಟ ಸಮಿತಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಮೂಲಕ ಸಮಗ್ರವಾದ ಮನವಿಯನ್ನು ಸಿದ್ಧ ಪಡಿಸಿ ಮುಖ್ಯಮಂತ್ರಿ, ಲೋಕಸೇವಾ ಆಯೋಗದ ಅಧ್ಯಕ್ಷರಿಗೆ ಸಲ್ಲಿಸುವುದರೊಂದಿಗೆ ವಿಧಾನಸಭೆಯಲ್ಲಿ ವಿಷಯ ಮಂಡನೆ ಮಾಡಲು ತೀರ್ಮಾನಿಸಿದೆ. ಈ ಕುರಿತು ತುರ್ತು ಗಮನ ಹರಿಸುವ ಕೆಲಸವನ್ನು ಮಾಡುವ ಭರವಸೆಯನ್ನು ಶಾಸಕರು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.




