ಕಾರ್ಯಕರ್ತನ ಮನವಿಗೆ ಪ್ರಧಾನಿಯ ಸ್ಪಂದನೆ-ರಾಷ್ಟ್ರ ವ್ಯಾಪಿ ಜನಪರವಾಗಿಸಲು ಕುಂಬಳೆಯಿಂದ ಸಲ್ಲಿಕೆಯಾದ ಮನವಿಗೆ ಶ್ಲಾಘನೆ
ಕುಂಬಳೆ: ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಅತಿ ಕಡಿಮೆ ವಾರ್ಷಿಕ ಪ್ರೀಮಿಯಂ ಮೊತ್ತದಲ್ಲಿ 2ಲಕ್ಷ ರೂ.ಗಳ ಜೀವ ವಿಮಾ ಸಂರಕ್ಷಣೆಯೊದಗಿಸುವ 2015ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಜೀವನ್ ಜ್ಯೋತಿ ವಿಮಾ ಯೋಜನೆಗೆ ಹೊಸ ಬದಲಾವಣೆಗೆ ಗಡಿನಾಡು ಕಾಸರಗೋಡು ನೀಡುವ ಮೂಲಕ ಗಮನ ಸೆಳೆದಿದೆ.
ಬ್ಯಾಂಕ್ ಉಲಿತಾಯ ಖಾತೆಯ ಮೂಲಕ ಪ್ರತಿವರ್ಷ ಕೇವಲ 330 ರೂ. ಪಾವತಿಸಿದರೆ ವಿಮಾ ಸಂರಕ್ಷಣೆ ಲಭಿಸುವ ಈ ಯೋಜನೆಗೆ ಸೇರ್ಪಡೆಗೊಳ್ಳಲು ವರ್ಷದಲ್ಲಿ ಒಮ್ಮೆ ಮಾತ್ರ ಅವಕಾಶವಿತ್ತು. ಯೋಜನೆಯ ಫಲಾನುಭವಿಗಳಾಗುವ ಆಸಕ್ತರಿಗೆ ಮೇ ತಿಂಗಳಲ್ಲಿ ಮಾತ್ರ ಅವಕಾಶವಿತ್ತು. ಮೇ ತಿಂಗಳು ತಪ್ಪಿಹೋದಲ್ಲಿ ಬಳಿಕ ಮುಮದಿನ ವರ್ಷದ ಮೇ ತಿಂಗಳವರೆಗೆ ಕಾಯಬೇಕಾದ ಸ್ಥಿತಿ ಈ ಮೊದಲಿತ್ತು.

ಈ ಸಮಸ್ಯೆಯ ಬಗ್ಗೆ ಕುಂಬಳೆ ಪಂಚಾಯತಿ ವ್ಯಾಪ್ತಿಯ ಸಕ್ರೀಯ ಬಿಜೆಪಿ ಕಾರ್ಯಕರ್ತ ಸುಜನಾ ಶಾಂತಿಪಳ್ಳ ಅವರು ಕಳೆದ ಫೆ.7 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದು ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಲ್ಲಿ ಸದಸ್ಯರಾಗಬಯಸುವ ನಾಗರಿಕರಿಗೆ ವರ್ಷದ ಎಲ್ಲಾ ದಿನಗಳಲ್ಲೂ ಸೇರ್ಪಡೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ನೀಡಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಮತ್ತು ಕೇಂದ್ರ ವಿತ್ತ ಸಚಿವಾಲಯವು ಸೂಕ್ತ ಮಾರ್ಪಾಡುಗಳೊಂದಿಗೆ ಈ ಯೋಜನೆಯಲ್ಲಿ ನಾಲ್ಕು ಹಂತಗಳಲ್ಲಿ ಯಾವುದೇ ಸಂದರ್ಭ ಸದಸ್ಯರಾಗಲು ಅವಕಾಶ ನೀಡಿರುವುದು ಉಲ್ಲೇಖಾರ್ಹವಾಗಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಉಳಿತಾಯ ಖಾತೆ ಹೊಂದಿರುವ 50 ವರ್ಷ ಹರೆಯದೊಳಗಿನ ವ್ಯಕ್ತಿಗಳು ಈ ವಿಮಾ ಯೋಜನೆಯ ಫಲಾನುಭವಿಗಳಾಗಬಹುದು. ಈ ಬಗ್ಗೆ ಪ್ರಧಾನಿಮಂತ್ರಿಗಳು ಕಾಸರಗೋಡಿನ ಕುಂಬಳೆಯಿಂದ ಸಮರ್ಪಿಸಲಾದ ಪುಟ್ಟ ಮನವಿಗೆ ಸ್ಪಂಧಿಸಿ ರಾಷ್ಟ್ರ ವ್ಯಾಪಿಯಾಗಿ ಉಪಯೋಗಕರವಾಗುವಂತೆ ಮಾಡಿರುವ ಮಾರ್ಪಾಟು ಶ್ಲಾಘನೆಗೊಳಗಾಗಿದೆ.