HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ನಿರಂತರ ಸಾಹಿತ್ಯ ಸಮಾಜ ಸೇವೆ ಮಾಡಿದ ಸಾರ್ಥಕ ವ್ಯಕ್ತಿತ್ವ ಕೇಳು ಮಾಸ್ತರ್ ಅಗಲ್ಪಾಡಿಯವರದ್ದು- ಶಾಸಕ ಎನ್.ಎ.ನೆಲ್ಲಿಕುನ್ನು ಬದಿಯಡ್ಕ : ಮನುಷ್ಯ ಸ್ನೇಹಕ್ಕೆ ಉತ್ತಮ ಉದಾಹರಣೆ ಕೇಳುಮಾಸ್ತರ್ ಅವರು. ಉತ್ತಮ ಸಾಮಾಜಿಕ ಮುಂದಾಳುವಾಗಿದ್ದ ಕೇಳು ಮಾಸ್ತರರು ಯಕ್ಷಗಾನ ಪ್ರೇಮಿ, ಕವಿ, ಸಾಹಿತಿ, ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅಪರೂಪದ ಸಾಧಕರಲ್ಲಿ ಒಬ್ಬರು. ಗಡಿನಾಡು ಕಾಸರಗೋಡಿನ ಸಮಸ್ಯೆಗಳ ನಡುವೆಯೂ ತನ್ನತನವನ್ನು ಉಳಿಸಿ ದೃಢವಾದ ಮುದ್ರೆಯೊತ್ತಿ ಪಕ್ಕನೆ ಮರೆಯಾಗಿ ಹೋದ ದ್ರುವನಕ್ಷತ್ರ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯ ಪಟ್ಟರು. ಅವರು ಮಾನ್ಯ ಜ್ಞಾನೋದಯ ಶಾಲೆಯಲ್ಲಿ ಭಾನುವಾರ ನಡೆದ ದಿ.ಕೇಳುಮಾಸ್ತರ್ ಅಗಲ್ಪಾಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು. ಸರಳ ಜೀವನದ ಮೂಲಕ ಮಾದರಿಯಾದ ಅರಿವಿನ ಕಣಜವೊಂದು ನಮ್ಮನ್ನು ಬಿಟ್ಟಗಲಿದೆ. ಉದಾತ್ತವಾದ ಜೀವನ ಸಂದೇಶವನ್ನು ನೀಡಿ ಮರೆಯಾದ ಮಾಸ್ತರರು ತೋರಿದ ದಾರಿಯಲ್ಲಿ ಮುನ್ನಡೆಯುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತು ಸದಸ್ಯರಾದ ನ್ಯಾಯವಾದಿ.ಕೆ. ಶ್ರೀಕಾಂತ್ ಅವರು, ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದರು. ಸಮಾಜದ ಅಗತ್ಯಗಳನ್ನು ಮನಗಂಡು ಸರಕಾರದ ಸವಲತ್ತುಗಳನ್ನು ಸಾಮಾನ್ಯ ಜನರು ಪಡೆದುಕೊಳ್ಳುವಲ್ಲಿ ನೆರವಾಗುತ್ತಿದ್ದರು. ಮಾನವೀಯತೆ ಮೂರ್ತಿವೆತ್ತ ಮನುಷ್ಯ ಸ್ನೇಹಿ ಮಾಸ್ತರರು ತನ್ನ ವೃತ್ತಿಯಿಂದ ನಿವೃತ್ತಿಯ ನಂತರವೂ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಾಹಿತ್ಯ ಕ್ಷೇತ್ರಕ್ಕೆ ಉನ್ನತವಾದ ಪುಸ್ತಕಗಳನ್ನು ನೀಡಿ, ಉತ್ತಮ ಮಾರ್ಗದರ್ಶಕರೂ ಆಗಿ ಮಾದರಿ ವ್ಯಕ್ತಿತ್ವವನ್ನು ತೋರ್ಪಡಿಸಿ ಎಲ್ಲರ ಮನಸಿನಲ್ಲಿಯೂ ಅಮರತ್ವವನ್ನು ಪಡೆದಿರುತ್ತಾರೆ. ಅವರ ಅಗಲುವಿಕೆ ತುಂಬಲಾಗದ ನಷ್ಟ ಎಂದು ದುಃಖ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಬದಿಯಡ್ಕ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ಮಾಸ್ತರರು ಜ್ಞಾನದಲ್ಲಿ ತುಂಬಿದಕೊಡ. ಐದು ಭಾಷೆಗಳಲ್ಲಿ ವ್ಯವಹರಿಸಬಲ್ಲ ಭಾಷಾಸಂಪನ್ನ. ಅತ್ಯಂತ ಶ್ರೇಷ್ಠವಾದ ಅಧ್ಯಾಪನ ವೃತ್ತಿಯಲ್ಲಿ ತೃಪ್ತಿ ಕಂಡುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಸರಿದಾರಿ ತೋರಿದ ಗುರು. ಸಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ವರ್ಣಬೇಧ ಮರೆತು ಕೆಲಸ ಮಾಡುತ್ತಿದ್ದರು. ಗ್ರಾಮ ಪ್ರದೇಶದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅಸಾಮಾನ್ಯ ಸಾಧನೆ ಮಾಡಿರುವ ಮಾಸ್ತರರು ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವದ ಮೂಲಕ ಹಲವರ ಪಾಲಿನ ದಾರಿದೀಪವಾದವರು. ನಿವೃತ್ತ ಬದುಕನ್ನು ವ್ಯರ್ಥ ಮಾಡದೆ ಸಾರ್ಥಕವಾಗುವ ಕೆಲಸಗಳನ್ನು ಮಾಡಿ ಮಾದರಿ ಜೀವನ ನಡೆಸಿದ್ದಾರೆ. ಸಮಾಜಕ್ಕಾಗಿ ತೆರೆದಿಟ್ಟ ಬದುಕಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮವಾದ ಹಲವಾರು ಕೃತಿಗಳನ್ನು ನೀಡಿ ತನ್ನ ಸರಳ ನಡವಳಿಕೆಯ ಮೂಲಕ ಮಾದರಿಯಾಗಿದ್ದಾರೆ. ಮಾಸ್ತರರು ಇನ್ನೂ ಕೆಲವು ಕಾಲ ಬದುಕಿರಬೇಕಿತ್ತು ಎಂದು ಹೇಳಿದರು. ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಪ್ರಬುದ್ಧ ಚಿಂತನೆಯ ಧೀಮಂತ ವ್ಯಕ್ತಿತ್ವವನ್ನು ಹೊಂದಿದ್ದ ಕೇಳು ಮಾಸ್ತರರು ಸಾಹಿತ್ಯ, ಸಮಾಜದೊಂದಿಗೆ ತನ್ನ ಸಮುದಾಯದ ಏಳಿಗೆಗಾಗಿಯೂ ಅವಿರತ ಸೇವೆ ಸಲ್ಲಿಸಿದ್ದಾರೆ. ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೇಳು ಮಾಸ್ತರ್ ಅಗಲ್ಪಾಡಿ 12 ವರುಷ ಸಮುದಾಯಕ್ಕೆ ಬೇಕಾಗಿ ಒಟ್ಟಿಗೆ ಕೆಲಸ ಮಾಡಿದ್ದು ಅವರೊಂದಿಗಿನ ಒಡನಾಟ ಜೀವನದಲ್ಲಿ ನೀಡಿದ ಅನುಭವ ಅಪಾರವಾದುದು ಎಂದು ಗಂಗಾಧರ ಮಣಿಯಾಣಿ ನೆಲ್ಲಿತ್ತಲ ತನ್ನ ಅನುಭವವನ್ನು ಹಂಚಿಕೊಂಡರು. ಶ್ರದ್ಧಾಂಜಲಿ ಸಭೆಯಲ್ಲಿ ಮಾನ್ಯ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಮಾನ್ಯ ಸಭೆಯ ಅಧ್ಯಕ್ಷತೆವಹಿಸಿದ್ದರು. ಬದಿಯಡ್ಕ ಪಂಚಾಯತು ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಬದಿಯಡ್ಕ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮೇಗಿನಡ್ಕ, ಖಾದರ್ ಮಾನ್ಯ, ರಾಮಚಂದ್ರ, ಸುಧಾಮ ಗೋಸಾಡ, ಕಾರ್ಮಾರ್ ದೇವಸ್ಥಾನದ ಆಡಳಿತ ಮೊಕ್ತೇಸರ ನರಸಿಂಹ ಭಟ್, ನಾರಾಯಣ ಮಾಸ್ತರ್, ವೆಂಕಪ್ಪ ಶೆಟ್ಟಿ, ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಸದಸ್ಯರುಗಳಾದ ಮಂಜುನಾಥ ಡಿ.ಮಾನ್ಯ, ಮತ್ತು ಮಹೇಶ್ ಭಟ್ ವಳಕ್ಕುಂಜ, ಕುಂಞಪ್ಪು ಗುರುಸ್ವಾಮಿ ಮಾನ್ಯ, ರಾಮ ಕಾರ್ಮಾರ್, ಮಧುಚಂದ್ರ ಮಾನ್ಯ, ರವಿಶಂಖರ್.ಎಂ.ಬಿ, ನಿವೃತ್ತ ಎಸ್‍ಐ ರಾಧಾಕೃಷ್ಣ, ವ್ಯಾಪಾರಿ ವ್ಯವಸಾಯಿ ಬದಿಯಡ್ಕ ಘಟಕದ ಗಣೇಶ್ ಬದಿಯಡ್ಕ, ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ಜಿ.ಎಂ.ಆಚಾರ್ಯ ಮುಂತಾದವರು ಶ್ರದ್ಧಾಂಜಲಿ ಸಮರ್ಪಿಸಿದರು. ವಿವಿಧ ರಾಜಕೀಯ ನೇತಾರರು, ಸಾಮಾಜಿಕ ಮುಖಂಡರು ಹಾಗೂ ಮಾಸ್ತರರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂತಾಪ ವ್ಯಕ್ತಪಡಿಸಿದರು. ಸಂಘಟಕ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ವಿಜಯಕುಮಾರ್ ಮಾನ್ಯ ವಂದಿಸಿದರು. ..................................................................................................................... ಪ್ರತಿವರ್ಷ ಮಾಸ್ತರರು ಕಣ್ಮರೆಯಾದ ದಿನವಾದ ಮಾರ್ಚ್ 8ರಂದು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ವತಿಯಿಂದ ಸಾಹಿತ್ಯರಂಗದಲ್ಲಿ ಉನ್ನತ ಸಾಧನೆಮಾಡಿದ ಸಾಧಕರಿಗೆ ಕೇಳುಮಾಸ್ತರ್ ಸ್ಮಾರಕ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು. ಮುಂದಿನ ವರ್ಷದಿಂದ ಇದು ಚಾಲ್ತಿಗೆ ಬರಲಿದೆ.ಸಾಹಿತ್ಯ, ಸಮಾಜ ಸೇವೆ, ಧಾರ್ಮಿಕ ರಂಗಗಳಲ್ಲಿ ಕಾರ್ಯನಿರ್ವಹಿಸಿದ ಅಪ್ರತಿಮ ಸಾಧಕರಿಗೆ ಮಾಸ್ತರರ ಸ್ಮರಣೆಯಲ್ಲಿ ನಗದು, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ಅಖಿಲೇಶ್ ನಗುಮುಗಂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries