ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸಭೆಯಲ್ಲಿ ಅಗಲಿದ ಅಧ್ಯಾಪಕರಿಗೆ ಶ್ರದ್ಧಾಂಜಲಿ:
0
ಮಾರ್ಚ್ 11, 2019
ಮಂಜೇಶ್ವರ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪ ಜಿಲ್ಲಾ ಘಟಕದ ಸಭೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಉತ್ತಮ ಸಂಘಟಕ, ಸ್ನೇಹ ಜೀವಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ, ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದ, ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ಬಾಕ್ರಬೈಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಂಧಕ ಪಿ. ಮೋಹನ್ ರಾವ್ ಹಾಗೂ ಕಾಸರಗೋಡಿನ ಹಿರಿಯ ಸಾಹಿತಿ, ವಿಮರ್ಶಕ, ಧಾರ್ಮಿಕ ಮುಂದಾಳು, ಸಮಾಜ ಸೇವಕ ಕೇಳು ಮಾಸ್ಟರ್ ಅಗಲ್ಪಾಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಮಿತಿ ಸದಸ್ಯರೂ, ಮೀಯಪದವು ಪ್ರೌಢಶಾಲೆಯ ಅಧ್ಯಾಪಕರೂ ಆದ ರಾಜಾರಾಮ ರಾವ್‍ರವರು ನುಡಿನಮನವನ್ನು ಸಲ್ಲಿಸಿದರು. ಮಾ. 24 ರಂದು ಕಾಸರಗೋಡು ಬೀರಂತಬೈಲ್'ನಲ್ಲಿರುವ ಅಧ್ಯಾಪಕ ಭವನದಲ್ಲಿ ನಡೆಯುವ ನಿವೃತ್ತರಾಗಲಿರುವ ಕನ್ನಡ ಮಾಧ್ಯಮ ಅಧ್ಯಾಪಕರ ವಿದಾಯ ಕೂಟ ಸಮಾರಂಭವನ್ನು ಯಶಸ್ವಿಗೊಳಿಸಲು ಕರೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪ ಜಿಲ್ಲಾ ಸಮಿತಿಯ ಅಧ್ಯಕ್ಷೆ ಶಶಿಕಲಾ ಟೀಚರ್ ವಹಿಸಿದ್ದರು. ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಕೋಶಾಧಿಕಾರಿ ನಯನಪ್ರಸಾದ್ ಎಚ್. ಟಿ ವಂದಿಸಿದರು.




